ತುಮಕೂರು: ದೇಶದ ಮಕ್ಕಳಿಗೆ ಪೋಲಿಯೋ ಬಾರದಂತೆ ತಡೆಯಲು ದೇಶಾದ್ಯಂತ ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮ ಜಿಲ್ಲೆಯಲ್ಲಿಯೂ ಸಮರೋಪಾದಿಯಲ್ಲಿ ಆರೋಗ್ಯ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಅಧಿಕಾರಿಗಳು ಕಾರ್ಯ ನಿರ್ವಹಿಸಿ, ಪೋಲಿಯೋ ಮುಕ್ತ ರಾಷ್ಟ್ರಮಾಡಲು ಮುಂದಾಗಬೇಕು ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.
ನಗರದ ಅಗ್ರಹಾರ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಪಲ್ಸ್ ಪೋಲಿಯೋ ವತಿಯಿಂದ ಭಾನುವಾರ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ದೇಶದಲ್ಲಿ 2011 ಜನವರಿಯಿಂದ ಯಾವುದೇ ಹೊಸ ಪೋಲಿಯೋ ಪ್ರಕರಣ ಕಂಡು ಬಂದಿರುವುದಿಲ್ಲ ಹಾಗೂ ದೇಶವು ಈಗ ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಪೋಲಿಯೋ ಮುಕ್ತ ರಾಷ್ಟ್ರ ಎಂಬ ನಿರ್ಮೂಲನೆ ಪ್ರಮಾಣ ಪತ್ರವನ್ನು 2014ರಲ್ಲಿ ಪಡೆದಿದೆ ಎಂದು ನುಡಿದರು.
ಪೋಲಿಯೋ ಹಾಕಿಸಿ: ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಮೊದಲನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ಇದಾಗಿದ್ದು, ಪೋಷಕರು 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು. ತಮ್ಮ ಹತ್ತಿರದ ಪೋಲಿಯೋ ಬೂತ್‌ಗಳಿಗೆ ತೆರಳಿ ತಪ್ಪದೇ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಲೇಬೇಕು ಎಂದು ಮನವಿ ಮಾಡಿದರು.
1,202 ಲಸಿಕಾ ಕೇಂದ್ರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಚಂದ್ರಿಕಾ ಮಾತನಾಡಿ, ಜಿಲ್ಲಾದ್ಯಂತ 5 ವರ್ಷದೊಳಗಿನ 2,13,679 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಟೋಲ್ ಗೇಟ್ ಸೇರಿದಂತೆ 1,202 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, 61 ಟ್ರಾನ್ಸಿಪ್ಟ್ ಲಸಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಪಲ್ಸ್ ಪೋಲಿಯೋ ಕಾರ್ಯಕ್ಕೆ 4,936 ಸಿಬ್ಬಂದಿ ಹಾಗೂ 239 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದ ಅವರು, ವಲಸೆ ಬಂದಿರುವ ಸಮುದಾಯ, ಕೊಳಚೆ ಪ್ರದೇಶ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಲಸಿಕೆ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವೀರಭದ್ರಯ್ಯ, ಆರ್‌ಸಿಎಚ್ ಡಾ.ಕೇಶವರಾಜ್, ಇನ್ನರ್‌ವ್ಹೀಲ್‌ನ ಪ್ರೇಮಾ, ನಾಲ್ಕು ರೋಟರಿ ಸಂಸ್ಥೆಗಳಾದ ಅಧ್ಯಕ್ಷರಾದ ಆಶಾ ಪ್ರಸನ್ನಕುಮಾರ್, ಡಾ. ವಿಜಯಕುಮಾರ್, ಶಿವಕುಮಾರ್, ಉದಯ್ ಮತ್ತಿತರರು ಉಪಸ್ಥಿತರಿದ್ದರು.