Advertisement

Paying Guest: ಪಿಜಿಗಳಿಗೆ ಬೇಕು ನೀತಿ

01:27 PM Dec 04, 2023 | Team Udayavani |

ಪೇಯಿಂಗ್‌ ಗೆಸ್ಟ್‌ ಉದ್ದಿಮೆ ಬೆಂಗಳೂರಿನಲ್ಲಿ ಮತ್ತಷ್ಟು ಗರಿಗೆದರಿದೆ. ಕೋವಿಡ್‌ನಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ್ದ ಉದ್ದಿಮೆ ಆ ಬಳಿಕ ವರ್ಕ್‌ ಫ್ರಂ ಹೋಮ್‌ ನಿಯಮ ದಿಂದಾಗಿ ತೊಂದರೆ ಅನುಭವಿಸಿತ್ತು. ಈಗ ಎಲ್ಲವೂ ಯಥಾಸ್ಥಿತಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಪಿಜಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಬಹುತೇಕ ಪಿಜಿಗಳು ನಿವಾಸಿಗಳಿಂದ ಬಾಡಿಗೆ ಪಡೆಯುವಲ್ಲಿ ತೋರುವ ಉತ್ಸಾಹವನ್ನು ಉತ್ತಮ ಸೇವೆ ಒದಗಿಸಲು ತೋರುತ್ತಿಲ್ಲ ಎಂಬುದು ಅವರ ಅಳಲು. ಈ ನಡುವೆ ಹಲವು ಉತ್ತಮವಾಗಿ ಕಾರ್ಯನಿರ್ವ ಹಿಸುವ ಪಿಜಿಗಳು ಐಟಿ ಸಿಟಿಯಲ್ಲಿ ಇವೆ. ವಿದ್ಯಾರ್ಥಿಗಳು, ಬ್ಯಾಚ್ಯುಲರ್‌ ಉದ್ಯೋಗಿಗಳಿಗೆ ಜೀವನಾಡಿ ಆಗಿರುವ ಪಿಜಿಗಳು, ಕೆಲವರಿಗೆ ಉದ್ಯೋಗಾ ವಕಾಶ ತೆರೆದುಕೊಟ್ಟಿವೆ. ಹೀಗಾಗಿ ಬೆಂಗಳೂರಿನ ಪಿಜಿಗಳ ಸುತ್ತ ಒಂದು ಸುತ್ತಾಟ.

Advertisement

ಬೆಂಗಳೂರು: ನಾನು ನಂದಿನಿ… ಬೆಂಗಳೂರಿಗೆ ಬಂದೀನಿ… ಪಿಜಿಲಿ ಇರ್ತಿನಿ…! ಎಂಬ ಹಾಡೊಂದು ಕೆಲ ದಿನಗಳ ಹಿಂದೆ ವೈರಲ್‌ ಆಗಿ, ಪಿಜಿಲಿ ಇರೋ ‘ನಂದಿನಿ’ಯರ ಬವಣೆಗಳನ್ನು ಗಂಭೀರವಾಗಿ ಆಲಿಸುವ ಅಗತ್ಯವಿದೆ ಎಂಬ ಸಂದೇಶವನ್ನು ನೀಡಿತ್ತು! ಶಿಕ್ಷಣ ಮತ್ತು ಹತ್ತು ಹಲವು ಉದ್ಯೋಗ ಅವಕಾಶಗಳ ನಗರವಾಗಿ ಬೆಳೆದಿರುವ ಬೆಂಗಳೂರಿಗೆ ರಾಜ್ಯದೆಲ್ಲೆಡೆಯಿಂದ, ದೇಶವಿದೇಶಗಳಿಂದ ಲಕ್ಷಾಂತರ “ನಂದಿನಿ’ಯರು ಪ್ರತಿವರ್ಷ ಉತ್ತಮ ಜೀವನವನ್ನು ಅರಸಿ ಬರುತ್ತಾರೆ. ಹೀಗೆ ಬೆಂಗಳೂರಿಗೆ ಕಾಲಿಡುವ ಬಹುತೇಕ ವಿದ್ಯಾರ್ಥಿನಿಯರು, ಯುವತಿಯರು ಪೇಯಿಂಗ್‌ ಗೆಸ್ಟ್‌ (ಪಿಜಿ) ಗಳನ್ನು ತಮ್ಮ ವಾಸ್ತವ್ಯದ ತಾಣ ವಾಗಿ ರೂಪಿಸಿಕೊಳ್ಳಲು ಬಯಸುತ್ತಾರೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಪಿಜಿಗಳಿಗೆ ಭಾರೀ ಬೇಡಿಕೆಯೇ ಸೃಷ್ಟಿಯಾಗಿದೆ. ಪಿಜಿ ಮಾಡಲು ಕಾನೂನಿನ ಲಂಗು ಲಗಾಮಿಲ್ಲದಿರುವುದರಿಂದ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ, ಯಾರು ಬೇಕಾದರೂ ಪಿಜಿ ಮಾಡಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಶಿಕ್ಷಣ ಸಂಸ್ಥೆಗಳು, ಉದ್ದಿಮೆಗಳು ಹೆಚ್ಚಿರುವ ಕಡೆಯಲ್ಲಿ ಪಿಜಿಗಳ ಸಂಖ್ಯೆಯೂ ಹೆಚ್ಚಿದೆ. ಪಿಜಿ ಉದ್ದಿಮೆ ಯ ಲಾಭದ ಕಡೆ ದೃಷ್ಟಿ ನೆಟ್ಟಿರುವ ಮಾಲೀಕರು ಪಿಜಿ ವಾಸಿ ಗಳಿಗೆ ಮೂಲ ಸೌಕರ್ಯ ಕಲ್ಪಿಸಲು ನಿರ್ಲಕ್ಷ್ಯ ವಹಿಸು ತ್ತಿರುವ ಹಿನ್ನೆಲೆಯಲ್ಲಿ ಹಲವು ಪಿಜಿ ವಾಸಿಗಳ ಪಾಡು ಹೇಳತೀರದಾಗಿದೆ. ಈ ಮಧ್ಯೆ ಬಿಬಿಎಂಪಿ ಪಿಜಿಗಳ ಮೇಲೆ ನಿಯಂತ್ರಣ ಹೇರುವ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದರೆ, ಅತ್ತ ಪಿಜಿ ವಾಸಿಗಳ ಮಾಹಿತಿ ಸಂಗ್ರಹಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ನಗರದ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ 2014ರಲ್ಲೇ ಪಿಜಿಯೊಂದಕ್ಕೆ ನುಗ್ಗಿ ಟೆಕಿಯೊಬ್ಬಳ ಮೇಲೆ ಅಪರಿಚಿತ ವ್ಯಕ್ತಿ ಅತ್ಯಾಚಾರ ನಡೆಸಿದ್ದ ಪ್ರಕರಣ ನಗರವನ್ನು ತಲ್ಲಣಗೊಳಸಿತ್ತು. ಇದಾದ ಬಳಿಕ ಇಂತಹ ಹಲವು ಘಟನೆಗಳು ಘಟಿಸಿದ್ದರೂ ಪಿಜಿಗಳ ಸುರಕ್ಷತೆ, ಸ್ವಚ್ಛತೆ ಮತ್ತು ಮಾರ್ಗಸೂಚಿಗಳ ರಚನೆ, ಪಾಲನೆಯ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತ್ರ ಉಳಿದಿವೆ. ಯಾವುದಾದರೂ ಗಂಭೀರ ಘಟನೆ ಜರುಗಿ ದಾಗ ಮತ್ತೇ ಬಾಯಿ ಉಪಚಾರದ ಮಾತುಗಳು ಹೊರಬೀಳುತ್ತವೆ.

Advertisement

2014ರಲ್ಲಿ ನಗರದಲ್ಲಿ ಪಿಜಿ ನಿವಾಸಿಯ ಮೇಲೆ ಪಿಜಿಯಲ್ಲೇ ಅತ್ಯಾಚಾರದ ದುರ್ಘ‌ಟನೆ ಘಟಿಸಿದಾಗ ಅಂದು ಪೊಲೀಸ್‌ ಕಮೀಷನರ್‌ ಆಗಿದ್ದ ರಾಘವೇಂದ್ರ ಔರಾದ್ಕರ್‌ ಅವರು, “ಪಿಜಿ ಮಾಲೀಕರಿಗೆ ಮಾರ್ಗಸೂಚಿ ನೀಡಬೇಕು ಎಂದು ನಾವು ಸರ್ಕಾರಕ್ಕೆ ತಿಳಿಸುತ್ತೇವೆ. ಹೊಸ ಪಿಜಿಗಳನ್ನು ವಾಣಿಜ್ಯ ಸಂಸ್ಥೆಗಳನ್ನಾಗಿ ನೊಂದಾಯಿಸಿ ಕೊಳ್ಳಬೇಕು, ಪಿಜಿಗಳಲ್ಲಿ ಸುರಕ್ಷತೆ, ಗಾರ್ಡ್‌ಗಳ ನೇಮಕ, ಬಿಲ್ಡಿಂಗ್‌ನ ಪ್ರವೇಶದಲ್ಲಿ ಸಿಸಿಟಿವಿ, ಕಾಮನ್‌ ವಿಸಿಟಿಂಗ್‌ ರೂಮ್‌ ಮತ್ತು ಪಿಜಿಗೆ ಭೇಟಿ ನೀಡುವ ಪ್ಲಂಬರ್‌, ನ್ಯೂಸ್‌ಪೇಪರ್‌ ವೆಂಡರ್‌, ಹಾಲು ವಿತರಕ ಮುಂತಾದವರ ಮಾಹಿತಿ ಇರುವ ಡೈರಿ ನಿರ್ವಹಿಸುವಂತೆ ಸೂಚಿಸಲಾಗುವುದು” ಎಂದು ಹೇಳಿದ್ದರು.

ಇದೀಗ ನಗರದ ಪೊಲೀಸ್‌ ಕಮೀಷನರ್‌ ಆಗಿರುವ ಬಿ.ದಯಾನಂದ ಅವರು ಪಿಜಿಗಳಲ್ಲಿ ವಾಸಿಸುವರ ಮಾಹಿ ತಿಯನ್ನು ಸಂಗ್ರಹಿಸಲು ವೆಬ್‌ ಪೋರ್ಟಲ್‌ ಒಂದನ್ನು ಪ್ರಾರಂಭಿಸುವ ಪ್ರಸ್ತಾಪವನ್ನಿಟ್ಟದ್ದಾರೆ. ಈ ಪೋರ್ಟಲ್‌ನ ಉದ್ದೇಶ ಅಲ್ಲಿ ವಾಸಿಸುತ್ತಿರುವ ವ್ಯಕ್ತಿಗಳಿಗೆ ಸಮನ್ಸ್‌, ವಾರಂಟ್‌ ನೀಡಲು ಸುಲಭವಾಗಲಿ ಎಂಬುದಾಗಿದೆಯೇ ಹೊರತು ಪಿಜಿ ನಿವಾಸಿಗಳ ಸುರಕ್ಷತೆಯನ್ನು ಖಾತರಿಗೊಳಿಸುವ ಆಶಯವನ್ನು ಹೊಂದಿಲ್ಲ.

ಇದರ ಜೊತೆಗೆ ಬಿಬಿಎಂಪಿಯು ಪಿಜಿಗಳ ನೈರ್ಮಲೀಕರಣ ಮತ್ತು ರೆಸಿಡೆನ್ಸಿಯಲ್‌ ಮನೆಗಳನ್ನು ನೇರವಾಗಿ ಪಿಜಿಯಾಗಿ ಬದಲಾಯಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿರುವುದು ಮತ್ತು ಆದಾಯದ ನಷ್ಟದ ಕಾರಣಗಳನ್ನು ಪಿಜಿಗಳ ನಿಯಂತ್ರಣ ಕ್ರಮಕ್ಕೆ ಮುಂದಾಗಿದೆ. ಮೇಲ್ನೋಟಕ್ಕೆ ಇಲ್ಲೂ ಪಿಜಿಗಳಲ್ಲಿ ವಾಸ್ತವ್ಯ ಇರುವವರ ಸಮಸ್ಯೆಗಳನ್ನು ಅರಿತು ಅವುಗಳ ಪರಿಹರಿಸುವ, ಪಿಜಿ ವಾಸಿಗಳ ಸ್ನೇಹಿಯಾಗಿರುವ ‘ಪಿಜಿ ನೀತಿ’ಯೊಂದನ್ನು ರೂಪಿಸುವುದು ಬಿಬಿಎಂಪಿಯ ಆದ್ಯತೆಯಾಗಿಲ್ಲ ಎಂಬ ಅಭಿಪ್ರಾಯ ಮೂಡಿದೆ.

ನಿಯಮಗಳಿಗೆ ಬೆಲೆಯಿಲ್ಲ: ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ 1976ರ ಪ್ರಕಾರ ಬಿಬಿಎಂಪಿಯ ಆರೋಗ್ಯ ವಿಭಾಗದಿಂದ ಟ್ರೇಡ್‌ ಲೈಸನ್ಸ್‌ ಪಡೆದುಕೊಂಡಿರಬೇಕು. ಪಿಜಿಯಲ್ಲಿರುವ ಕೊಠಡಿಗಳಿಗೆ ಅನುಗುಣವಾಗಿ ಲೈಸೆನ್ಸ್‌ ಶುಲ್ಕ ನಿಗದಿಯಾಗಬೇಕು. ಈ ಲೈಸೆನ್ಸ್‌ ಅನ್ನು ಪಿಜಿ ಆವರಣದಲ್ಲಿ ಪ್ರದರ್ಶಿಸಬೇಕು. ಬಿಬಿಎಂಪಿಯ ಆರೋಗ್ಯ ವಿಭಾಗವು ಪಿಜಿಗಳಲ್ಲಿನ ಸ್ವತ್ಛತೆ ಮತ್ತು ಪೊಲೀಸ್‌ ಇಲಾಖೆಯು ಸುರಕ್ಷತೆಯ ಹೊಣೆ ನಿರ್ವಹಿಸಬೇಕು. ಒಂದು ವೇಳೆ ಮೂಲ ಸೌಕರ್ಯ ನೀಡದಿದ್ದರೆ ಪಿಜಿ ಮಾಲೀಕರ ವಿರುದ್ದ ಬಿಬಿಎಂಪಿಗೆ ದೂರು ನೀಡುವ ಅವಕಾಶವಿದೆ. ಶುಲ್ಕ ಪಾವತಿಯ ರಿಸಿಪ್ಟ್ ಇದ್ದರೆ ನ್ಯಾಯಾಲಯದ ಕದ ತಟ್ಟುವ ಅವಕಾಶವೂ ಇದೆ.

ಪಿಜಿಗಳು ವಾಣಿಜ್ಯ ಚಟುವಟಿಕೆ ಆಗಿರುವುದರಿಂದ ನೀರು ಮತ್ತು ವಿದ್ಯುತ್‌ಗೆ ವಾಣಿಜ್ಯ ದರ ಪಾವತಿಸಬೇಕು. ಆದರೆ, ವಾಣಿಜ್ಯ ದರ ಪಾವತಿಯ ಉಸಾಬರಿ ಬೇಡ ಎಂದು ಬಹುತೇಕ ಮಾಲೀಕರು ತಮ್ಮ ಪಿಜಿಗೆ ಟ್ರೇಡ್‌ ಲೈಸೆನ್ಸ್‌ ಪಡೆಯುವ ಗೊಡವೆಗೆ ಹೋಗುತ್ತಿಲ್ಲ. ಇದರ ಜೊತೆಗೆ ಪಿಜಿ ಮಾಲೀಕರು ತಮ್ಮಲ್ಲಿರುವ ನಿವಾಸಿಗಳ ಸುರಕ್ಷತೆಗೆ ಹೊಣೆಗಾರರಾಗಿರುತ್ತಾರೆ. ತಮ್ಮಲ್ಲಿರುವರ ಗುರುತಿನ ಪತ್ರದ ಫೋಟೋಕಾಪಿ, ವೈಯಕ್ತಿಕ ಮಾಹಿತಿ, ಕಚೇರಿ ವಿಳಾಸ, ಸಂಪರ್ಕ ಸಂಖ್ಯೆ ಮತ್ತು ತುರ್ತು ಸಂಪರ್ಕ ಸಂಖ್ಯೆಯನ್ನು ಮಾಲೀಕರು ಇಟ್ಟುಕೊಳ್ಳಬೇಕು. ಆದರೆ, ಹಲವು ಪಿಜಿಗಳು ಇಂದಿಗೂ ಈ ಮಾಹಿತಿಯನ್ನೇ ಪಡೆಯುತ್ತಿಲ್ಲ

ಆಟಕ್ಕಿದ್ದು ಲೆಕ್ಕಕ್ಕೆ ಸಿಗದ ಪಿಜಿಗಳು!

ರಾಜ್ಯ ರಾಜಧಾನಿ ಯಲ್ಲಿ ಎಷ್ಟು ಪಿಜಿಗಳಿವೆ ಎಂಬ ಲೆಕ್ಕ ಯಾರಲ್ಲಿಯೂ ಇಲ್ಲ. 2013ರಲ್ಲಿ ಬಿಬಿಎಂಪಿಯಿಂದ ಅನುಮತಿ ಪಡೆದ 272 ಪಿಜಿಗಳಿದ್ದರೆ ಪ್ರಸ್ತುತ 1,500 ಪಿಜಿಗಳು ನೋಂದಾಯಿಸಲ್ಪಟ್ಟಿದೆ. ಉಳಿದಂತೆ ಅಧಿಕಾರಿಗಳನ್ನು ಕೇಳಿದರೆ ಐದರಿಂದ ಆರು ಸಾವಿರ ಪಿಜಿಗಳು ಇರಬಹುದು ಎಂದು ಅಂದಾಜು ಲೆಕ್ಕ ನೀಡುತ್ತಾರೆ. ಅದೇ ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಪ್ರಕಾರ ನಗರದಲ್ಲಿ 20 ಸಾವಿರದಿಂದ 25 ಸಾವಿರದವರೆಗೆ ಇವೆ. ಈ ಪಿಜಿಗಳಲ್ಲಿ 18 ಲಕ್ಷದಿಂದ 20 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಪಿಜಿ ಉದ್ದಿಮೆ ಇಂದು ಸಾವಿರಾರು ಕೋಟಿ ರೂ. ವ್ಯವಹಾರವಾಗಿ ಬದಲಾಗಿದೆ ಎಂಬುದು ಸ್ಪಷ್ಟ.

ಹೆಚ್ಚಿದ ಮನೆ ಬಾಡಿಗೆ, ಪಿಜಿಗಳಿಗೆ ಬೇಡಿಕೆ!

ಮನೆ ಬಾಡಿಗೆ ದರ ಏರಿಕೆ ಆಗಿರುವುದರಿಂದ ಪರಿಸ್ಥಿತಿ ಲಾಭ ಪಡೆದುಕೊಳ್ಳುವ ಮನಸ್ಥಿತಿಯೊಂದಿಗೆ ಯಾವುದೇ ಪೂರ್ವಸಿದ್ಧತೆ, ಅನುಭವಗಳಿಲ್ಲದ ವ್ಯಕ್ತಿಗಳು ಸಹ ಪಿಜಿ ನಡೆಸಲು ಮುಂದಾಗುತ್ತಿದ್ದಾರೆ. ನಗರದಲ್ಲಿ ಪಿಜಿಗಳ ಕನಿಷ್ಠ ಬಾಡಿಗೆ ತಿಂಗಳಿಗೆ ನಾಲ್ಕು ಸಾವಿರ ರೂ.ನಿಂದ ಆರಂಭಗೊಂಡು ಸೌಲಭ್ಯಕ್ಕೆ ಅನುಗುಣವಾಗಿ 25 ಸಾವಿರ ರೂ. ತನಕವೂ ಇದೆ. ಸಾಮಾನ್ಯವಾಗಿ 6 ಸಾವಿರ ರೂ.ನಿಂದ 8 ಸಾವಿರ ರೂ.ವರೆಗೆ ಮಾಸಿಕ ಬಾಡಿಗೆ ಇರುವ ಪಿಜಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಮೆಟ್ರೋ ನಿಲ್ದಾಣ, ಬಸ್‌ ನಿಲ್ದಾಣಗಳಿಗೆ ಸಮೀಪವಿರುವ ಪಿಜಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಲಭ್ಯ ಇರುವ ಮಾಹಿತಿ ಪ್ರಕಾರ 1,500 ಪಿಜಿಗಳು ನಮ್ಮಲ್ಲಿ ನೋಂದಾಯಿಸಿಕೊಂಡಿವೆ. ಉಳಿದಂತೆ ಗಣತಿ ಪ್ರಕ್ರಿಯೆ ನಡೆಯುತ್ತಿದೆ. ವರದಿ ಬಂದ ಬಳಿಕ ಪಿಜಿಗಳಿಗೆ ಯಾವ ರೀತಿ ನಿಯಮಗಳನ್ನು ರೂಪಿಸಬೇಕು ಎಂದು ನಾವು ಯೋಚಿಸುತ್ತೇವೆ. ●ಡಾ.ಕೆ.ವಿ.ತ್ರಿಲೋಕಚಂದ್ರ, ಬಿಬಿಎಂಪಿ (ಆರೋಗ್ಯ)ವಿಶೇಷ ಆಯುಕ್ತ.

ಪೇಯಿಂಗ್‌ ಗೆಸ್ಟ್‌ ಗಳನ್ನು ನಿಯಂತ್ರಿಸಲು ಬಿಬಿಎಂಪಿ ಅಥವಾ ಸರ್ಕಾರದಲ್ಲಿ ಯಾವುದೇ ನಿಯಮಗಳಿಲ್ಲ. ಎಲ್ಲವನ್ನೂ ಹೊಸದಾಗಿ ರೂಪಿಸಬೇಕಾಗಿದೆ. ಒಂದು ಕೋಣೆಯಲ್ಲಿ ಎಷ್ಟು ಮಂದಿ ಅತಿಥಿಗಳಿಗೆ ಅವಕಾಶ ನೀಡಬೇಕು, ಶೌಚಾಲಯ, ಸಿಸಿ ಟಿವಿ, ನೈರ್ಮಲ್ಯೀಕರಣ, ಸ್ವತ್ಛತೆ, ಮತ್ತಿತರ ವಿಷಯಗಳನ್ನು ಕುರಿತು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ● ತುಷಾರ್‌ ಗಿರಿನಾಥ್‌. ಬಿಬಿಎಂಪಿ ಮುಖ್ಯ ಆಯುಕ್ತ.

ಲಕ್ಷಾಂತರ ಜನರಿಗೆ ಸುರಕ್ಷಿತ ಆಶ್ರಯ ನೀಡುವ ತಾಣವಾದ ಪಿಜಿ ನಡೆಸುವುದು ಸಾಮಾಜಿಕ ಕೆಲಸ. ಜೀವನಾಧಾರವಾಗಿ ಪಿಜಿ ನಡೆಸುವವರೇ ಹೆಚ್ಚು. ಶೇ.15 ಮಂದಿ ಪಿಜಿ ಉದ್ದಿಮೆ ರೀತಿ ನಡೆಸುತ್ತಿದ್ದಾರೆ. ಪಿಜಿಗಳು ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ. ತಿಂಗಳಿಗೊಮ್ಮೆ ಬಾಡಿಗೆ ಪಾವತಿಯಿಂದ ಆದಾಯ ಬರುತ್ತದೆಯೇ ಹೊರತು ನಿತ್ಯ ವ್ಯವಹಾರ ನಡೆಯುವುದಿಲ್ಲ. ಸರ್ಕಾರ ಮನಸೋ ಇಚ್ಚಿ ನಿಯಮಗಳನ್ನು ರೂಪಿಸಿದರೆ ಪಿಜಿ ನಡೆಸುವುದು ಕಠಿಣವಾಗಲಿದೆ. ●ಅರುಣ್‌ಕುಮಾರ್‌, ಅಧ್ಯಕ್ಷ, ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ.

●ರಾಕೇಶ್‌ ಎನ್‌.ಎಸ್‌.

 

 

Advertisement

Udayavani is now on Telegram. Click here to join our channel and stay updated with the latest news.

Next