ಉತ್ತರಪ್ರದೇಶ: ಪೊಲೀಸ್ ಕಾನ್ಸ್ ಟೇಬಲ್ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಪರಿಣಾಮ ಪೊಲೀಸ್ ಕಾನ್ಸ್ ಟೇಬಲ್ ಅಮಾನತುಗೊಂಡಿರುವ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ.
ಇದನ್ನೂಓದಿ:Chikkamagaluru: ಅರಣ್ಯಾಧಿಕಾರಿಗಳ ನಿಂದನೆ, ಕಿತ್ತಾಟ: ಆಡಿಯೋ ವೈರಲ್ ; ಸ್ಥಳೀಯರ ಆಕ್ರೋಶ
ರಿಂಕು ರಾಜೋರಾ ಎಂಬ ಪೊಲೀಸ್ ಕಾನ್ಸ್ ಟೇಬಲ್ ಸಮವಸ್ತ್ರದಲ್ಲಿದ್ದು, ವ್ಯಕ್ತಿಯೊಬ್ಬನನ್ನು ಹಿಡಿದು ಥಳಿಸಿ, ನೆಲದ ಮೇಲೆ ಬಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ತುಳಿಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಸ್ಥಳೀಯ ಮಾಧ್ಯಮಕ್ಕೆ ಪೊಲೀಸ್ ಕಾನ್ಸ್ ಟೇಬಲ್ ನೀಡಿರುವ ಪ್ರತಿಕ್ರಿಯೆ ಪ್ರಕಾರ, ಈ ವ್ಯಕ್ತಿ ರಿಂಕು ಅವರ ಸಹೋದರಿ ಹೆಸರಿನಲ್ಲಿ ಅಶ್ಲೀಲ ಮಾತುಗಳನ್ನಾಡಿದ್ದು, ಇದರಿಂದ ಕೋಪಗೊಂಡು ಆತನಿಗೆ ಥಳಿಸಿರುವುದಾಗಿ ವರದಿಯಾಗಿದೆ.
ಆ ವ್ಯಕ್ತಿ ಅಶ್ಲೀಲ ಭಾಷೆ ಬಳಸಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಿತ್ತೇ ವಿನಃ ಹಾಡಹಗಲೇ ಈ ರೀತಿ ಕ್ರಮ ಕೈಗೊಳ್ಳುವುದು ತಪ್ಪು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಕೂಡಲೇ ರಿಂಕುವನ್ನು ಕರ್ತವ್ಯದಿಂದ ಅಮಾನತುಗೊಳಿಸಿ, ಇಲಾಖೆಯ ತನಿಖೆಗೆ ಆದೇಶ ನೀಡಲಾಗಿದೆ. ಅಲ್ಲದೇ ರಿಂಕು ವಿರುದ್ಧ ಉತ್ತರಪ್ರದೇಶದ ಗಾಜಿಯಾಬಾದ್ ನ ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ವರದಿ ತಿಳಿಸಿದೆ.