ಮುಳಬಾಗಿಲು: ತಾಲೂಕಿನಲ್ಲಿ ಸರ್ಕಾರಿ ಜಮೀನು ಕಬಳಿಸುತ್ತಿದ್ದರೂ ಜಾಣ ಕುರುಡರಂತೆ ವರ್ತಿಸುವ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮಾಂತರ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸರ್ಕಾರದಿಂದ ಕೋಟ್ಯಂತರ ರೂ. ಮಜೂರಾಗಿದ್ದರೂ ಜಮೀನು ಮಂಜೂರು ಮಾಡಲು ನಿರ್ಲಕ್ಷಿಸಿದ್ದಾರೆ.
ಇದರಿಂದ ಪೊಲೀಸ್ ಠಾಣೆಯು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ತಾಲೂಕಿನ 186 ಗ್ರಾಮಗಳಲ್ಲಿ ಜನರ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಮುಳಬಾಗಿಲು ಠಾಣೆಯನ್ನು ನಗರ ಠಾಣೆಯನ್ನಾಗಿ ರೂಪಿಸಿ, ಗ್ರಾಮಾಂತರ ಠಾಣೆಯನ್ನು ಮಂಜೂರು ಮಾಡಿದೆ. ಅದಕ್ಕೆ ಮೂಲ ಸೌಕರ್ಯ ಕಲ್ಪಿಸಲು 3.5 ವರ್ಷಗಳ ಹಿಂದೆ ಕೋಟ್ಯಂತರ ರೂ. ಮಂಜೂರು ಮಾಡಿದೆ. ಅಂತೆಯೇ 2016ರ ಅಕ್ಟೋಬರ್‌ನಲ್ಲಿ ಜಿಲ್ಲಾ ರಕ್ಷಣಾಧಿ ಕಾರಿಗಳ ಆದೇಶದಂತೆ ಮುಳಬಾಗಿಲು ಗ್ರಾಮಾಂತರ ಠಾಣೆ ಸ್ಥಳೀಯ ಅಧಿಕಾರಿಗಳು ಅಗತ್ಯ ಸಿಬ್ಬಂದಿಗಳಿಂದ ಕಾರ್ಯಾರಂಭಿಸಿದೆ.
2017ರ ಆಗಸ್ಟ್ 16 ರಂದು ನರಸಿಂಹತೀರ್ಥದ ಶ್ರೀಪಾದರಾಜ ಮಠದ ಕಟ್ಟಡವೊಂದನ್ನು 27 ಸಾವಿರ ರೂ.ಗಳಿಗೆ ಬಾಡಿಗೆಗೆ ಪಡೆದುಕೊಂಡು ಠಾಣೆ ಆರಂಭಿಸಿದರು. ಠಾಣಾ ವ್ಯಾಪ್ತಿಯ ಹಳ್ಳಿಗಳ ಜನರಿಂದ ಬರುವ ದೂರುಗಳನ್ನು ರಾಜೀ ಮಾಡಿಸುವ ಮೂಲಕ ಸಮಸ್ಯೆ ಹರಿಸುತ್ತಿದ್ದಾರೆ. ಅಲ್ಲದೆ, ಕಠಿಣ ಸನ್ನಿವೇಶಗಳ ಪ್ರಕರಣಗಳನ್ನು ದಾಖಲು ಮಾಡಿ, ಕಾನೂನು ಕಾಪಾಡುತ್ತಿರುತ್ತಾರೆ.
ಪೊಲೀಸ್ ಅಧಿಕಾರಿಗಳು ನಗರದ ಅಂಚಿನಲ್ಲಿಯೇ ಜನರ ಅನುಕೂಲಕ್ಕೆ ತಕ್ಕಂತ ನೂತನ ಠಾಣಾ ಕಟ್ಟಡ ನಿರ್ಮಾಣಕ್ಕೆ ಮುಳಬಾಗಿಲು ರೂರಲ್ ಸ.ನಂ.715ರಲ್ಲಿನ 1.36 ಎಕರೆ ಜಮೀನು ಮಂಜೂರು ಮಾಡಲು ಕೋರಿ, 2017 ಮತ್ತು 2018ರಲ್ಲಿ 2 ಸಾರಿ ತಹಶೀಲ್ದಾರ್ ಕಚೇರಿಗೆ ಅರ್ಜಿ ನೀಡಿರುತ್ತಾರೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ತಮಗೆ ಯಾವುದೇ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿದ್ದಾರೆ ಎನ್ನಲಾಗಿದೆ.
ಇದರಿಂದ ಬೇಸರಗೊಂಡ ಪೊಲೀಸರೇ ಹಲವು ಬಾರಿ 2-3 ಕಡೆಗಳಲ್ಲಿ ಜಮೀನು ತೋರಿಸಿದರೂ ಯಾವುದೇ ಜಮೀನು ಮಂಜೂರು ಮಾಡದ ಕಾರಣ ಪೊಲೀಸ್ ಅಧಿಕಾರಿಗಳು ವಿಧಿ ಇಲ್ಲದೇ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ. ಕಳೆದ ವರ್ಷವೇ ಜಮೀನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದ ಹಿಂದಿನ ತಹಶೀಲ್ದಾರ್ ಬಿ.ಎನ್ .ಪ್ರವೀಣ್ ಆಡಿದ ಮಾತಿಗೆ ಯಾವುದೇ ಪರಾವೆ ಇಲ್ಲವೆಂದುಕೊಂಡು ಕೊನೆಗೂ ಜಮೀನು ಮಂಜೂರು ಮಾಡಿಸದೇ ವರ್ಗಾವಣೆಯಾಗಿ ಹೋಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಪೊಲೀಸ್ ಇಲಾಖೆ ವಲಯದಲ್ಲಿ ಬೇಸರ ಮೂಡಿದೆ ಎನ್ನಲಾಗಿದೆ.
ಗ್ರಾಮಾಂತರ ಠಾಣೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಜಮೀನು ಮಂಜೂರು ಮಾಡಬೇಕಿದೆ. ಈಗಾಗಲೇ ನಿವೇಶನ ಗುರುತಿಸಲಾಗಿದ್ದು, ಅಧಿಕಾರಿ ಗಳೊಂದಿಗೆ ಚರ್ಚಿಸಿ, ಜಮೀನನ್ನು ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗುವುದು.
-ಎಚ್.ನಾಗೇಶ್, ಅಬಕಾರಿ ಸಚಿವ
-ಎಂ.ನಾಗರಾಜಯ್ಯ