Advertisement

ಪೊಲೀಸನ ಮಗನೇ ಕಳವಿನ ಸೂತ್ರಧಾರಿ!

10:57 AM May 01, 2019 | Suhan S |

ಹುಬ್ಬಳ್ಳಿ: ಮಹಿಳೆಯೊಬ್ಬರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಅಂತಾರಾಜ್ಯ ಕಳ್ಳರಿಬ್ಬರನ್ನು ವಿದ್ಯಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ 4.15ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಹಾನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಗೋವಾದ ಪರಿವರಿಯಂ ಮೂಲದ ಇಲ್ಲಿನ ಉಣಕಲ್ಲ ಸಾಯಿನಗರ ನಿವಾಸಿ ಗೌರೇಶ ಆರ್‌. ಕೇರಕರ ಹಾಗೂ ಹಳೇಹುಬ್ಬಳ್ಳಿ ಚನ್ನಪೇಟೆ ಲತ್ತಿಪೇಟೆಯ ಕುಮಾರ ಎಂ. ಸುಣಗಾರ ಬಂಧಿತರಾಗಿದ್ದಾರೆ ಎಂದರು.

ಗೌರೇಶ ಮೇಲೆ ಗೋವಾದಲ್ಲಿ 14 ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ 3 ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಕಾರಾಗೃಹ ಶಿಕ್ಷೆ ಕೂಡ ಆಗಿದೆ. ಈತ ಗೋವಾ ಪೊಲೀಸ್‌ ಇಲಾಖೆಯಲ್ಲಿನ ಎಎಸ್‌ಐ ಮಗನಾಗಿದ್ದು, ಅವರು ಇವನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ಹೀಗಾಗಿ ನಗರದಲ್ಲಿ ವಾಸಿಸುತ್ತಿದ್ದ. ಆಟೋ ರಿಕ್ಷಾ ಚಾಲಕನಾದ ಕುಮಾರ ಸುಣಗಾರ ಗೋವಾಕ್ಕೆ ಹೋಗಿದ್ದಾಗ ಗೌರೇಶನ ಪರಿಚಯವಾಗಿತ್ತು. ಅಂದಿನಿಂದ ಇಬ್ಬರು ಕೂಡಿ ಸರಗಳ್ಳತನ ಮಾಡುತ್ತಿದ್ದರು ಎಂದಿ ವಿವರ ನೀಡಿದರು.

ಬಂಧಿತರಿಂದ ನಗರದ ವಿದ್ಯಾನಗರ, ಹಳೇಹುಬ್ಬಳ್ಳಿ, ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನದ ಒಟ್ಟು ನಾಲ್ಕು ಪ್ರಕರಣ ಭೇದಿಸಿ, ಅಂದಾಜು 4,15,500 ರೂ. ಮೌಲ್ಯದ 100 ಗ್ರಾಂ ತೂಕವುಳ್ಳ ನಾಲ್ಕು ಚಿನ್ನದ ಸರಗಳು, ಕಳ್ಳತನಕ್ಕೆ ಬಳಸುತ್ತಿದ್ದ ಬೈಕ್‌, ಎರಡು ಮೊಬೈಲ್, ಖಾರದಪುಡಿ, ನೇಲ್ ಕಟರ್‌ ವಶಪಡಿಸಿಕೊಳ್ಳಲಾಗಿದೆ. ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಮೂವರು ಪೇದೆಗಳಿಗೆ ತಲಾ 5 ಸಾವಿರ ಹಾಗೂ ತಂಡಕ್ಕೆ 5 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ನಾಗೇಶ ಡಿ.ಎಲ್., ಎಸಿಪಿ ಶ್ರೀಕಾಂತ ಕಟ್ಟಿಮನಿ, ಇನ್ಸ್‌ಪೆಕ್ಟರ್‌ ಆನಂದ ಒನಕುದ್ರೆ ಮೊದಲಾದವರಿದ್ದರು.

Advertisement

ನಾಲ್ಕು ಪ್ರಕರಣಕ್ಕೆ ಮೋಕ್ಷ:

ಎಚ್‌ಡಿಬಿಆರ್‌ಟಿಎಸ್‌ ಮಾರ್ಗದಲ್ಲಿ ಚಿಗರಿ ಬಸ್‌ ಹಾಗೂ ಆಂಬ್ಯುಲೆನ್ಸ್‌ ಸೇರಿದಂತೆ ಅಗತ್ಯ ವಾಹನ ಹೊರತುಪಡಿಸಿ ಇನ್ನಿತರೆ ವಾಹನಗಳು ಓಡಾಡುವಂತಿಲ್ಲ. ಅಂತಹ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಹಗಲು ಹೊತ್ತಿನಲ್ಲಿ ಲಾರಿಗಳ ನಗರ ಪ್ರವೇಶ ನಿರ್ಬಂಧಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ. ಆಟೋ ರಿಕ್ಷಾಗಳಿಗೆ ಮೀಟರ್‌ ಕಡ್ಡಾಯಗೊಳಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಇದನ್ನು ಕಾರ್ಯಗತಗೊಳಿಸಲು ಆಗಿರಲಿಲ್ಲ. ಈ ಕುರಿತು ಸಂಚಾರ ವಿಭಾಗದ ಡಿಸಿಪಿ, ಎಸಿಪಿ ಅವರೊಂದಿಗೆ ಚರ್ಚಿಸಿ ವಾರದೊಳಗೆ ಜಾರಿಗೊಳಿಸಲಾಗುವುದು. –ಎಂ.ಎನ್‌. ನಾಗರಾಜ, ಹು-ಧಾ ಪೊಲೀಸ್‌ ಆಯುಕ್ತ

ಕಾರ್ಯಾಚರಣೆ ನಡೆದಿದ್ದು ಹೇಗೆ?:

ಬಂಧಿತರು ನಗರದ ವಿವಿಧೆಡೆ ವಾಯುವಿಹಾರ ಮಾಡುತ್ತಿದ್ದ ವೃದ್ಧ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆ ಶಿರೂರ ಪಾರ್ಕ್‌ನಲ್ಲಿ ಮಹಿಳೆಯೊಬ್ಬರ ಸರ ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಗಸ್ತಿನಲ್ಲಿದ್ದ ವಿದ್ಯಾನಗರ ಠಾಣೆ ಇನ್ಸ್‌ಪೆಕ್ಟರ್‌ ಆನಂದ ಒಣಕುದರೆ, ಪೇದೆಗಳಾದ ರಮೇಶ ಹಲ್ಲೆ, ಬಿ.ಎಸ್‌. ಹಚ್ಚಡದ, ಆರ್‌.ಎಂ. ಹೊರಟ್ಟಿ ಖದೀಮರನ್ನು ಬೆನ್ನಟ್ಟಿ ಹಿಡಿಯಲು ಮುಂದಾಗಿದ್ದರು. ಆಗ ಕಳ್ಳರು ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ, ನೇಲ್ ಕಟರ್‌ನಲ್ಲಿದ್ದ ಸಣ್ಣ ಚಾಕುನಿಂದ ಹೆದರಿಸಿ ಪರಾರಿಯಾಗಲು ಯತ್ನಿಸಿದರು. ಆದರೂ ಸಿಬ್ಬಂದಿ ಎದೆಗುಂದದೆ ಇಬ್ಬರನ್ನು ರಾಜೀವನಗರದಲ್ಲಿ ಬೈಕ್‌ ಸಮೇತ ಬಂಧಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next