Advertisement

ಸಿದ್ದು ಬೆನ್ನು ಬಿದ್ದ ಕಾಂಗ್ರೆಸ್‌ ಪಡೆ

08:19 PM Mar 10, 2021 | Team Udayavani |

ಸಿಂಧನೂರು: ಕುರುಬ ಸಮುದಾಯದ ಪ್ರಭಾವಿ ಮುಖಂಡ ಕೆ. ವಿರೂಪಾಕ್ಷಪ್ಪ ಬಿಜೆಪಿ ಸೇರುತ್ತಿದ್ದಂತೆ ಕಾಂಗ್ರೆಸ್‌ ಪಕ್ಷಕ್ಕೆ ಆಗಲಿರುವ ಹಾನಿ ತಪ್ಪಿಸಲು ಮಸ್ಕಿ ಉಪ ಚುನಾವಣೆ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಪ್ರತಿಯಾಗಿ ಕಾಂಗ್ರೆಸ್‌ ಪಾಳಯದಲ್ಲೂ ಲೆಕ್ಕಾಚಾರ ಗರಿಗೆದರಿವೆ.

Advertisement

ಉಪ ಚುನಾವಣೆ ಘೋಷಣೆಯಾದರೆ ಬರೋಬ್ಬರಿ ಒಂದು ವಾರ ಕಾಲ ಕಾಂಗ್ರೆಸ್‌ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸ್ಥಳೀಯವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ಚುರುಕು ಪಡೆದಿವೆ. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರ ರಾಜಕೀಯ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು ಕಾಂಗ್ರೆಸ್‌ನಲ್ಲಿ ರಾಜಕೀಯ ತಾಲೀಮು ಆರಂಭಗೊಂಡಿದೆ. ಪ್ರಬಲ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಉಭಯ ಪಕ್ಷಗಳು ಆಯಾ ಸಮುದಾಯದ ಮುಖಂಡರ ಬೆನ್ನು ಬಿದ್ದಿವೆ.

ಹೊಸ ಲೆಕ್ಕಾಚಾರ?: ಈವರೆಗೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಕಾಂಗ್ರೆಸ್‌ನಲ್ಲಿದ್ದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಅವರನ್ನು ಬಳಸಿಕೊಳ್ಳುವ ಕುರಿತು ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ ಆರ್‌. ಬಸನಗೌಡ ಪ್ರಯತ್ನದಲ್ಲಿದ್ದರು. ರಾಯಚೂರು ಜಿಲ್ಲೆಯ ನಾನಾ ಕ್ಷೇತ್ರದ ನಾಯಕರು ಕೈ ಜೋಡಿಸಿದ್ದರು. ಇದೀಗ ಲೆಕ್ಕಾಚಾರವೇ ಉಲ್ಟಾ ಆದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ರಾಜಕೀಯ ತಂತ್ರ ಬದಲಾಗಿವೆ. ಈವರೆಗೆ ಮಾಜಿ ಸಂಸದ ಹಾಗೂ ಮಾಜಿ ಶಾಸಕ ಬಾದರ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದ ವೇದಿಕೆಯಲ್ಲಿ ಇದೀಗ ಕೆ. ಕರಿಯಪ್ಪ ಅವರಸ್ಥಾನ ಭರ್ತಿಯಾಗತೊಡಗಿದೆ. ಲಿಂಗಾಯತ ಹಾಗೂ ಕುರುಬ ಸಮುದಾಯದ ಮತ  ಸೆಳೆಯಲು ಹೊಸ ಜೋಡಿ ಸನ್ನದ್ಧವಾಗಿದ್ದು, ಆ ಮೂಲಕ ಬಿಜೆಪಿಗೆ ತಿರುಗೇಟು ನೀಡುವ ತಂತ್ರ ಹೆಣೆಯಲಾಗುತ್ತಿದೆ.

ಸಿದ್ದರಾಮಯ್ಯ ವಾಸ್ತವ್ಯಕ್ಕೆ ಸಿದ್ಧತೆ: ಆಪರೇಷನ್‌ ಬಿಜೆಪಿ ವಿರುದ್ಧ ಸತತ ಹೋರಾಟ ನಡೆಸಿ ಅವರ ವಿರುದ್ಧ ಹರಿಹಾಯ್ದ ಕಾಂಗ್ರೆಸ್‌ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಮರ್ಥವಾಗಿ ಬಳಸಿಕೊಳ್ಳಲು ಮಸ್ಕಿ ಅಖಾಡದಲ್ಲಿ ಸಿದ್ಧತೆ ನಡೆದಿವೆ. ಉಪ ಚುನಾವಣೆ ಘೋಷಣೆಯಾದರೆ ಒಂದು ವಾರದ ಕಾಲ ಕ್ಷೇತ್ರದಲ್ಲಿ ಬಿಡಾರ ಹೂಡಿ ಪ್ರಚಾರ ನಡೆಸಲು ಅನುಕೂಲವಾಗುವಂತೆ ಮಾಡಲು ಪ್ರಯತ್ನ ನಡೆದಿವೆ. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ. ಕರಿಯಪ್ಪ ಅವರೊಂದಿಗೆ ಈ ಕುರಿತು ಮಾತುಕತೆ ನಡೆದಿದ್ದು, ಅವರು ಈಗಾಗಲೇ ಮಸ್ಕಿ ಅಖಾಡದಲ್ಲಿ ಬಲಾಡ್ಯ ಪ್ರಚಾರಕ್ಕೆ ಭೂಮಿಕೆ ರೂಪಿಸುತ್ತಿದ್ದಾರೆಂಬ ಮಾಹಿತಿ ಹೊರಬಿದ್ದಿದೆ. ಇದಕ್ಕೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸಾಥ್‌ ನೀಡಿದ್ದು, ಕಳೆದ ಕೆಲ ದಿನಗಳಿಂದ ಒಂದೇ ಕಾರಿನಲ್ಲಿ ಅವರ ಪ್ರಚಾರಾರ್ಥ ಪ್ರಯಾಣ ಸಾಗಿರುವುದು ಇದಕ್ಕೆ ಪುಷ್ಟಿ ನೀಡಿದೆ.

ಬಸನಗೌಡಗೆ ಭರ್ಜರಿ ಕರೆ: ಕಳೆದ 15 ದಿನಗಳ ಹಿಂದೆ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಆರ್‌. ಬಸನಗೌಡ ತುರುವಿಹಾಳ ಜಿಲ್ಲೆಯ ಕಾಂಗ್ರೆಸ್‌ ಮುಖಂಡರ ಬೆನ್ನು ಬಿದ್ದು ಪ್ರಚಾರಕ್ಕೆ ಆಹ್ವಾನಿಸ ತೊಡಗಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ನಾಯಕರೇ ಪ್ರಚಾರಕ್ಕೆ ಬರುವುದಾಗಿ ಅವರಿಗೆ ಕರೆ ಮಾಡಲಾರಂಭಿಸಿದ್ದಾರೆ. ನಾಯಕರ ಪ್ರಚಾರ ಕಾರ್ಯಕ್ರಮಗಳಿಗೆ ಸಮಯ ಹೊಂದಾಣಿಕೆ ಮಾಡಿಕೊಳ್ಳಲು ಬಸನಗೌಡರೇ ಹರಸಾಹಸ ಪಡುವಂತಾಗಿದೆ. ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ಎದ್ದಿರುವ ಈ ಉತ್ಸಾಹ ಎಷ್ಟು ದಿನಗಳ ಕಾಲ ಮುಂದುವರಿಯಲಿದೆ ಎಂಬ ಪ್ರಶ್ನೆಗಳು ಕೇಳಿಬರತೊಡಗಿವೆ. ಶತಾಯ ಗತಾಯ ಬೈ ಎಲೆಕ್ಷನ್‌ಗಳಲ್ಲಿ ಕಳೆದುಕೊಂಡ ಸ್ಥಾನವನ್ನು ಉಪ ಚುನಾವಣೆಯಲ್ಲಿ ಗಳಿಸಬೇಕೆಂಬ ಜಿದ್ದಿಗೆ ಇತ್ತೀಚಿನ ರಾಜಕೀಯ ಬೆಳವಣಿಗೆ ಪೂರಕವಾಗಿವೆ.

Advertisement

ಚುನಾವಣೆ ಘೋಷಣೆಗೂ ಮುನ್ನವೇ ಮಸ್ಕಿ ಅಖಾಡದಲ್ಲಿ ಬಲಾಬಲದ ಲೆಕ್ಕಾಚಾರಗಳು ಚುರುಕು ಪಡೆದಿರುವುದಕ್ಕೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮ, ಅಲ್ಲಿನ ಭಾಷಣಗಳು ಮಸ್ಕಿ ಹಾಗೂ ಸಿಂಧನೂರು ಕ್ಷೇತ್ರದಲ್ಲಿ ಚರ್ಚೆಯ ಧೂಳೆಬ್ಬಿಸಿವೆ.

ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next