Advertisement

ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರಿಗೆ “ವನಿತಾ ಸಂಗಾತಿ’

10:43 AM Dec 14, 2021 | Team Udayavani |

ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌ ಸೇವೆ ಒದಗಿಸಿದ ಬೆನ್ನಲ್ಲೇ ಗಾರ್ಮೆಂಟ್ಸ್‌ಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರ ಬಿಎಂಟಿಸಿ ರಿಯಾಯಿತಿ ದರದ ಬಸ್‌ ಪಾಸ್‌ ಬೇಡಿಕೆಯನ್ನೂ ಈಡೇರಿಸಿರುವ ಸರ್ಕಾರ, “ವನಿತಾ ಸಂಗಾತಿ’ ಯೋಜನೆಯನ್ನು ಜಾರಿಗೊಳಿಸಿದೆ.

Advertisement

ಈ ವನಿತಾ ಸಂಗಾತಿ ಯೋಜನೆಯಿಂದ ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಪೈಕಿ 1 ಲಕ್ಷ ಮಹಿಳಾ ಕಾರ್ಮಿಕರಿಗೆ ಅನುಕೂಲವಾಗಲಿದೆ. ವಾಸದ ಸ್ಥಳದಿಂದ ಕೆಲಸದ ಸ್ಥಳಕ್ಕೆ ಹೋಗಿ ಬರುವುದಕ್ಕೆ ಉಚಿತ ಬಸ್‌ ಪಾಸ್‌ ಸೇವೆ ನೆರವಾಗಲಿದೆ ಎಂದು ಕಾರ್ಮಿಕ ಇಲಾಖೆ ಹೇಳಿದೆ.

ಬೆಂಗಳೂರಿನಲ್ಲಿ ಗಾರ್ಮೆಂಟ್ಸ್‌ ಉದ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ಕಾರ್ಮಿಕರಿಗೆ ಬಿಎಂಟಿಸಿ ಹಾಗೂ ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್‌ ಪಾಸ್‌ ನೀಡುವ “ವನಿತಾ ಸಂಗಾತಿ’ ಯೋಜನೆಯನ್ನು ಹಿಂದಿನ ಬಜೆಟ್‌ ನಲ್ಲಿ ಘೋಷಿಸಲಾಗಿತ್ತು. ಆದರೆ, ಕೊರೊನಾ ಕಾರಣದಿಂದ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. 2021-22ನೇ ಸಾಲಿನಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತರಲು ಘೋಷಿಸಲಾಗಿತ್ತು.

ಇದನ್ನೂ ಓದಿ;- ಸ್ಲಂ ನಿವಾಸಿಗಳ ಮನೆ ನಿರ್ಮಾಣಕ್ಕೆ ಮನವಿ

ಅದನ್ನು ಈಗ ಕಾರ್ಮಿಕ ಇಲಾಖೆ ಕಾರ್ಯಗತಗೊಳಿಸುತ್ತಿದೆ. ಮಹಿಳಾ ಕಾರ್ಮಿಕರಿಗೆ ಸಾರಿಗೆ ಸುವ್ಯವಸ್ಥೆಗೊಳಿಸುವ ಮತ್ತು ಅವರ ಹಿತರಕ್ಷಣೆ ಕಾಪಾಡುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಬಿಎಂಟಿಸಿ ಮತ್ತು ಕಾರ್ಮಿಕ ಇಲಾಖೆಯಡಿಯ ಸಹಭಾಗಿತ್ವದಲ್ಲಿ ಮಹಿಳಾ ಕಾರ್ಮಿಕರಿಗೋಸ್ಕರ ರಿಯಾಯಿತಿ ದರದಲ್ಲಿ ಬಸ್‌ ಪಾಸ್‌ ನೀಡಲು, ಈಗಾಗಲೇ ಸರ್ಕಾರವು 30 ಕೋಟಿ ರೂ.ವೆಚ್ಚದ ಹಣವನ್ನು ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿಗೆ ಬಿಡುಗಡೆಗೊಳಿಸಲಾಗಿದೆ.

Advertisement

ರಾಜ್ಯಾದ್ಯಂತ ಒಟ್ಟು ನಾಲ್ಕು ಲಕ್ಷ ಜನರು ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ನಗರದ ಗಾರ್ಮೆಂಟ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡೂವರೆಯಿಂದ ಮೂರು ಲಕ್ಷ ಕಾರ್ಮಿಕರಲ್ಲಿ ಶೇ. 85 ರಷ್ಟು ಮಹಿಳಾ ಕಾರ್ಮಿಕರಿದ್ದಾರೆ. ಇವರಿಗೆ ಸರಿಯಾದ ಸಮಯಕ್ಕೆ ಗಾರ್ಮೆಂಟ್ಸ್‌ಗಳಿಗೆ ಹೋಗಲು ಹಾಗೂ ಮಹಿಳೆಯರ ಮೇಲಾಗುವ ಶೋಷಣೆ ಮತ್ತು ದೌರ್ಜನ್ಯದಿಂದ ಕಾಪಾಡುವ ದೃಷ್ಟಿಯಿಂದ ವನಿತಾ ಸಂಗಾತಿಯನ್ನು ಅನುಷ್ಠಾನಗೊಳಿಸಲಾಗಿದೆ.

ಈ ಯೋಜನೆಯು ಗಾರ್ಮೆಂಟ್ಸ್‌ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದು, ಒಟ್ಟು ವೆಚ್ಚದಲ್ಲಿ ಗಾರ್ಮೆಂಟ್ಸ್‌ ಮಾಲೀಕರು ಶೇ.60 ರಷ್ಟು, ಮಹಿಳಾ ಫ‌ಲಾನುಭವಿ ಕಾರ್ಮಿಕರು ಶೇ. 10 ರಷ್ಟು, ಬಿಎಂಟಿಸಿ ಶೇ.10 ರಷ್ಟು ಹಾಗೂ ಸರ್ಕಾರ ಉಳಿದ ಶೇ.20 ರಷ್ಟು ಹಣವನ್ನು ಪಾವತಿಸಲಾಗುತ್ತದೆ. ಈ ಯೋಜನೆಗೆ ಕಾಲಮಿತಿಯನ್ನು ನಿಗದಿಪಡಿಸಲಾಗಿದ್ದು, ಇದರ ಸಂಪೂರ್ಣ ಜವಾಬ್ದಾರಿಯನ್ನು ಕಾರ್ಮಿಕ ಇಲಾಖೆಯ ಆಯುಕ್ತರಿಗೆ ವಹಿಸಲಾಗಿದೆ.

“ನಗರದ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರು ಆದಷ್ಟು ಗಾರ್ಮೆಂಟ್ಸ್‌ಗಳಿಗೆ ಸಮೀಪದಲ್ಲಿ ವಾಸವಿರುತ್ತಾರೆ ಅಥವಾ 8ರಿಂದ 10 ಜನ ಸೇರಿಕೊಂಡು ಆಟೋ ಬಾಡಿಗೆ ಮಾಡಿಕೊಂಡು ಬರುವವರ ಸಂಖ್ಯೆಯೇ ಹೆಚ್ಚು. ಇದರಿಂದಾಗಿ ಬಿಎಂಟಿಸಿ ಬಸ್‌ ರಿಯಾಯಿತಿ ಪಾಸ್‌ ವ್ಯವಸ್ಥೆ ಶೇ.2 ರಷ್ಟು ಅನುಕೂಲಕರವಾಗುವುದಿಲ್ಲ.” ಪ್ರತಿಭಾ, ಗಾರ್ಮೆಂಟ್ಸ್‌ ಹಾಗೂ ಟೆಕ್ಸ್‌ಟೈಲ್‌ ಕಾರ್ಮಿಕ ಒಕ್ಕೂಟದ ಅಧ್ಯಕ್ಷೆ

ಮಾನದಂಡಗಳ ಮೂಲಕ ಫ‌ಲಾನುಭವಿ ಆಯ್ಕೆ: ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರಿಗೆ ವನಿತಾ ಸಂಗಾತಿ ಯೋಜನೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಪಾರದರ್ಶಕ ಮಾನದಂಡಗಳ ಮೂಲಕ ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

  • – ಭಾರತಿ ಸಜ್ಜನ್‌
Advertisement

Udayavani is now on Telegram. Click here to join our channel and stay updated with the latest news.

Next