ಕುದೂರು: ಪ್ರತಿಯೊಬ್ಬ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಎಂ.ರಾಘವೇಂದ್ರ ತಿಳಿಸಿದರು.
ಕುದೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಡೆದ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವ ಸಂಸ್ಥೆ ಸಹಯೋಗದಲ್ಲಿ ವಿಶ್ವವನ್ನು ಪೋಲಿಯೋ ಮುಕ್ತವನ್ನಾಗಿಸಲು 5 ವರ್ಷದೊಳಗಿನ ಮಕ್ಕಳಲ್ಲಿ ಅಂಗವಿಕಲತೆಯನ್ನು ತಡೆಯುವ ಉದ್ದೇಶದಿಂದ ದೇಶಾದ್ಯಂತ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ.
ಈಗಾಗಲೇ ನಮ್ಮ ದೇಶದಲ್ಲಿ ಪೋಲಿಯೋ ಮುಕ್ತವಾಗಿದ್ದು, ಈ ಯೋಜನೆಯು ಆರೋಗ್ಯ ಇಲಾಖೆಯ ಸಹಕಾರದಿಂದ ಶೇ. 100ರಷ್ಟು ಯಶಸ್ಸು ಕಂಡಿದೆ. ಪ್ರತಿಯೊಬ್ಬ ಪೋಷಕರು ತಮ್ಮ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.
ಲಸಿಕೆ ಮೂಲಕ ಮಕ್ಕಳನ್ನು ಕಾಪಾಡಿ: ವೈದ್ಯಾಧಿಕಾರಿ ಶಿಲ್ಪಾಶ್ರೀ ಮಾತನಾಡಿ, ಪೋಲಿಯೋ ಲಸಿಕೆ ಹಾಕಿವ ಕಾರ್ಯಕ್ರಮವು ಮಾ.10ರಿಂದ 12ರವರೆಗೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಎಲ್ಲಾ ಬೂತ್‌ಗಳಲ್ಲಿ ಪೋಲಿಯೋ ಲಸಿಕೆ ಹಾಕಲಾಗುತ್ತದೆ. ಪ್ರತಿಯೊಬ್ಬರು 5 ವರ್ಷದೊಳಿಗೆ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಅಂಗವಿಕಲತೆಯಾಗದಂತೆ ಮಕ್ಕಳನ್ನು ಕಾಪಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸಹಾಯಕ ಲೋಕೇಶ್ ಮೂರ್ತಿ, ಗ್ರಾಪಂ ಸದಸ್ಯ ಬಾಲಕೃಷ್ಣ, ಮಹದೇವ, ಕಾವ್ಯ, ಆಶಾ, ಮೇರಿ, ಆಶಾ ಕಾರ್ಯಕರ್ತೆಯರಾದ ಮಮತ, ರಾಜೇಶ್ವರಿ, ಲಿಖೀತ್, ಯೋಗಿತ, ಅಶೋಕ್ ಸೇರಿದಂತೆ ಅನೇಕರು ಹಾಜರಿದ್ದರು.