Advertisement

ಹುಮನಾಬಾದ ಮತ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಶುರು..!

01:09 PM Dec 15, 2022 | Team Udayavani |

ಹುಮನಾಬಾದ: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿಯಿದ್ದು, ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ನಾಯಕರ ಸಂಚಲನ ಹೆಚ್ಚಾಗಿದೆ. ಪ್ರತಿಯೊಂದು ಗ್ರಾಮ ಹಾಗೂ ಪ್ರತಿಯೊಂದು ಮದುವೆ ಸೇರಿದಂತೆ ವಿವಿಧ ಖಾಸಗಿ ಸಮಾರಂಭಗಳಲ್ಲಿ ರಾಜಕೀಯ ಮುಖಂಡರು ಕಂಡು ಬರುತ್ತಿದ್ದಾರೆ. ಪ್ರತಿಯೊಂದು ವಿಚಾರವನ್ನು ರಾಜಕೀಯವಾಗಿ ನೋಡುತ್ತಿರುವುದು ವಿಶೇಷವಾಗಿದೆ.

Advertisement

ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಕ್ಷೇತ್ರದಲ್ಲಿ ನಡೆಯುವ ವಿವಿಧ ಮದುವೆ, ತೊಟ್ಟಿಲು, ಜನ್ಮದಿನ ಸೇರಿದಂತೆ ಸಣ್ಣಸಣ್ಣ ಕಾರ್ಯಕ್ರಮಗಳಿಗೂ ಸಮಯ ನೀಡಿ ಜನರ ಸಂಪರ್ಕ ಬೆಳೆಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಹತ್ತಾರು ಬಾರಿ ಹೇಳಿದರು, ಎಷ್ಟು ಕರೆದರು ಕೂಡ ಬಾರದ ರಾಜಕಾರಣಿಗಳು ಇದೀಗ ಕರೆಯದೆ ಕೂಡ ಬರುತ್ತಿದ್ದಾರೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ವಿವಿಧಡೆ ಭಾಗವಹಿಸುವ ನಾಯಕರು ಜನರೊಂದಿಗೆ ಭಾವನಾತ್ಮಕ ವಿಚಾರಗಳು ಮಾತನಾಡಿ, ಜನರ ಮನಸ್ಸು ಗೆಲ್ಲುವ ಪ್ರಯತ್ನಗಳು ನಡೆಸುತ್ತಿದ್ದಾರೆ.

ಹುಮನಾಬಾದ ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಪಕ್ಷ ಪ್ರಬಲವಾಗಿದ್ದು, ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ಅಲ್ಲದೆ ಶಾಸಕ ರಾಜಶೇಖರ ಪಾಟೀಲರ ಪುತ್ರ ಅಭಿಷೇಕ್ ಪಾಟೀಲ ಒಟ್ಟಾಗಿ ಕಾಂಗ್ರೆಸ್ ಪಕ್ಷದ ಪರ ಚುನಾವಣೆ ತಯಾರಿ ನಡೆಸುತ್ತಿದ್ದಾರೆ. ‌

ಪ್ರತಿನಿತ್ಯ 2-3 ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳು ಆಲಿಸುವ ಭರದ ಕೆಲಸ ನಡೆಸುತ್ತಿದ್ದಾರೆ. ಜನರು ಕೂಡ ಉತ್ತಮ ಸ್ಪಂದನೆ ನೀಡುತ್ತಿರುವುದಾಗಿ ಮುಖಂಡರು ಹೇಳುತ್ತಿದ್ದಾರೆ. ಕ್ಷೇತ್ರದಲ್ಲಿ ಯಾರೆ ಬಂದರೂ ಕೂಡ ಕಾಂಗ್ರೆಸ್ ಮಣಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಹುಮನಾಬಾದ ಮತ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ ಪಾಟೀಲ ಪರಿವಾರದಲ್ಲಿ, ಕಳೆದ ಕೆಲ ತಿಂಗಳ ಹಿಂದೆ ಕುಟುಂಬ ಕಲಹದಿಂದ ಡಾ| ಸಿದ್ದಲಿಂಗಪ್ಪ ಪಾಟೀಲ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದು, ಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರ ಮಧ್ಯೆ ಉಳಿಯುವ ಪ್ರಯತ್ನ ನಡೆಸಿದ್ದಾರೆ. ಅಲ್ಲದೆ, ಕಳೆದ ಮೂರು ದಶಕದಿಂದ ಪಕ್ಷಕ್ಕಾಗಿ ಶ್ರಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಕೂಡ ಟಿಕೆಟ್ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮಣಿಸುವ ನಿಟ್ಟಿನಲ್ಲಿ ಅನೇಕರು ಪ್ರಯತ್ನ ನಡೆಸುತ್ತಿದ್ದಾರೆ.

Advertisement

ಜೆಡಿಎಸ್ ಪಕ್ಷದಿಂದ ಸ್ಪರ್ಧೆ ನಡೆಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಪುತ್ರ ಸಿ.ಎಂ. ಫಯಿಜ್ ಮಹಮ್ಮದ್ ಕ್ಷೇತ್ರಕ್ಕೆ ಆಗಮಿಸಿದ್ದು, ಪಟ್ಟಣದಲ್ಲಿ ಮನೆ ಮಾಡಿದ್ದಾರೆ. ದಿಕ್ಕು ಪಾಲಾದ ಜೆಡಿಎಸ್ ಪಕ್ಷವನ್ನು ಸಂಘಟಿಸುವ ಕಾರ್ಯ ನಡೆಸುತ್ತಿದ್ದಾರೆ.

ಜ.4ರಂದು ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರಕ್ಕೆ ಆಗಮಿಸುವ ನಿಟ್ಟಿಲ್ಲಿ ಪೂರ್ವ ತಯಾರಿಗಳು ನಡೆಸಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಕೇಳಿ, ಸ್ಥಳದಲ್ಲೇ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ತಿಳಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಹಳೆ ಜೆಡಿಎಸ್ ಕರ‍್ಯಕರ್ತರು ಇನ್ನೂ ಸಿಎಂ ಫಯಿಜ್ ಅವರನ್ನು ಸೂಕ್ತವಾಗಿ ಸ್ಪಂದಿಸದರುವುದು ಕಂಡುಬರುತ್ತಿದ್ದು, ಕೆಲವರು ಸ್ಥಳಿಯರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ರಾಜಶೇಖರ ಪಾಟೀಲ ಸ್ಪರ್ಧೆ ನಡೆಸಲಿದ್ದು, ಈ ಬಾರಿಯ ಚುನಾವಣೆಯ ಕಾವು ಈಗಾಗಲೇ ಕ್ಷೇತ್ರದಲ್ಲಿ ಕಂಡು ಬರುತ್ತಿದೆ. ಕ್ಷೇತ್ರಕ್ಕೆ ಆಮ್‌ಆದ್ಮಿ ಪಕ್ಷ ಕೂಡ ಆಗಮಿಸಿದ್ದು, ಬಿಜೆಪಿ ತೊರೆದು ಆಮ್‌ಆದ್ಮಿ ಪಕ್ಷ ಸೇರ್ಪಡೆಗೊಂಡಿರುವ ಬ್ಯಾಂಕ್‌ ರೆಡ್ಡಿ ಬರುವ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲ್ಲಿದ್ದಾರೆ. ಅಲ್ಲದೆ, ಓವೈಸಿ ಅವರ ಎಐಎಂಎಂ ಪಕ್ಷದ ಅಭ್ಯರ್ಥಿಯಾಗಿ ಸೈಯದ್ ಯಾಸೀನ್, ಬಿಎಸ್‌ಪಿ ಪಕ್ಷದಿಂದ ಅಂಕುಶ ಗೋಖಲೆ ಕೂಡ ಸ್ಪರ್ಧೆ ನಡೆಸಲಿದ್ದಾರೆ. ಅಲ್ಲದೆ, ಇನ್ನೂ ಕೆಲವು ಪಕ್ಷದ ಮುಖಂಡರು ಕೂಡ ಈ ಕ್ಷೇತ್ರದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆಗಳು ಹೆಚ್ಚಿವೆ.

-ದುರ್ಯೋಧನ ಹೂಗಾರ

 

 

Advertisement

Udayavani is now on Telegram. Click here to join our channel and stay updated with the latest news.

Next