Advertisement

ಪಾಲಿಕೆ ಆಡಳಿತ ಸುಸೂತ್ರ: ಮೂರು ವಲಯ ಕಚೇರಿಗಳು ಮೇಲ್ದರ್ಜೆಗೆ

10:44 PM Dec 11, 2019 | mahesh |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆ ಸುಸೂತ್ರಗೊಳಿಸುವ ನಿಟ್ಟಿನಲ್ಲಿ ಸುರತ್ಕಲ್‌, ಕದ್ರಿ ಹಾಗೂ ಲಾಲ್‌ಬಾಗ್‌ನ ಮೂರು ವಲಯ ಕಚೇರಿಗಳು ಮೇಲ್ದ ರ್ಜೆಗೇರಿಸಲು ಪಾಲಿಕೆ ನಿರ್ಧರಿಸಿದೆ.

Advertisement

ಕದ್ರಿಯ ಮಲ್ಲಿಕಟ್ಟೆಯಲ್ಲಿ ಕಾರ್ಯಾ ಚರಿಸುತ್ತಿದ್ದ ವಲಯ ಕಚೇರಿಯನ್ನು ಕೆಲವು ತಿಂಗಳ ಹಿಂದೆ ವೆಚ್ಚ ಅಧಿಕ ವಾಗುತ್ತಿದೆ ಎಂದು ಮಹಾನಗರ ಪಾಲಿಕೆ ಕಚೇರಿಗೆ ತರಲಾಗಿದ್ದು, ಇದೀಗ ಮತ್ತೆ ಅದನ್ನು ಮಲ್ಲಿಕಟ್ಟೆಯಲ್ಲಿಯೇ ರಚಿಸುವ ಮುಖೇನ ಆಡಳಿತ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಪಾಲಿಕೆ ಮುಂದಾಗಿದೆ. ಜತೆಗೆ, ಪಾಲಿಕೆಯ ಎಲ್ಲ 60 ವಾರ್ಡ್‌ಗಳಿಗೆ ಸುಮಾರು 37 ಎಂಜಿನಿಯರ್‌ಗಳ ಕಾರ್ಯವ್ಯಾಪ್ತಿಯನ್ನು ಮರುಹಂಚಿಕೆ ಮಾಡಿ ಪಾಲಿಕೆ ಆಯುಕ್ತ ಅಜಿತ್‌ ಕುಮಾರ್‌ ಹೆಗ್ಡೆ ಅವರು ಆದೇಶಿಸಿದ್ದಾರೆ.

ಹಿಂದೆ ಮಲ್ಲಿಕಟ್ಟೆ ಸಹಿತ ಬೇರೆ ಬೇರೆ ವ್ಯಾಪ್ತಿಯ ಜನರು ಕಡತಗಳಿಗಾಗಿ ಪಾಲಿಕೆಗೇ ಬರಬೇಕಾಗಿತ್ತು.
ಇದೀಗ ಇದಕ್ಕೆ ಮುಕ್ತಿ ನೀಡಲು ಪಾಲಿಕೆ ಮುಂದಾಗಿದ್ದು, ವಲಯ ಕಚೇರಿಯನ್ನು ಪೂರ್ಣ ಮಟ್ಟದಲ್ಲಿ ಮತ್ತೆ ಮಲ್ಲಿಕಟ್ಟೆಯಲ್ಲಿಯೇ ನಡೆಸಲು ತೀರ್ಮಾನಿಸಿದೆ. ಹಾಗಾಗಿ ಮುಂದಿನ 1 ವಾರದೊಳಗೆ ಈ ಕಚೇ ರಿಗೆ ಸುಮಾರು 30 ವಿವಿಧ ಸ್ತರದ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳ ನೇಮಕಕ್ಕೆ ಸೂಚನೆ
ಸದ್ಯ ಸುರತ್ಕಲ್‌ನಲ್ಲಿ ವಲಯ ಕಚೇರಿ ಆರಂಭಿಸಿದ್ದರೂ ಅಲ್ಲಿ ಪೂರ್ಣ ಪ್ರಮಾಣದ ಅಧಿಕಾರಿಗಳ ನೇಮಕವಾಗಿರಲಿಲ್ಲ. ಇದಕ್ಕಾಗಿ ವಲಯ ಕಚೇರಿಗೆ ಅಗತ್ಯವಿರುವ ಎಲ್ಲ ಸ್ತರದ ಅಧಿಕಾರಿಗಳನ್ನು ನೇಮಿಸಿ ಒಂದು ವಾರದೊಳಗೆ ಪೂರ್ಣಸ್ವರೂಪದಲ್ಲಿ ಕಾರ್ಯ ನಿರ್ವ ಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಾಲಿಕೆಯಲ್ಲಿಯೇ ಕಾರ್ಯಾಚರಿಸುತ್ತಿರುವ ಕಚೇರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಅಧಿಕಾರಿಗಳನ್ನು ನೇಮಿಸಲಾಗಿದೆ.

ಎಲ್ಲ ವಲಯ ಕಚೇರಿಗೆ ಕಾರ್ಯ ನಿರ್ವಾಹಕ ಎಂಜಿನಿಯರ್‌, ಜೂನಿಯರ್‌ ಎಂಜಿನಿಯರ್‌ಗಳನ್ನು ನೇಮಿಸಲಾಗಿದೆ. ಆಡಳಿತ ವಿಕೇಂದ್ರೀಕರಣ ಮಾಡುವ ಪರಿಣಾಮ ವಾರ್ಡ್‌ನ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸಲು ಸಾಧ್ಯವಾಗಲಿದೆ ಎಂಬ ಕಾರಣದಿಂದ ವಲಯ ಕಚೇರಿಯನ್ನು ಇನ್ನಷ್ಟು ಬಲಪಡಿಸಲಾಗಿದೆ.

Advertisement

ವಾರ್ಡ್‌ವಾರು ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಆಯುಕ್ತರು ಹಾಗೂ ಉಪ ಆಯುಕ್ತರಾದ ಸಂತೋಷ್‌ ಕುಮಾರ್‌ ಒಳಗೊಂಡಂತೆ ಪ್ರತ್ಯೇಕ ವಾಟ್ಸಾಪ್‌ ಗುಂಪು ರಚಿಸಲಾಗಿದ್ದು, ದೈನಂದಿನ ಕಾಮಗಾರಿ ವಿವರಗಳನ್ನು ಅಧಿಕಾರಿಗಳು ಇದರಲ್ಲಿ ನಮೂದಿಸಬೇಕಾಗಿದೆ.

ಅಧಿಕಾರಿಗಳ ಕಾರ್ಯವ್ಯಾಪ್ತಿ ಮರುಹಂಚಿಕೆ
ಪಾಲಿಕೆಯ 60 ವಾರ್ಡ್‌ಗಳಿಗೆ ಪಾಲಿಕೆಯ ಎಂಜಿನಿಯರ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಪ್ರಸ್ತುತ ಹಲವಾರು ಅಭಿಯಂತರುಗಳು ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಅಭಿಯಂತರುಗಳಿಗೆ ಹೆಚ್ಚುವರಿ ಪ್ರಭಾರ ನೀಡಲಾಗಿದೆ. ಅಲ್ಲದೆ ಕೆಪಿಎಸ್‌ಸಿಯಿಂದ ಹೊಸದಾಗಿ ನೇಮಕಗೊಂಡ ಅಭಿಯಂತರುಗಳಿಗೆ ಜವಾಬ್ದಾರಿ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್‌ಗಳಿಗೆ ಸಮಾನಾಗಿ ವಾರ್ಡ್‌ಗಳನ್ನು ಹಂಚಿಕೆ ಮಾಡಬೇಕಾದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸಮಾನವಾಗಿ ವಾರ್ಡ್‌ ಹಂಚಿಕೆ ಮಾಡಲಾಗಿದೆ. ಪ್ರತೀಯೊಬ್ಬ ಎಂಜಿನಿಯರ್‌ಗೂ 1ರಿಂದ ಗರಿಷ್ಠ 5 ವಾರ್ಡ್‌ಗಳ ಉಸ್ತುವಾರಿಯನ್ನು ನೀಡಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 18 ಮಂದಿ ಅಧಿಕಾರಿಗಳಿಗೆ ಕರ್ತವ್ಯ ಮರುಹಂಚಿಕೆ ಮಾಡಲಾಗಿದೆ.

ಒಂದು ವಾರದೊಳಗೆ ಕಾರ್ಯಾರಂಭ
ಸುರತ್ಕಲ್‌, ಕದ್ರಿ ಹಾಗೂ ಲಾಲ್‌ಬಾಗ್‌ನ ಮೂರು ವಲಯ ಕಚೇರಿಯನ್ನು ಮೇಲ್ದರ್ಜೆಗೇರಿಸಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಿ-ಸಿಬಂದಿ ನೇಮಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ನಿರ್ಧರಿಸಲಾಗಿದೆ. ಮುಂದಿನ ಒಂದು ವಾರದೊಳಗೆ ಮೂರೂ ವಲಯ ಕಚೇರಿಗಳು ಪೂರ್ಣಮಟ್ಟದಲ್ಲಿ ಕಾರ್ಯನಿರ್ವಹಿಸಲಿದೆ.
 - ಅಜಿತ್‌ ಕುಮಾರ್‌ ಹೆಗ್ಡೆ ಎಸ್‌. , ಆಯುಕ್ತರು, ಮಂಗಳೂರು ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next