Advertisement

ಕಣದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

11:45 AM May 04, 2019 | pallavi |

ಅಳ್ನಾವರ: ಕಳೆದ ಮಾರ್ಚ್‌ ತಿಂಗಳಲ್ಲಿ ಅವಧಿ ಮುಗಿದಿರುವ ಸ್ಥಳೀಯ ಪಟ್ಟಣ ಪಂಚಾಯತಿಗೆ ಇದೀಗ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Advertisement

ಒಂದು ವರ್ಷದ ಹಿಂದೆ ನೂತನ ತಾಲೂಕು ಕೇಂದ್ರವಾಗಿ ಕಾರ್ಯರೂಪಕ್ಕೆ ಬಂದ ನಂತರ ಪಪಂಗೆ ನಡೆಯುತ್ತಿರುವ ಪ್ರಥಮ ಚುನಾವಣೆ ಇದಾಗಿರುವುದರಿಂದ ಸಹಜವಾಗಿಯೇ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಲೋಕಸಭೆ ಚುನಾವಣೆಯ ಗುಂಗು ಜನರ ಮನಸ್ಸಿನಲ್ಲಿ ಇನ್ನೂ ಇರುವಾಗಲೇ ಮತ್ತೂಂದು ಚುನಾವಣೆಗೆ ಪಟ್ಟಣದ ಜನ ತಯಾರಾಗುತ್ತಿದ್ದಾರೆ.

ನತದೃಷ್ಟ ಕೈ: ಸ್ಥಳೀಯ ಪಪಂ ಹಿಂದಿನ ಅವಧಿಯಲ್ಲಿ ಒಟ್ಟು 15 ಸದಸ್ಯ ಬಲದಲ್ಲಿ 9 ಕಾಂಗ್ರೆಸ್‌, 3 ಜೆಡಿಎಸ್‌, 2 ಬಿಜೆಪಿ ಹಾಗೂ 1 ಪಕ್ಷೇತರ ಸದಸ್ಯರಿದ್ದರು. 9 ಸದಸ್ಯ ಬಲದೊಂದಿಗೆ ಕಾಂಗ್ರೆಸ್‌ ಬಹುಮತ ಹೊಂದಿದ್ದರೂ ಮೊದಲ ಎರಡೂವರೆ ವರ್ಷದ ಅವಧಿಯಲ್ಲಿ ಮೀಸಲಾತಿ ಕಾರಣ ಅಧಿಕಾರದಿಂದ ದೂರ ಉಳಿಯುವಂತಾಗಿತ್ತು. ಕೇವಲ ಮೂರು ಸದಸ್ಯರನ್ನು ಒಳಗೊಂಡಿದ್ದ ಜೆಡಿಎಸ್‌ ಪಕ್ಷವು ಅಧ್ಯಕ್ಷ ಸ್ಥಾನದ ಅಧಿಕಾರ ಅನುಭವಿಸುವಂತಾಗಿತ್ತು. ಬಹುಮತ ಹೊಂದಿದ್ದ ಕಾಂಗ್ರೆಸ್‌ ಸದಸ್ಯರು ಕೈ ಕೈ ಹಿಸುಕಿಕೊಂಡಿದ್ದರು.

ನಂತರದ ಎರಡುವರೆ ವರ್ಷದ ಅವಧಿಯಲ್ಲಿಯೂ ಸಹ ಒಳ ತಿಕ್ಕಾಟದಿಂದ ಸುಮಾರು ಒಂದುವರೆ ವರ್ಷ ಉಪಾಧ್ಯಕ್ಷರ ಮೇಲೆಯೇ ಕಾಲ ನೂಕಿ ಕೊನೆಗೆ ಬಿಜೆಪಿ ಸದಸ್ಯರೊಬ್ಬರನ್ನು ಕಾಂಗ್ರೆಸ್‌ಗೆ ಕರೆ ತಂದು ಅಧ್ಯಕ್ಷ ಗಾದಿಯನ್ನು ಅವರಿಗೊಪ್ಪಿಸಿದ ಕೀರ್ತಿ ಕಾಂಗ್ರೆಸ್‌ ಸದಸ್ಯರಿಗೆ ಸಲ್ಲುತ್ತದೆ.

ಚಟುವಟಿಕೆ ಚುರುಕು: ಮಾರ್ಚ್‌ ತಿಂಗಳಲ್ಲಿ ಹಿಂದಿನ ಆಡಳಿತ ಮಂಡಳಿಯ ಅಧಿಕಾರ ಮುಗಿದು ಇನ್ನೂ ಮುರ್‍ನಾಲ್ಕು ತಿಂಗಳು ಗತಿಸಿದ ನಂತರ ಚುನಾವಣೆ ಘೋಷಣೆಯಾಗಬಹುದೆಂದು ಬಹುತೇಕ ಆಕಾಂಕ್ಷಿಗಳ ಅನಿಸಿಕೆಯಾಗಿತ್ತು. ಆದರೆ ಏಕಾಏಕಿ ಚುನಾವಣೆ ಅಧಿಸೂಚನೆ ಹೊರಬೀಳುತ್ತಿದ್ದಂತೆ ಕಾರ್ಯ ಪ್ರವೃತ್ತರಾಗಿರುವ ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಮುಖಂಡರನ್ನು ಭೇಟಿಯಾಗುತ್ತಿದ್ದಾರೆ.

Advertisement

ಕೆಲ ದಿನಗಳ ಹಿಂದೆ ನಡೆದಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಜಂಟಿಯಾಗಿ ಚುನವಣೆ ಪ್ರಚಾರ ಕೈಗೊಂಡಿದ್ದರು. ಆದರೆ ಈಗ ಪ್ರತ್ಯೇಕವಾಗಿ ಚುನಾವಣೆ ಎದುರಿಸುವ ಅನಿವಾರ್ಯತೆ ಒದಗಿ ಬಂದಿದ್ದು, ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಒಂದು ವೇಳೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡರು ಸಹ ಸ್ಥಳೀಯವಾಗಿ ಮೈತ್ರಿ ಅಸಾಧ್ಯ ಎನ್ನಲಾಗುತ್ತಿದೆ. ಆಕಾಂಕ್ಷಿಗಳು ಅಧಿಕವಾಗಿದ್ದು ಮೈತ್ರಿ ಏರ್ಪಟ್ಟರೆ ಬಹುತೇಕರು ಸ್ವತಂತ್ರ ಅಭ್ಯರ್ಥಿಗಳಾಗಿ ಕಣದಲ್ಲಿರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

15ರಿಂದ 18ಕ್ಕೆ ಏರಿಕೆ: ಪಟ್ಟಣದಲ್ಲಿನ ವಾರ್ಡ್‌ಗಳ ಪುನರ್‌ ವಿಂಗಡಣೆಯಾಗಿದ್ದು, ಸದಸ್ಯರ ಸಂಖ್ಯೆ 15ರಿಂದ 18ಕ್ಕೆ ಏರಿದೆ. ಬಹುತೇಕ ವಾರ್ಡ್‌ಗಳು ಬದಲಾವಣೆಯಾಗಿದ್ದು ಮೊದಲಿನ ಮೀಸಲಾತಿ ಅದಲು ಬದಲಾಗಿದೆ. ಹಾಗಾಗಿ ಕಳೆದ ಅವಧಿಯಲ್ಲಿ ಸದಸ್ಯರಾಗಿದ್ದವರು ಪುನರಾಯ್ಕೆ ಬಯಸುತ್ತಿರುವ ಬಹುತೇಕರು ಹೊಸ ಕ್ಷೇತ್ರವನ್ನು ಹುಡುಕುತ್ತಿದ್ದಾರೆ. ಚುನಾವಣೆ ಇನ್ನೂ ಕೆಲವು ತಿಂಗಳು ಮುಂದೆ ಹೋಗಬಹುದು, ಅಲ್ಲಿವರೆಗೆ ಮೀಸಲಾತಿ ಬದಲಾವಣೆ ಮಾಡಿಕೊಂಡು ಬರಬಹುದೆಂದು ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆ ಮೂಡಿದೆ.

ಹಿಂದಿನ ಚುನಾವಣೆಯಲ್ಲಿ ಈ ಭಾಗವನ್ನು ಕಾಂಗ್ರೆಸ್‌ನ ಸಂತೊಷ ಲಾಡ್‌ ಪ್ರತಿನಿಧಿಸುತ್ತಿದ್ದರು. ಆದರೆ ಈ ಸಲ ಬಿಜೆಪಿಯ ಸಿ.ಎಂ. ನಿಂಬಣ್ಣವರ ಈ ಭಾಗದ ಶಾಸಕರಾಗಿರುವುದರಿಂದ ಅವರ ಪ್ರಭಾವ ಚುನಾವಣೆ ಮೇಲೆ ಬೀಳುವುದು ಸಹಜವೆನ್ನಬಹುದು. ಹೇಗಾದರೂ ಮಾಡಿ ಪಪಂ ಆಡಳಿತವನ್ನು ವಶಕ್ಕೆ ಪಡೆಯಬೇಕೆನ್ನುವುದು ಬಿಜೆಪಿ ಮುಖಂಡರಿಂದ ಮಾತುಗಳು ಕೇಳಿಬರುತ್ತಿವೆ. ಮತ್ತೂಂದೆಡೆ ಪಪಂ ಆಡಳಿತ ತಮ್ಮ ಕೈ ಬಿಡಬಾರದೆಂದು ಕಾಂಗ್ರೆಸ್‌ ಮುಖಂಡರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next