Advertisement
ಜಾತಿವಾರು ಜನಗಣತಿಯ ಹೋರಾಟದ ಬಿಸಿ ಮುಂದಿನ ವಿಧಾನಸಭೆ ಚುನಾವಣೆವರೆಗೂ ಕಾಯ್ದಿಟ್ಟುಕೊಂಡು ಆಡಳಿತಾರೂಢ ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ ಕಾರ್ಯ ತಂತ್ರ ರೂಪಿಸಿದೆ. ವಿಧಾನಸಭೆ ಚುನಾವಣೆಗೆ ವರ್ಷ ಬಾಕಿ ಇರುವಾಗ ಈ ಹೋರಾಟಕ್ಕೆ ಸಿದ್ದರಾಮಯ್ಯ “ರಂಗಪ್ರವೇಶ’ ಮಾಡಲಿದ್ದು ಈಗಾಗಲೇ ರೂಪು-ರೇಷೆ ಸಿದ್ಧಗೊಂಡಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
Related Articles
Advertisement
ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಿದ್ಧಪಡಿಸಿರುವ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆಯ ವರದಿ ಸರ್ಕಾರ ಒಪ್ಪಿಕೊಂಡರೂ ಕಷ್ಟ, ತಿರಸ್ಕಾರ ಮಾಡಿದರೂ ಕಷ್ಟ. ವರದಿ ಬಿಡುಗಡೆಯಾದರೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಬೇಡಿಕೆ ಹೆಚ್ಚಾಗುತ್ತದೆ. ಜತೆಗೆ, ರಾಜಕೀಯವಾಗಿ ಇಂತಿಷ್ಟು ಸೀಟು ಕೊಡಿ ಎಂಬ ಆಗ್ರಹವೂ ಶುರುವಾಗಲಿದೆ. ಹೀಗಾಗಿ, ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಮತ ಬ್ಯಾಂಕ್ ಗುರಿಯಾಗಿಟ್ಟುಕೊಂಡು ಇಂತದ್ದೊಂದು ಹೋರಾಟ ಸಿದ್ದರಾಮಯ್ಯ ಅಣತಿ ಮೇರೆಗೆ ನಡೆಯುತ್ತಿದ್ದು,ಮುಂದಿನ ದಿನಗಳಲ್ಲಿ ಇದರ ಜತೆಗೆ ಅಲ್ಪ ಸಂಖ್ಯಾತರ ಹಾಗೂ ದಲಿತರ ಮೀಸಲಾತಿ ವಿಚಾರವೂ ಸೇರಿಕೊಳ್ಳಲಿದೆ. ಆಗ ಒಟ್ಟಾರೆ ಹೋರಾಟದ ಸ್ವರೂಪವೇ ಬದಲಾಗಲಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ಕಾರ್ಯ ತಂತ್ರಕ್ಕೆ ತಿರುಗೇಟು ನೀಡಲು ಬಿಜೆಪಿಯೂ ತಮ್ಮದೇ ಆದ ತಂತ್ರಗಾರಿಕೆ ರೂಪಿಸಿದ್ದು, ಪ್ರಾರಂಭದಲ್ಲೇ ಸಚಿವರು ಹಾಗೂ ಪಕ್ಷದ ನಾಯಕರ ಮೂಲಕ ಜಾತಿ ಜನಗಣತಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಮುಗಿಬೀಳುತ್ತಿದೆ. ರಾಜಕೀಯ ಲಾಭ ಪಡೆಯದಂತೆ ನೋಡಿಕೊಳ್ಳಲು ಮುಂದಾಗಿದೆ. ಆದರೆ, ಜೆಡಿಎಸ್ ಮೌನವಹಿಸಿದ್ದು ಕಾದು ನೋಡುವ ತಂತ್ರ ಆನುಸರಿಸುತ್ತಿದೆ.
ಎಸ್.ಲಕ್ಷ್ಮೀ ನಾರಾಯಣ