Advertisement

Political Campaign: ಬಳ್ಳಾರಿಯಲ್ಲಿ ಬಿಜೆಪಿ ಮುಂದಿನ ಸಮಾವೇಶ ?

01:16 AM Aug 12, 2024 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಟೊಂಕ ಕಟ್ಟಿ ನಿಂತಿರುವ ವಿಪಕ್ಷ ಬಿಜೆಪಿ, ಮುಡಾ ನಿವೇಶನ ಹಂಚಿಕೆ ಸೇರಿ ವಿವಿಧ ಆರೋಪಗಳನ್ನು ಹೊರಿಸಿ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ ಮಾಡಿ ಕಾರ್ಯಕರ್ತರನ್ನು ಹುರಿಗೊಳಿಸಿದ್ದು, ಈ ಹೋರಾಟವನ್ನು ಜಿಲ್ಲಾ ಮಟ್ಟಕ್ಕೆ ಒಯ್ಯಲು ಚಿಂತನೆ ನಡೆಸಿದೆ.

Advertisement

ಸಿಎಂ ಕುಟುಂಬಕ್ಕೆ ಮುಡಾ ನಿವೇಶನ ಹಂಚಿಕೆಯಾಗಿರುವ ಆರೋಪದ ಜತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ವರ್ಗಾವಣೆ, ಗ್ಯಾರಂಟಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ವರ್ಗಾವಣೆ ಸೇರಿ ಹಲವು ಪ್ರಕರಣಗಳನ್ನು ಜನರಿಗೆ ತಿಳಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಜನ ಜಾಗರಣ ಕಾರ್ಯಕ್ರಮ ರೂಪಿಸಲು ಮುಂದಾಗಿದೆ.

ಇದಕ್ಕಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಶೀಘ್ರದಲ್ಲೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಚರ್ಚೆಗಳಿದ್ದು, ಸೋಮವಾರ ವಿಜಯೇಂದ್ರ ಅವರು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುವುದರಿಂದ ಮಂಗಳವಾರ ಸಭೆ ನಡೆಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ.

ಮೈಸೂರು ಚಲೋ ಯಶಸ್ವಿಯಾದ ಬೆನ್ನಲ್ಲೇ ಕಾರ್ಯಕರ್ತರಲ್ಲಿ ನವ ಚೈತನ್ಯ ತುಂಬಿದಂತಾಗಿದ್ದು, ಪಕ್ಷದ ನಾಯಕತ್ವಕ್ಕೆ ಹೊಸ ಹುರುಪು ಸಿಕ್ಕಂತಾಗಿದೆ. ಈ ಕಾವು ಇಳಿಯದಂತೆ ನೋಡಿಕೊಂಡು, ಜನ ಜಾಗರಣ ಕಾರ್ಯಕ್ರಮವನ್ನೂ ಯಶಸ್ವಿಗೊಳಿಸುವ ರೂಪುರೇಷೆ ಸದ್ಯದಲ್ಲೇ ಸಿದ್ಧಗೊಳ್ಳಲಿದೆ.

ರಾಷ್ಟ್ರಪತಿ ಭೇಟಿಗೂ ಚಿಂತನೆ:
ಅಷ್ಟೇ ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡುತ್ತಿರುವ ಸರಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಕೈಗೊಳ್ಳಲು ಗಂಭೀರ ಆಲೋಚನೆ ನಡೆದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ರಾಜ್ಯ ಸರಕಾರದ ವಿರುದ್ಧ ದೂರು ನೀಡುವ ಕುರಿತೂ ಪಕ್ಷದೊಳಗೆ ಚಿಂತನ-ಮಂಥನ ನಡೆದಿದೆ.

Advertisement

ಮಾಸಾಂತ್ಯಕ್ಕೆ ಬಳ್ಳಾರಿ ಸಮಾವೇಶ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣವನ್ನು ಮುಂದಿಟ್ಟುಕೊಂಡು ಆಗಸ್ಟ್‌ ಮಾಸಾಂತ್ಯ ಅಥವಾ ಸಪ್ಟೆಂಬರ್‌ ತಿಂಗಳ ಆರಂಭದಲ್ಲಿ ಬಳ್ಳಾರಿಯಲ್ಲಿ ಸಮಾವೇಶ ನಡೆಸುವ ಯೋಜನೆಯೂ ಇದೆ. ಪ್ರಮುಖವಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಬಿ.ನಾಗೇಂದ್ರ ಹೆಸರು ಪ್ರಕರಣದಲ್ಲಿ ಕೇಳಿಬಂದಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರೂ ಎಸ್‌ಐಟಿ ತನಿಖೆ ದಾರಿ ತಪ್ಪುತ್ತಿದೆ ಎನ್ನುವ ಸಂಶಯ ಮೂಡಿದೆ. ಹೀಗಾಗಿ ಬಳ್ಳಾರಿಯಲ್ಲಿ ಸಮಾವೇಶ ನಡೆಸಿ ಜನಾಭಿಪ್ರಾಯ ಮೂಡಿಸಲು ಬಿಜೆಪಿ ವೇದಿಕೆ ಸಜ್ಜುಗೊಳಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next