ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ನಡೆದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 58,10,493 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಶೇ. 91.16 ರಷ್ಟು ಗುರಿ ಸಾಧನೆಯಾಗಿದೆ. ನಗರದ ಚಿಕ್ಕಜಾಲದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಬೆಳಗ್ಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಕ್ಕಳಿಗೆ ಪೋಲಿಯೋಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪೋಲಿಯೋ ಸುರಕ್ಷಿತವಾಗಿದ್ದು, ಯಾವುದೇ ಗಾಳಿಸುದ್ದಿಗೆ ಕಿವಿಗೊಡದೆ ಪೋಷಕರು 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು. ಸಚಿವರ ಮಕ್ಕಳಾದ ರಕ್ಷಿತಾ ಹಾಗೂ ದೀಕ್ಷಿತ್ ಜತೆಯಲ್ಲಿದ್ದರು.
ರಾಜ್ಯದೆಲ್ಲೆಡೆ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ರಾಜ್ಯದಲ್ಲಿ ಐದು ವರ್ಷದೊಳಗಿನ 63,73,840 ಮಕ್ಕಳ ಪೈಕಿ ಭಾನುವಾರ 58,10,493 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಜಿಲ್ಲಾವಾರು ಲಸಿಕೆ ಪ್ರಮಾಣದಲ್ಲಿ ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ.97.68ರಷ್ಟು ಗುರಿ ಸಾಧನೆಯಾಗಿದೆ. ಬೀದರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ.82.56 ಗುರಿ ಸಾಧನೆಯಾಗಿದೆ.
ಸೋಮವಾರದಿಂದ ಬುಧವಾರದವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಲಸಿಕಾ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲು ಕೆಎಂಎಫ್ ಹಾಲಿನ ಕವರ್‌ಗಳ “ಪ್ಲೀಸ್ ಪೊಲಿಯೋ’ ಎಂಬ ಸಂದೇಶ ಮುದ್ರಿಸಿದ್ದು, ಮೆಟ್ರೋ ನಿಲ್ದಾಣಗಳಲ್ಲಿನ ಎಲ್‌ಇಡಿ ವೇಳಾಪಟ್ಟಿ ಫಲಕದಲ್ಲಿ ಸಂದೇಶ ಪ್ರದರ್ಶನವಾಗುತ್ತಿದ್ದುದು ಗಮನ ಸೆಳೆಯಿತು.
ಹಲಸೂರು ಹೆರಿಗೆ ಆಸ್ಪತ್ರೆಯಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಮೇಯರ್ ಗೌತಮ್ ಕುಮಾರ್ ಅವರು ಬಿಬಿಎಂಪಿ ವ್ಯಾಪ್ತಿಯ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಸಿಕಾ ಕಾರ್ಯಕ್ರಮದಲ್ಲಿ 8,500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. 5.71 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿರುವುದಾಗಿ ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್‌ತಿಳಿಸಿದರು.
4,71,593 ಮಕ್ಕಳಿಗೆ ಲಸಿಕೆ: ಬಿಬಿಎಂಪಿ ವ್ಯಾಪ್ತಿಯ 135 ವಾರ್ಡ್ ವ್ಯಾಪ್ತಿಯಲ್ಲಿ ಒಟ್ಟು 5,71,125 ಮಕ್ಕಳಲ್ಲಿ ಮೊದಲನೇ ದಿನ 4,71,593 (ಶೇ.82.57) ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಮೆಟ್ರೊ ನಿಲ್ದಾಣ, ಮಾರುಕಟ್ಟೆಗಳು, ಮದುವೆ ಮಂಟಪಗಳಿಗೆ ಕಾರ್ಯಕರ್ತರು ಭೇಟಿ ನೀಡಿ ಲಸಿಕೆ ಹಾಕಿದ್ದಾರೆ.
ಜೊತೆಗೆ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಇದ್ದ ಪರಿಣಾಮ 6 ತಂಡಗಳನ್ನು ನಿಯೋಜನೆ ಮಾಡಿ ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಇನ್ನೂ ಜನವರಿ 21 ರವರೆಗೆ ಲಸಿಕೆ ಕಾರ್ಯಕ್ರಮ ಮುಂದುವರಿಯಲಿದ್ದು, ಲಸಿಕೆ ಹಾಕಿಸಿಕೊಳ್ಳದ ಮಕ್ಕಳನ್ನು ಹುಡುಕಿ ಲಸಿಕೆ ಹಾಕಲಾಗವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ. ಕಲಾವತಿ ತಿಳಿಸಿದರು.