Advertisement

“ದ್ರೋಣ’ನ ಹೊಡೆದಾಟ ಜೊತೆಗೆ ನೀತಿಪಾಠ

11:08 AM Mar 08, 2020 | Lakshmi GovindaRaj |

ಸರ್ಕಾರಿ ಶಾಲೆಗಳು ಯಾಕೆ ಇನ್ನೂ ಹಿಂದುಳಿದಿವೆ? ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫ‌ಲಿತಾಂಶ ಬರದಿರಲು ಕಾರಣವೇನು? ಸರ್ಕಾರಿ ಶಾಲೆಗಳಲ್ಲಿ ಇರುವ ಅವ್ಯವಸ್ಥೆಗೆ ಕಾರಣಗಳೇನು? ಸರ್ಕಾರಿ ಶಾಲೆಗಳ ಮಕ್ಕಳ ಮನಸ್ಥಿತಿ ಹೇಗಿರುತ್ತದೆ? ಒಬ್ಬ ಶಿಕ್ಷಕನಾದವನು ತನ್ನ ಇಚ್ಛೆಯಿಂದ ಸರ್ಕಾರಿ ಶಾಲೆಯನ್ನು, ಅಲ್ಲಿರುವ ಮಕ್ಕಳನ್ನು ಹೇಗೆಲ್ಲ ಬದಲಾಯಿಸಬಲ್ಲ…..ಇದೆಲ್ಲ ಸಂಗತಿಗಳನ್ನು ಇಟ್ಟುಕೊಂಡು ಈ ವಾರ ತೆರೆಮೇಲೆ ಬಂದಿರುವ ಚಿತ್ರ “ದ್ರೋಣ’.

Advertisement

ಪ್ರಸ್ತುತ ಚರ್ಚೆಯಲ್ಲಿರುವ ಒಂದು ಗಂಭೀರ ವಿಷಯವನ್ನು ಇಟ್ಟುಕೊಂಡು, ಅದಕ್ಕೊಂದಿಷ್ಟು ಕಮರ್ಶಿಯಲ್‌ ಎಂಟರ್‌ಟೈನ್ಮೆಂಟ್‌ ಅಂಶಗಳನ್ನು ಸೇರಿಸಿ, ಮಾಸ್‌ ಮತ್ತು ಕ್ಲಾಸ್‌ ಎರಡೂ ವರ್ಗದ ಆಡಿಯನ್ಸ್‌ಗೂ ಇಷ್ಟವಾಗುವಂಥ ಒಂದಷ್ಟು ಸಿದ್ಧ ಸೂತ್ರವನ್ನು ಇಟ್ಟುಕೊಂಡು “ದ್ರೋಣ’ನನ್ನು ತೆರೆಮೇಲೆ ತಂದಿದ್ದಾರೆ ನಿರ್ದೇಶಕ ಪ್ರಮೋದ್‌ ಚಕ್ರವರ್ತಿ. ಹೀಗಾಗಿ ಚಿತ್ರದ ವಸ್ತು ವಿಷಯ ಸ್ವಲ್ಪ ಅಪರೂಪದ್ದು ಎನ್ನಬಹುದಾದರೂ, ಅದನ್ನು ನಿರೂಪಿಸಿರುವ ರೀತಿ ಅಪರೂಪದ್ದು ಅಥವಾ ಹೊಸತು ಎನ್ನುವಂತಿಲ್ಲ.

ಚಿತ್ರಕಥೆಯಲ್ಲಿ ಬರುವ ಕೆಲ ದೃಶ್ಯಗಳನ್ನು ನೋಡಿದಾಗ, ಅಲ್ಲಲ್ಲಿ ಬೇರೆ ಭಾಷೆಯ ಚಿತ್ರಗಳ ಛಾಯೆ ಇಣುಕಿ ಹೋದಂತೆ ಭಾಸವಾಗುತ್ತದೆ. “ದ್ರೋಣ’ನಲ್ಲಿ ಆಯ್ಕೆ ಮಾಡಿಕೊಂಡಿರುವ ವಿಷಯವನ್ನು ಇನ್ನೂ ಪರಿಣಾಮಕಾರಿಯಾಗಿ ಚಿತ್ರಕಥೆ, ನಿರೂಪಣೆಯಲ್ಲಿ ಹೇಳುವ ಸಾಧ್ಯತೆಯಿತ್ತು. ಆದರೆ, ಆ ಅವಕಾಶಗಳನ್ನು ನಿರ್ದೇಶಕರು ಬಿಟ್ಟುಕೊಟ್ಟಂತಿದೆ. ಸರ್ಕಾರಿ ಶಾಲೆಗಳ ವಸ್ತು ಸ್ಥಿತಿ ಚಿತ್ರಣ, ಖಾಸಗಿ ಶಾಲೆಗಳ ಪ್ರಭಾವ. ಪೋಷಕರು, ಶಿಕ್ಷಕರು, ಅಧಿಕಾರಿಗಳು, ರಾಜಕಾರಣಿಗಳು ಹೀಗೆ ವ್ಯವಸ್ಥೆಯೊಳಗೆ ಪ್ರತಿನಿಧಿಸುವ ಮತ್ತು ಪ್ರತಿಧ್ವನಿಸುವ ಯಾವ ಅಂಶಗಳೂ “ದ್ರೋಣ’ ಚಿತ್ರದಲ್ಲಿ ತಕ್ಷಣಕ್ಕೆ ನೋಡುಗರಿಗೆ ಕನೆಕ್ಟ್ ಆಗುವುದಿಲ್ಲ.

ವಿಚಾರಗಳು, ವ್ಯಕ್ತಿತ್ವಗಳು, ಹಿನ್ನೆಲೆ, ಕಥಾವಸ್ತು ಇವೆಲ್ಲವನ್ನು ಇಟ್ಟುಕೊಂಡು “ದ್ರೋಣ’ನನ್ನು ಇನ್ನೂ ಅರ್ಥ ಪೂರ್ಣವಾಗಿ ತೆರೆಮೇಲೆ ಕಟ್ಟಿಕೊಡಬಹುದಿತ್ತು. ಇನ್ನು ಕಲಾವಿದರ ಅಭಿನಯದ ಬಗ್ಗೆ ಹೇಳುವುದಾದರೆ, ಇಲ್ಲಿಯವರೆಗೆ ಹತ್ತಾರು ವಿಭಿನ್ನ ಪಾತ್ರಗಳಿಗೆ ಜೀವತುಂಬಿ ಸೈ ಎನಿಸಿಕೊಂಡಿರುವ ನಟ ಶಿವರಾಜ ಕುಮಾರ್‌ “ದ್ರೋಣ’ ಚಿತ್ರದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಶಿಕ್ಷಕನ ಪಾತ್ರವಾದರೂ ಒಂದು ಕಡೆ ಮಕ್ಕಳಿಗೆ, ಸಮಾಜಕ್ಕೆ ಬೋಧನೆ ಮಾಡುವ ಶಿವಣ್ಣ ಮತ್ತೂಂದೆಡೆ ವಿಲನ್‌ಗಳ ಮೈ-ಕೈ ಮುರಿಯುತ್ತಿರುತ್ತಾರೆ. ಹೀಗೆ ಮಾಸ್‌ ಮತ್ತು ಕ್ಲಾಸ್‌ ಎರಡೂ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಶಿವಣ್ಣ ಪಾತ್ರವನ್ನು ಹೆಣೆದಿದ್ದಾರೆ ನಿರ್ದೇಶಕರು. ಎಂದಿನಂತೆ ತಮ್ಮ ಪಾತ್ರದಲ್ಲಿ ಅಷ್ಟೇ ಎನರ್ಜಿಟಿಕ್‌ ಆಗಿ ಕಾಣಿಸಿಕೊಂಡಿರುವ ಶಿವಣ್ಣ, ಆರಂಭದಿಂದ ಅಂತ್ಯದವರೆಗೂ ತೆರೆಯಲ್ಲಿ ಆವರಿಸಿಕೊಂಡು ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ. ಉಳಿದಂತೆ ನಾಯಕಿ ಇರಬೇಕು ಎನ್ನುವ ಕಾರಣಕ್ಕಾಗಿಯೇ ನಟಿ ಇನಿಯಾ ಅವರನ್ನು ಕೆಲ ಸನ್ನಿವೇಶಗಳಲ್ಲಿ ಕರೆತಂದಂತಿದೆ.

Advertisement

ರಂಗಾಯಣ ರಘು, ಬಾಬು ಹಿರಣ್ಣಯ್ಯ, ಸ್ವಾತಿ ಶರ್ಮಾ ತಮ್ಮ ಪಾತ್ರವನ್ನು ಅಂದಗಾಣಿಸಿದ್ದಾರೆ. ಇನ್ನುಳಿದಂತೆ ಬಹುತೇಕ ಕಲಾವಿದರದ್ದು ಪರವಾಗಿಲ್ಲ ಎನ್ನಬಹುದಾದ ಅಚ್ಚುಕಟ್ಟು ಅಭಿನಯ. ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಸಂಕಲನ ಕಾರ್ಯ “ದ್ರೋಣ’ನಿಗೆ ತೆರೆಮೇಲೆ ಒಂದಷ್ಟು ಮೆರುಗು ನೀಡಿದೆ. ಚಿತ್ರದ ಹಾಡುಗಳು ಹಾಗೆ ಬಂದು, ಹೀಗೆ ಹೋಗುವಂತಿದ್ದರಿಂದ ಅಷ್ಟಾಗಿ ಕಿವಿಯಲ್ಲಾಗಲಿ, ಮನಸ್ಸಿನಲ್ಲಿ ಉಳಿಯುವುದಿಲ್ಲ.

ಚಿತ್ರ: ದ್ರೋಣ
ನಿರ್ಮಾಣ: ಡಾಲ್ಫಿನ್‌ ಮೀಡಿಯಾ ಹೌಸ್‌
ನಿರ್ದೇಶನ: ಪ್ರಮೋದ್‌ ಚಕ್ರವರ್ತಿ
ತಾರಾಗಣ: ಶಿವರಾಜಕುಮಾರ್‌, ಇನಿಯಾ, ರಂಗಾಯಣ ರಘು, ಬಾಬು ಹಿರಣ್ಣಯ್ಯ, ಸ್ವಾತಿ ಶರ್ಮಾ, ರವಿ ಕಿಶನ್‌, ನಾರಾಯಣ ಸ್ವಾಮಿ, ರೇಖಾದಾಸ್‌, ರಾಮಸ್ವಾಮಿ ಮತ್ತಿತರರು.

* ಜಿ.ಎಸ್‌ ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next