ದಾವಣಗೆರೆ: ಜಿಲ್ಲೆಯಾದ್ಯಂತ ಜ. 31ರಂದು ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದ್ದು, ವಿವಿಧ ಇಲಾಖೆಗಳು ಸಹಕಾರ ನೀಡುವ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ 2020-21ನೇ ಸಾಲಿನ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಬಾರಿಯೂ ಜಿಲ್ಲೆಯಲ್ಲಿ ಪೋಲಿಯೋ ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದ್ದು, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸುವ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕು ಎಂದರು.
ಈಗಾಗಲೇ ಪೋಲಿಯೋ ಲಸಿಕೆ ಜಿಲ್ಲೆಗೆ ಸರಬರಾಜು ಆಗಿದ್ದು, ತಾಲೂಕು ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ. ಲಸಿಕಾ ಅಭಿಯಾನದಲ್ಲಿ ತೊಡಗಿಕೊಂಡಿರುವ ಸಿಬ್ಬಂದಿ ಅಂದು ಬೆಳಗ್ಗೆ 8ರೊಳಗೆ ಬೂತ್‌ಗಳಲ್ಲಿ ಲಭ್ಯವಿದ್ದು, ಸಂಜೆ 5.30ವರೆಗೆ ಹಾಗೂ ಮುಂದಿನ ಮೂರು ದಿನಗಳು ಮನೆ ಮನೆಗೆ ತೆರಳಿ ಬೂತ್‌ಗೆ ಬರಲುಆಗದಿರುವ ಮಕ್ಕಳಿಗೆ ಲಸಿಕೆ ನೀಡಬೇಕು. ವಲಸಿಗ ಮಕ್ಕಳಿಗೂ ತಪ್ಪದೇ ಲಸಿಕೆ ನೀಡುವ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಇದೇ ವೇಳೆ ಪೋಲಿಯೋ ಲಸಿಕೆ ಮತ್ತು ಕುಷ್ಠರೋಗ ಅರಿವು ಆಂದೋಲನದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ:ಗ್ರಾಮ ವಾಸ್ತವ್ಯದಿಂದ ಹೊಸ ಅನುಭವ: ಅಜಯಸಿಂಗ್
ಉಪ ವಿಭಾಗಾಧಿಕಾರಿ ಮಮತ ಹೊಸಗೌಡರ್, ಜಿಪಂ ಉಪ ಕಾರ್ಯದರ್ಶಿ ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್, ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ಜಯಪ್ರಕಾಶ್, ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಕಾರಾಧ್ಯ, ಡಿಎಲ್‌ಓ ಡಾ. ಮುರಳೀಧರ್, ಜಿಲ್ಲಾ ಆಯುಷ್ ಅಧಿಕಾರಿ ಶಂಕರೇಗೌಡ ಇನ್ನಿತರರು ಸಭೆಯಲ್ಲಿದ್ದರು.