ಹೊಸದಿಲ್ಲಿ: ಭಾರತದಲ್ಲಿ ವಿದೇಶಿ ವಿವಿಗಳ ಕ್ಯಾಂಪಸ್ ಒಳಗೊಂಡ “ಅತ್ಯುತ್ಕೃಷ್ಟ ದರ್ಜೆ ಮಾನ್ಯತೆಯ ಶಿಕ್ಷಣ ಸಂಸ್ಥೆ’ಗಳ (ಐಒಇ) ಕಾರ್ಯಾರಂಭಕ್ಕೆ ಕೇಂದ್ರ ಸರಕಾರ ವೇಗ ತುಂಬಿದ್ದು, ಈ ಸಂಬಂಧ ಯುಜಿಸಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಉನ್ನತ ಶಿಕ್ಷಣಕ್ಕೆ ಹೊರದೇಶಗಳಿಗೆ ತೆರಳುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಸರಕಾರ ಭಾರತದಲ್ಲಿಯೇ ವಿದೇಶಿ ವಿವಿಗಳ ಕ್ಯಾಂಪಸ್ ತೆರೆಯಲು ಯೋಜನೆ ರೂಪಿಸಿತ್ತು. ಭಾರತೀಯ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿದೇಶಿ ವಿವಿ ಕ್ಯಾಂಪಸ್‌ಗಳು ಕಾರ್ಯನಿರ್ವಹಿಸುವ ಮತ್ತು ವಿದೇಶದಲ್ಲಿ ಭಾರತದ ವಿವಿಗಳು ಕ್ಯಾಂಪಸ್ ತೆರೆಯುವ ಕುರಿತ ಈ ಯೋಜನೆಗೆ 20 ಸಂಸ್ಥೆಗಳನ್ನಷ್ಟೇ ಆಯ್ಕೆ ಮಾಡಲಾಗಿದೆ. ಇದರಲ್ಲಿ 10 ಸರಕಾರಿ, 10 ಖಾಸಗಿ ಸಂಸ್ಥೆಗಳು ಸೇರಿವೆ.
ಮಾರ್ಗಸೂಚಿಯೇನು?: 5 ವರ್ಷಗಳಲ್ಲಿ ಗರಿಷ್ಠ 3 ಕ್ಯಾಂಪಸ್‌ಗಳನ್ನಷ್ಟೇ ಆರಂಭಿಸಬಹುದು. ಒಂದು ವರ್ಷದಲ್ಲಿ 1ಕ್ಕಿಂತ ಹೆಚ್ಚು ಕ್ಯಾಂಪಸ್ ತೆರೆಯುವಂತಿಲ್ಲ. ಭಾರತದಲ್ಲಿ ಕ್ಯಾಂಪಸ್ ತೆರೆಯಬಯಸುವ ವಿದೇಶಿ ವಿವಿಗಳಿಗೆ ಶಿಕ್ಷಣ, ಗೃಹ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅನುಮತಿ ಕಡ್ಡಾಯ.
ಅನುಮತಿಗೆ ಅರ್ಜಿ ಸಲ್ಲಿಸುವಾಗ 10 ವರ್ಷದ ಕಾರ್ಯತಂತ್ರ ಯೋಜನೆ ಮತ್ತು 5 ವರ್ಷದ ಅನುಷ್ಠಾನ ಯೋಜನೆ ಕುರಿತ ವರದಿ ಸಲ್ಲಿಸಬೇಕು. ಶಿಕ್ಷಣ ತಜ್ಞರು, ಅಧ್ಯಾಪಕರ ನೇಮಕಾತಿ, ವಿದ್ಯಾರ್ಥಿಗಳ ಪ್ರವೇಶಾತಿ, ಸಂಶೋಧನೆ, ಮೂಲಸೌಕರ್ಯ ಅಭಿವೃದ್ಧಿ, ಆರ್ಥಿಕತೆ ಮತ್ತು ಆಡಳಿತಾತ್ಮಕ ಯೋಜನೆಗಳನ್ನು ಇದರಲ್ಲಿ ನಮೂದಿಸಬೇಕು. ಕನಿಷ್ಠ ಶೇ.60 ಅಧ್ಯಾಪಕ ಸದಸ್ಯರನ್ನು ಶಾಶ್ವತ ಹುದ್ದೆಗೆ ನೇಮಿಸಿಕೊಳ್ಳಬೇಕು. ಪ್ರತೀ ಸಂಸ್ಥೆಗಳೂ ಕನಿಷ್ಠ 500 ವಿದ್ಯಾರ್ಥಿಗಳೊಂದಿಗೆ ನಿತ್ಯದ ತರಗತಿ ನಡೆಸಬೇಕು ಎಂದೂ ಸೂಚಿಸಿದೆ.
ಮಾನ್ಯತೆ ಪಡೆದ ವಿವಿಗಳು :
ಐಐಟಿ- ದಿಲ್ಲಿ, ಐಐಟಿ- ಬಾಂಬೆ, ಬೆಂಗಳೂರಿನ ಐಐಎಸ್ಸಿ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಬಿಐಟಿಎಸ್ ಪಿಳನಿ, ಜಿಯೊ ಇನ್‌ಸ್ಟಿಟ್ಯೂಟ್, ದಿಲ್ಲಿ ವಿವಿ, ಬನಾರಸ್ ಹಿಂದೂ ವಿವಿ, ಹೈದರಾಬಾದ್ ವಿವಿ, ಐಐಟಿ- ಮದ್ರಾಸ್, ಐಐಟಿ- ಖರಗುºರ… “ಐಒಇ’ ಮಾನ್ಯತೆ ಪಡೆದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾಗಿವೆ.