Advertisement

ಇನ್ನು ಮಸ್ಕಿಯಲ್ಲೇ ಶಕ್ತಿ ಪ್ರದರ್ಶನ!

08:12 PM Mar 10, 2021 | Team Udayavani |

ಮಸ್ಕಿ: ಮಾಜಿ ಸಂಸದ, ಈ ಭಾಗದಲ್ಲಿ ಪ್ರಭಾವಿ ನಾಯಕ ಎನಿಸಿದ ಕೆ. ವಿರೂಪಾಕ್ಷಪ್ಪ ಕಾಂಗ್ರೆಸ್‌ ತೊರೆದು ಸಾಂಕೇತಿಕವಾಗಿ ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆದರೆ ಅಧಿ  ಕೃತವಾಗಿ ಬಹಿರಂಗ ಶಕ್ತಿ ಪ್ರದರ್ಶನ ಮೂಲಕ ಮಸ್ಕಿಯಲ್ಲೇ ಪಕ್ಷ ಸೇರ್ಪಡೆಗೆ ಮಾ.20ರಂದು ಮುಹೂರ್ತ ನಿಗದಿ ಮಾಡಲಾಗಿದೆ.

Advertisement

ಮಸ್ಕಿ ಕ್ಷೇತ್ರ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಲ್ಲಿರುವ ಹಲವು ಘಟಾನುಘಟಿ ನಾಯಕರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಸ್ಥಳೀಯ ಮತ್ತು ರಾಜ್ಯಮಟ್ಟದ ನಾಯಕರು ಹಲವು ತಿಂಗಳಿಂದ ಈ ಪ್ರಯತ್ನದಲ್ಲಿದ್ದರು. ಇದರ ಮೊದಲ ಭಾಗವಾಗಿ ಈಗ ಕೊಪ್ಪಳ ಮಾಜಿ ಸಂಸದ, ಕುರುಬ ಸಮಾಜದ ಪ್ರಭಾವಿ ಮುಖಂಡ ಹಾಗೂ ಸಿಂಧನೂರಿನ ಹಿರಿಯ ರಾಜಕಾರಣಿ ಕೆ. ವಿರೂಪಾಕ್ಷಪ್ಪ ಅವರನ್ನು ಬಿಜೆಪಿಯತ್ತ ಸೆಳೆಯಲಾಗಿದೆ. ಮಂಗಳವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಾಂಕೇತಿಕವಾಗಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಇವರು ತಮ್ಮ ಬೆಂಬಲಿಗರೊಡನೆ ಪಕ್ಷ ಸೇರ್ಪಡೆಗೆ ಮಸ್ಕಿ ಯಲ್ಲೇ ಬೃಹತ್‌ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ ಬಿಜೆಪಿಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ನೀಡಿದ್ದು, ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಕೂಡ ಇದಕ್ಕೆ ಸಮ್ಮತಿಸಿದ್ದಾರೆ.

ಮಾ.20ರಂದು ಕಾರ್ಯಕ್ರಮ: ಮಸ್ಕಿಯಲ್ಲೇ ಮಾ.20ರಂದು ಈ ಬೃಹತ್‌ ಕಾರ್ಯಕ್ರಮ ಆಯೋಜನೆಗೆ ಪೂರಕ ಸಿದ್ಧತೆಗಳು ನಡೆದಿವೆ. ಮಸ್ಕಿ ಪಟ್ಟಣದ ಹೃದಯ ಭಾಗ ಪೊಲೀಸ್‌ ಠಾಣೆ ಪಕ್ಕದಲ್ಲೇ ಕಾರ್ಯಕ್ರಮ ಆಯೋಜಿಸುವ ಚರ್ಚೆಗಳು ನಡೆದಿದ್ದು, ಇದಕ್ಕೆ ಸಿಎಂ ಯಡಿಯೂರಪ್ಪ ಅವರನ್ನೇ ಕರೆಸುವ ಚಿಂತನೆ ನಡೆದಿದೆ. ಪಕ್ಷ ಸೇರ್ಪಡೆ ಹಾಗೂ ಚುನಾವಣೆ ಪ್ರಚಾರದ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಇದೇ ವೇದಿಕೆ ಬಳಸಿಕೊಳ್ಳಲು ಸಿದ್ಧತೆ ನಡೆದಿದೆ. ಕಾರ್ಯಕ್ರಮ ಆಯೋಜನೆಗೆ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಒಪ್ಪಿಗೆ ನೀಡಿದ್ದಾರೆ. ಆದರೆ ಸಿಎಂ ಯಡಿಯೂರಪ್ಪ ಅವರಿಂದ ಅಂತಿಮ ಮುದ್ರೆಯೊಂದೇ ಬಾಕಿ ಇದೆ ಎನ್ನುತ್ತವೆ ಬಿಜೆಪಿ ಮೂಲಗಳು.

ಮತಗಳ ಲೆಕ್ಕಾಚಾರ: ಕೆ. ವಿರೂಪಾಕ್ಷಪ್ಪ ಸಿಂಧನೂರು ರಾಜಕಾರಣಕ್ಕಿಂತ ಈಗ ಮಸ್ಕಿ ರಾಜಕಾರಣದ ಲೆಕ್ಕಾಚಾರದ ಮೇಲೆ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎನ್ನುವ ವಿಶ್ಲೇಷಣೆಗಳು ನಡೆದಿವೆ. ಇವರನ್ನು ಕರೆತಂದರೆ ಕುರುಬ ಸಮಾಜ ಸೇರಿ ಹಿಂದುಳಿದ ವರ್ಗದ ಮತಗಳು ಬಿಜೆಪಿಯತ್ತ ವಾಲುತ್ತವೆ ಎನ್ನುವ ಲೆಕ್ಕಾಚಾರ ಪಕ್ಷ ಸೇರ್ಪಡೆ ಹಿಂದಿದೆ ಎನ್ನಲಾಗುತ್ತಿದೆ. ಈ ಹಿಂದೆ 2018ರ ವಿಧಾನಸಭೆ ಚುನಾವಣೆಯಲ್ಲೂ ಆಗ ಬಿಜೆಪಿಯಲ್ಲಿದ್ದ ಕೆ. ವಿರೂಪಾಕ್ಷಪ್ಪ ಇಲ್ಲಿನ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಒತ್ತಾಯದ ಮೇಲೆ ಆಗ ಕಾಂಗ್ರೆಸ್‌ ಸೇರಿ ಪ್ರತಾಪಗೌಡ ಪಾಟೀಲ್‌ ಗೆಲುವಿಗೆ ಸಹಕರಿಸಿದ್ದರು. ಇಂಥಹದ್ದೇ ಲೆಕ್ಕಾಚಾರ ಈ ಬಾರಿಯೂ ಕೈ ಹಿಡಿಯಲಿದೆ ಎನ್ನುವ ಅಂದಾಜಿನ ಮೇಲೆ ಬಿಜೆಪಿ ಈ ಪ್ರಯತ್ನ ಮಾಡಿದೆ ಎನ್ನಲಾಗುತ್ತಿದೆ.

ನಿಗಮ ಮಂಡಳಿ ಫಿಕ್ಸ್‌

Advertisement

ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಬಿಜೆಪಿ ಸೇರ್ಪಡೆ ಬಗ್ಗೆ ಪರ-ವಿರೋಧ ಚರ್ಚೆಗಳು ಮಸ್ಕಿ ಕ್ಷೇತ್ರಾದ್ಯಂತ ಅವರ ಹಿಂಬಾಲಕರಲ್ಲಿ

ನಡೆದಿವೆ. ಮತ್ತೂಂದು ಗಮನಾರ್ಹ ಸಂಗತಿ ಎಂದರೆ ಈಗ ಪಕ್ಷ ಸೇರ್ಪಡೆ ಹಿಂದಿನ ಮರ್ಮವೇನು ಎನ್ನುವ ಸಂಗತಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸ್ವತಃ ಬಿಜೆಪಿ ಮೂಲಗಳೇ ಹೇಳುವ ಪ್ರಕಾರ ಸದ್ಯ ಬಿಜೆಪಿ ಸರ್ಕಾರದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದು ಖಚಿತ. ಚಿತ್ರದುರ್ಗ ಜಿಲ್ಲೆ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರಿಗೆ ಹಂಚಿಕೆಯಾಗಿದ್ದ ದೇವರಾಜ ಅರಸು ನಿಗಮ ಮಂಡಳಿ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರಿಗೆ ಹಂಚಿಕೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ ಈ ನಿಗಮ ಮಂಡಳಿ ಜವಾಬ್ದಾರಿ ತಾವು ವಹಿಸಿಕೊಳ್ಳದೇ ತಮ್ಮ ಅಳಿಯ ಎಂ. ದೊಡ್ಡಬಸವರಾಜ ಅವರಿಗೆ ನೀಡಲು ವಿರೂಪಾಕ್ಷಪ್ಪ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.

ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next