ಬೆಂಗಳೂರು: ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದ ಬಳಿಕ ಪರಸ್ಪರ ಮುನಿಸು ಮರೆತು ಮುಖಾಮುಖೀಯಾದ ಶಾಸಕ ಬಿ.ಕೆ. ಹರಿಪ್ರಸಾದ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಸಮಾಲೋಚನೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಿಷಯ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಮಾತಿನಿಂದ ತಿವಿಯುತ್ತಲೇ ಇದ್ದ ಬಿ.ಕೆ. ಹರಿಪ್ರಸಾದ್, ಅವಕಾಶ ಸಿಕ್ಕಾಗಲೆಲ್ಲ ಚಾಟಿ ಬೀಸುತ್ತಲೇ ಇದ್ದರು. ಪಕ್ಷದೊಳಗೆ ಹಿಂದುಳಿದ ವರ್ಗದ ಇಬ್ಬರು ಮುಖಂಡರು ಪರಸ್ಪರ ಅಂತರ ಕೂಡ ಕಾಯ್ದುಕೊಂಡಿದ್ದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿಲ್ಲಿಗೆ ತೆರಳಿ ಹೈಕಮಾಂಡ್ ಭೇಟಿಯಾದ ಸಂದರ್ಭದಲ್ಲೇ ಹರಿಪ್ರಸಾದ್ ಕೂಡ ಹೈಕಮಾಂಡ್ ಭೇಟಿ ಮಾಡಿ ರಾಜ್ಯ ರಾಜಕೀಯ ವಿದ್ಯಮಾನಗಳ ವರದಿ ಒಪ್ಪಿಸಿದ್ದರು. ಸಿಎಂ, ಡಿಸಿಎಂ ಕರ್ನಾಟಕಕ್ಕೆ ಮರಳಿದ್ದರೂ ಹರಿಪ್ರಸಾದ್ ಮಾತ್ರ ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದರು.
ಇದೆಲ್ಲದರ ನಡುವೆ ಮೈಸೂರಿನಿಂದ ಸಿಎಂ ಸಿದ್ದರಾಮಯ್ಯ ಬುಧವಾರ ಮಧ್ಯಾಹ್ನ ದಿಢೀರನೇ ಬೆಂಗಳೂರಿಗೆ ಆಗಮಿಸಿದ್ದರು. ಈ ಮಧ್ಯೆ ಸಮಾಜ ಕಲ್ಯಾಣ ಸಚಿವ ಡಾ| ಎಚ್.ಸಿ. ಮಹದೇವಪ್ಪ ಅವರು ಮೈಸೂರು ಸಮಾವೇಶಕ್ಕೆ ಬರುವಂತೆ ಆಹ್ವಾನ ನೀಡಿದರು. ಬಳಿಕ ಸಿಎಂ ಕೂಡ ಹರಿಪ್ರಸಾದ್ ಅವರಿಗೆ ದೂರವಾಣಿ ಕರೆ ಮಾಡಿಸಿ, ಕಾವೇರಿ ನಿವಾಸಕ್ಕೆ ಕರೆಯಿಸಿಕೊಂಡಿದ್ದಾರೆ.
ರಾಜ್ಯ ಸರಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ರಾಜಕೀಯ ಹೋರಾಟ ಹಾಗೂ ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಜನಾಂದೋಲನ ಸಭೆಗಳ ಕುರಿತು ಹರಿಪ್ರಸಾದ್‌ರೊಂದಿಗೆ ವಿಸ್ತೃತವಾಗಿ ಚರ್ಚಿಸಿದ ಸಿಎಂ, ಆ.10ರಂದು ಮೈಸೂರಿನಲ್ಲಿ ನಡೆಸಲು ಉದ್ದೇಶಿಸಿರುವ ಜನಾಂದೋಲನ ಸಭೆಯ ಸಮಾರೋಪಕ್ಕೆ ಆಹ್ವಾನಿಸಿದರು.