Advertisement

ಕೋವಿಡ್‌ ಅಖಾಡದಲ್ಲಿ ಪೊಲೀಸರ ಪಾತ್ರ ಮತ್ತು ಮನಸ್ಥಿತಿ

12:56 PM Oct 11, 2020 | Suhan S |

ಕರ್ನಾಟಕದಲ್ಲಿ  ಸುಮಾರು 8,500ಕ್ಕೂ ಹೆಚ್ಚು ಪೊಲೀಸರು ಕೊರೊನಾ ಸೋಂಕುಪೀಡಿತರಾದರು. 73ಕ್ಕಿಂತಲೂ ಹೆಚ್ಚು ಪೊಲೀಸರು ಕೋವಿಡ್ ತುತ್ತಾಗಿ ಜೀವ ತ್ಯಜಿಸಿದರು. ಆದರೂ ಧೃತಿಗೆಡದೆ ಪ್ರತೀ ದಿನ, ಪ್ರತೀ ಕ್ಷಣ ಸಮಾಜದ ಸುರಕ್ಷೆಗಾಗಿ ಪ್ರಾಣವನ್ನೂ ಲೆಕ್ಕಿಸದೆ ನಿಸ್ವಾರ್ಥ ಮನೋಭಾವದಿಂದ ಸುರಕ್ಷಿತ ಸಮಾಜಕ್ಕಾಗಿ ಧೈರ್ಯದಿಂದ ವೀರ ಯೋಧರಂತೆ ಸದಾ ಕರ್ತವ್ಯದಲ್ಲಿ ತೊಡಗಿಸಿಕೊಂಡವರು ಪೊಲೀಸರು.

Advertisement

ಕೋವಿಡ್ ಕಾಲಘಟ್ಟದಲ್ಲಿ ಚಿತ್ರವಿಚಿತ್ರ ವೇಷಭೂಷಣಗಳೊಂದಿಗೆ ರಸ್ತೆಯಲ್ಲಿ ಜಾಗೃತಿ ಮೂಡಿಸುತ್ತಿರುವ ಪೊಲೀಸರನ್ನು ನೀವು ನೋಡಿರಬಹುದು. ಎರಡೇಟು ಬಿಡುವಂತೆ ಹೆದರಿಸಿ ಜನರನ್ನು ಮನೆಗೆ ಕಳುಹಿಸುವ ಪೊಲೀಸರನ್ನೂ ನೋಡಿರಬಹುದು. ತಪಾಸಣೆಯಿಂದ ಕೋಪಗೊಂಡ ನಾಗರಿಕರ ಆಕ್ರೋಶವನ್ನು ಅಸಹಾಯಕತೆಯಿಂದ ನೋಡುತ್ತಿರುವ ಪೊಲೀಸರನ್ನೂ ನೋಡಿದ್ದೀರಿ. ಆಕ್ರೋಶಗೊಂಡ ನಾಗರಿಕರ ಗುಂಪಿನಿಂದ ಬಚಾವಾದ ಪೊಲೀಸರನ್ನೂ ನೋಡಿರುತ್ತೀರಿ.

ಈ ಎಲ್ಲ ಘಟನೆಗಳನ್ನು ಅವಲೋಕಿಸಿದಾಗ ಏನನ್ನಿಸುತ್ತದೆ? ಸಮಾಜದಲ್ಲಿ ಕೆಲವರಿಗೆ ಅದು ಪೊಲೀಸರ ದರ್ಪ ಎನಿಸಬಹುದು, ಮತ್ತೆ ಕೆಲವರಿಗೆ ಪೊಲೀಸರ ಕರ್ತವ್ಯದ ಬಗ್ಗೆ ಇರುವ ಪ್ರೀತಿ ಕಾಣಿಸಬಹುದು. ಮತ್ತೂಂದಷ್ಟು ಜನರಿಗೆ ಪೊಲೀಸರು ನಮಗೆಷ್ಟು ಕಷ್ಟಕೊಟ್ಟರು, ಅವರೂ ಅನುಭವಿಸಲಿ ಎಂದು ಕುಹಕದ ಭಾವವೂ ಉಂಟಾಗಬಹುದು. ಬರೇ ಘಟನಾವಳಿಗಳನ್ನು ನೋಡಿ ಪೊಲೀಸರು ಹೀಗೆಯೇ ಎಂದು ಯಾವುದೇ ವಿವೇಚನೆ ಮಾಡದೆ ಆಗಿಂದಾಗ್ಗೆ ತೀರ್ಮಾನ ಮಾಡಿಬಿಡುತ್ತೇವೆ.

ಲಾಕ್‌ಡೌನ್‌ ಘೊಷಣೆಯಾದ ಸಮಯದಲ್ಲಿ ಕೋವಿಡ್ ದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮನೆಯೊಳಗೆ ಇದ್ದು ಪ್ರತೀ ನಿತ್ಯ ಯಾರ ಸಂಪರ್ಕಕ್ಕೂ ಬಾರದೆ ಕೋವಿಡ್ ದಿಂದ ಬಚಾವಾಗಲು ಎಷ್ಟೆಲ್ಲ ದಾರಿಗಳನ್ನು ಹುಡುಕಿದೆವು! ಅದೇ ಪೊಲೀಸರು ಮನೆಯಿಂದ ಹೊರಬಂದು ನಮಗೇನಾದರೂ ಸರಿ, ಸಮಾಜವನ್ನು ಸುರಕ್ಷಿತವಾಗಿಡೋಣ ಎಂದು ರಸ್ತೆ, ಬೀದಿ ಮತ್ತು ತಪಾಸಣೆ ಠಾಣೆಗಳಲ್ಲಿ ಧೃತಿಗೆಡದೆ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದರು.

ಸಂಕಷ್ಟ ಸ್ಥಿತಿಯಲ್ಲಿ ಧೃತಿಗೆಡದೆ  ಕಾರ್ಯನಿರ್ವಹಣೆ :  ನಾವೆಲ್ಲ ನಮ್ಮ ಕುಟುಂಬದೊಂದಿಗೆ ಮನೆಯಲ್ಲೇ ಕುಳಿತು ನಮ್ಮ ನಮ್ಮ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿರಬೇಕಾದರೆ, ಪೊಲೀಸರು ತಮ್ಮಿಂದಾಗಿ ತಮ್ಮ ತಂದೆತಾಯಿಗೆ, ಮಕ್ಕಳಿಗೆ, ಜತೆಗಾರರಿಗೆ ತೊಂದರೆಯಾಗದಿರಲಿ; ಹೊರಗಡೆ ಹೋಗಿ ಹಲವರ ಸಂಪರ್ಕಕ್ಕೆ ಬರುತ್ತಿರುವ ತಮ್ಮಿಂದ ತಮ್ಮ ಕುಟುಂಬದವರು ಸುರಕ್ಷಿತವಾಗಿಲಿ ಎಂದು ಬೇರೆ ಕೊಠಡಿಯಲ್ಲಿ, ಬಾಡಿಗೆ ಮನೆಯಲ್ಲಿ, ಕೆಲವೊಮ್ಮೆ ಠಾಣೆಯಲ್ಲಿಯೇ ಉಳಿದರು. ಕುಟುಂಬದವರೊಂದಿಗೆ ನೇರವಾಗಿ ಸಂಪರ್ಕ ಹೊಂದದೆ ಕೇವಲ ದೂರವಾಣಿಯಲ್ಲಿ ಕಷ್ಟ ಸುಖ ಮಾತನಾಡಿದ ಪೊಲೀಸರ ವ್ಯಥೆ ಎಷ್ಟಿರಬಹುದು! ಇಂತಹ ಮಾರಕ ಕಾಯಿಲೆಯ ಭಯದಿಂದ ಕುಟುಂಬವನ್ನು ಒಂದು ಕ್ಷಣವೂ ಬಿಟ್ಟಿರದ ನಾವೆಲ್ಲಿ? ಅದೇ ಹಲವಾರು ತಿಂಗಳುಗಳ ಕಾಲ ಕುಟುಂಬವನ್ನೇ ನೋಡದ ಅವರೆಲ್ಲಿ! ನಮ್ಮ ಮಕ್ಕಳಿಗೆ ಏನೂ ಆಗಬಾರದೆಂದು ಎಲ್ಲೇ ಇದ್ದರೂ ಹೊರಗೆ ಬರದಂತೆ ನೋಡಿಕೊಳ್ಳುತ್ತಿರಬೇಕಾದರೆ, ಪೊಲೀಸರ ತಂದೆ ತಾಯಿಗೆ ತಮ್ಮ ಮಕ್ಕಳ ಚಿಂತೆ ಎಷ್ಟಿದ್ದಿರಬಹುದು? ಅವರ ಹೆಂಡತಿಗೆ/ಗಂಡನಿಗೆ ತನ್ನ ಜತೆಗಾರನ ಆರೋಗ್ಯದ ಬಗ್ಗೆ ಚಿಂತೆ ಎಷ್ಟಿದ್ದಿರ ಬಹುದು? ಅಪ್ಪ ಅಥವಾ ಅಮ್ಮ ಏಕೆ ತನ್ನಿಂದ ದೂರವಿದ್ದಾ ರೆಂಬುದನ್ನು ತಿಳಿಯದೆ ಬೇಸರದಲ್ಲಿದ್ದ ಅವರ ಪುಟ್ಟ ಚಿಕ್ಕ ಮಕ್ಕಳ ವ್ಯಥೆ ಎಷ್ಟಿತ್ತೋ, ಆ ದೇವರೇ ಬಲ್ಲ.

Advertisement

ನಮ್ಮ ಮನೆಯ ಅಕ್ಕ ಪಕ್ಕದ ಪರಿಸರದಲ್ಲಿ ವಿದೇಶದಿಂದ ಆಗಮಿಸಿದವರು, ಕೊರೊನಾ ಪಾಸಿಟಿವ್‌ ಅದವರ ಬಗ್ಗೆ ತಿಳಿದಾಗ ಆ ಏರಿಯಾದ ರಸ್ತೆಗಳನ್ನು ಕೂಡ ಬಳಸಲು ಹಿಂದೇಟು ಹಾಕಿದವರು ನಾವು. ಆದರೆ ಅದೇ ಮನೆಗೆ ಹೋಗಿ ಕ್ವಾರಂಟೈನ್‌ ಪೋಸ್ಟರ್‌ ಮತ್ತು ಸೀಲ್‌ಡೌನ್‌ ಟೇಪ್‌ ಹಾಕಲು ಯಾವುದೇ ಹಿಂದೇಟು ಹಾಕದೆ ಕೆಲಸ ಮಾಡಿವರು ಪೊಲೀಸರು. ಕೊರೊನಾ ಪಾಸಿಟಿವ್‌ ಬಂದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಿಡದೆ ಅತಿರೇಕ ಮಾಡಿದಲ್ಲಿ ಅಂಥವರ ಮನವೊಲಿಸಿ ಯಾವುದೇ ತೊಂದರೆ ಆಗದಂತೆ ಅವರನ್ನು ಅಲ್ಲಿಂದ ಕರೆದೊಯ್ಯಲು ಮಾಡಿದ ಪ್ರಯತ್ನಗಳೆಷ್ಟೋ?

ನಮ್ಮ ಮನಸ್ಥಿತಿ,  ಪೊಲೀಸರ ಮನಸ್ಥಿತಿ :  ನಾವೆಲ್ಲ 8ರಿಂದ 9 ಗಂಟೆ ಕೆಲಸ ಮಾಡಿ ಬಳಿಕ ಮನೆಗೆ ಹೋಗಲನುವಾದಾಗ ಅರ್ಧ ಗಂಟೆಯ ಹೆಚ್ಚಿನ ಕೆಲಸ ಬಂದುಬಿಟ್ಟರೆ ಕೆಂಡಾಮಂಡಲವಾಗಿಬಿಡುತ್ತೇವೆ. ಅಷ್ಟೇ ಅಲ್ಲದೆ ನಮ್ಮ ಕೆಲಸದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದರೆ, ಏನಾದರೂ ಕೊಂಕು ನುಡಿದರೆ ರೌದ್ರಾವತಾರ ತಾಳಿ ಬಿಡುತ್ತೇವೆ. ಆದರೆ ಪೊಲೀಸರು? ದಿನದ 24 ಗಂಟೆಯೂ ಸದಾ ಕರ್ತವ್ಯಕ್ಕೆ ಸಿದ್ಧ ಎಂದು ಪ್ರತಿಜ್ಞೆ ಮಾಡಿ ಬಂದಿರುವ ಪೊಲೀಸರ ಮನಸ್ಥಿತಿ ಯನ್ನೊಮ್ಮೆ ಅವಲೋಕಿಸಿ. ಬಿರುಗಾಳಿ, ಮಳೆ, ಸುಡುಬಿಸಿ ಲನ್ನೂ ಲೆಕ್ಕಿಸದೆ ಟಾರ್‌ ರೋಡಿನಲ್ಲಿ ನಿಂತು ಕೊರೊನಾ ತಪಾಸಣಾ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅವರ ಮನಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ಲಾಕ್‌ ಡೌನ್‌ ಸಂದರ್ಭಗಳಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಿಕೋ ಎನ್ನುತ್ತಿರಬೇಕಾದರೆ ಕುಡಿಯುವ ನೀರಿಗಾಗಿ, ಹಸಿದ ಹೊಟ್ಟೆಗೆ ಆಹಾರಕ್ಕಾಗಿ ಅವರು ಎಷ್ಟೊಂದು ಕಷ್ಟಪಟ್ಟಿರಬಹುದು. ತಂದ ಆಹಾರವನ್ನು ಸೇವಿಸಲು ನಮ್ಮಂತೆ ಅವರಿಗೆ ಭೋಜನ ವಿರಾಮದ ಅವಧಿ ಇತ್ತೇ? ಅರ್ಧ ಉಂಡು ಮುಗಿಸುವಾಗಲೇ ಯಾವುದೋ ವಾಹನ ಬರುತ್ತಿರುವುದನ್ನು ನೋಡಿ ಆಹಾರವನ್ನು ಹಾಗೆಯೇ ಬಿಟ್ಟು ವಾಹನ ತಪಾಸಣೆಗೆ ಹೊರಟ ಅವರ ಮನಸ್ಥಿತಿ ಹೇಗಿದ್ದಿರಬೇಡ. ಇಷ್ಟೆಲ್ಲ ತ್ಯಾಗವಿದ್ದರೂ ತಪಾಸಣೆಗೋಸ್ಕರ ಸುಮ್ಮಸುಮ್ಮನೆ ತಡ ಮಾಡುತ್ತಿದ್ದಾರೆಂದು ಜಗಳ ತೆಗೆಯುವ, ಹೋಗಲು ಬಿಡಲಿಲ್ಲವೆಂದು ಏರು ಧ್ವನಿಯಲ್ಲಿ ವಾದಿಸುವ, ಕರ್ಕಶ ಹಾರ್ನ್ ಮಾಡುತ್ತ ಬೇಗ ಬೇಗ ಎಂದು ಪರೋಕ್ಷವಾಗಿ ಎಚ್ಚರಿಸುವ ವಾಹನ ಚಾಲಕರ ನಿರ್ವಹಣೆ ಮಾಡುತ್ತಿರಬೇಕಾದರೆ ಅವರ ಮನಸ್ಥಿತಿ ಹೇಗಾಗಿರಬೇಡ. ಪರವಾಗಿ ಮತ್ತು ವಿರುದ್ಧವಾಗಿ ಶಿಫಾರಸುಗಳು ಬಂದಂತಹ ಸಮಯದಲ್ಲಿ ಕರ್ತವ್ಯ ಲೋಪವಾಗದಂತೆ ನ್ಯಾಯ ಒದಗಿಸಿಕೊಟ್ಟ ಪೊಲೀಸರ ಮನಸ್ಥಿತಿ ಹೇಗಾಗಿರಬೇಡ. ಪೂರ್ತಿ ಲಾಕ್‌ಡೌನ್‌ ಇದ್ದರೂ ವಲಸಿಗರು ಇಲ್ಲಿ ಇರಲಾರದೆ ಊರಿಗೆ ಹೊರಟಾಗ ಅವರನ್ನು  ದಾರಿ ಮಧ್ಯೆ ತಡೆದ ಪೊಲೀಸರ ಮುಂದೆ ತಮ್ಮ ವಿಷಮ ಪರಿಸ್ಥಿತಿಯನ್ನು ಹೇಳಿ ಗೋಳಿಟ್ಟಾಗ ಏನೂ ಮಾಡಲಾಗದೆ ಹೃದಯ ಕಲ್ಲಾಗಿಸಿ ಕರ್ತವ್ಯ ನಿರ್ವಹಿಸಿದ ಆ ಕ್ಷಣ ಹೇಗಾಗಿರಬೇಡ. ಇದೆಲ್ಲದರ ನಡುವೆ ಮನುಷ್ಯತ್ವವನ್ನು ಮರೆಯದೆ ದಾರಿಗೆ ಬಿದ್ದ ವಲಸಿಗರಿಗೆ ಏನಾದರೂ ವ್ಯವಸ್ಥೆ ಮಾಡಿಕೊಡಲು ಬೇರೆ ಬೇರೆ ಇಲಾಖೆಗಳನ್ನು, ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸಿ ಅಗತ್ಯ ಸವಲತ್ತುಗಳನ್ನು ನೀಡಲು ಅವರು ಪಟ್ಟ ಕಷ್ಟ ಎಷ್ಟಿದ್ದಿರಬಹುದು ಎಂದು ಯೋಚಿಸಿರುವಿರಾ?.

ಇಂತಹ ಒತ್ತಡ ಸಂಬಂಧಿ ಕಾಯಿಲೆಗಳಿಂದ ಪಾರಾಗಲು ಬಹು ಆಯಾಮದ ಹಲವು ವಿಧಾನಗಳನ್ನು ಈ ಕೆಳಗೆ ನೀಡಲಾಗಿದೆ. ಇದನ್ನು ನಿಯಮಿತವಾಗಿ ಮಾಡುವುದರ ಮೂಲಕ ಯಾವುದೇ ವರ್ಗದ ಜನರೂ ಒತ್ತಡಗಳಿಂದ ಮುಕ್ತವಾಗಿ ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಬಹುದು.

 

ಮುಂಚೂಣಿಯ  ಕೋವಿಡ್  ಯೋಧರು :

ಪೊಲೀಸರು ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ತರಬೇತಿಯನ್ನಷ್ಟೇ ಪಡೆದಿದ್ದರೂ ಇಂತಹ ಅಗತ್ಯ ಸಂದರ್ಭಗಳಲ್ಲಿ ಕೋವಿಡ್ ಸೋಂಕುಪೀಡಿತರ ಸಂಪರ್ಕಿತರನ್ನು ಪತ್ತೆಹಚ್ಚಲು ನೆರವಾದದ್ದು, ರೆಡ್‌ ಝೋನ್‌ ಏರಿಯಾಗಳಲ್ಲಿ ಜನರ  ನಿಯಂತ್ರಣ ಮಾಡಿದ್ದು, ಲಾಕ್‌ಡೌನ್‌ ನಿಯಮಗಳನ್ನು ಜಾರಿಗೊಳಿಸಿದ್ದು, ಪ್ರಯಾಣಿಕರ ತಪಾಸಣೆ ಮಾಡಿ ಆವಶ್ಯಕ ಕ್ರಮ ಕೈಗೊಂಡದ್ದು ಮತ್ತು ಜನರಿಗೆ ಕೊರೊನಾ ಬಗ್ಗೆ ತಿಳಿ  ಹೇಳುವುದರ ಮೂಲಕ ಭಯ ನಿವಾರಣೆ ಮಾಡಿದ್ದು ಅವರ ಕರ್ತವ್ಯ ಪ್ರೀತಿಯ ನಿದರ್ಶನವಾಗಿದೆ.

ಒತ್ತಡ ನಿವಾರಣೆ ಅಗತ್ಯ :  ಇಂತಹ ಕ್ಲಿಷ್ಟ ಕಾಲದಲ್ಲಿ ಯಾವುದನ್ನೂ ಲೆಕ್ಕಿಸದೆ ದೀರ್ಘ‌ವಾದ ಅವಧಿಯಲ್ಲಿ ಮತ್ತು ಬಿಡುವಿಲ್ಲದೆ ಅವಿರತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಮನಃಸ್ಥಿತಿಯನ್ನು ನಿರ್ಲಕ್ಷಿಸಲಾಗದು. ಸಮಾಜದ ಜನರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾದ  ಸಮಯದ ಅಸಹಾಯಕತೆ, ಬಲವನ್ನು ಪ್ರಯೋಗಿಸದೆ ಕಾನೂನು ಸುವ್ಯವಸ್ಥೆ ಪಾಲನೆ ಮಾಡಬೇಕಾಗಿದ್ದಂತಹ  ವಿಷಮ ಪರಿಸ್ಥಿತಿ, ರಜೆಯನ್ನು ಪಡೆಯಲು ಆಗದೆ ಇದ್ದ ಸಮಯ, ತಮ್ಮಿಂದ ತಮ್ಮ ಪ್ರೀತಿಪಾತ್ರರಿಗೆ ಏನೂ ಆಗಕೂಡದೆಂದು ಕುಟುಂಬದಿಂದ ದೂರವಾಗಿ ವಾಸಿಸುತ್ತಿದ್ದ ಸಂದರ್ಭಗಳು ಅವರನ್ನು ಉದ್ವೇಗದ, ನಿದ್ರಾಹೀನತೆಯ ಮತ್ತು ಒತ್ತಡ ಸಂಬಂಧೀ ಕಾಯಿಲೆಗಳಿಗೆ ತುತ್ತಾಗಲು ಪ್ರೇರೇಪಿಸಲಿಕ್ಕೂ ಸಾಕು.

 

 ಪರಿಹಾರ ಕ್ರಮಗಳು :

  1. ರಿಲ್ಯಾಕ್ಸೇಶನ್‌ ಮತ್ತು ಧನಾತ್ಮಕ ಆಲೋಚನೆ

ದೀರ್ಘ‌ವಾದ- ಆಳವಾದ ಉಸಿರಾಟದ ವ್ಯಾಯಾಮ, ಮೈಂಡ್‌ಫುಲ್‌ನೆಸ್‌ ಧ್ಯಾನ, ಯೋಗ ಮತ್ತು ಪ್ರಾರ್ಥನೆಗಳ ಮೂಲಕ ಮನಸ್ಸು ಮತ್ತು ದೇಹವನ್ನು ವಿಶ್ರಮಿಸಬಹುದು, ರಿಲ್ಯಾಕ್ಸ್‌ ಮಾಡಬಹುದು. ಧನಾತ್ಮಕ ಆಲೋಚನೆಗಳನ್ನು ಮಾಡುವಂತಾಗಲು ನಿಮಗಿಷ್ಟವಾದ ಹಾಡುಗಳನ್ನು ಕೇಳಿ. ನಿಮ್ಮ ಶಕ್ತಿ -ಬಲವೇನೆಂದು ತಿಳಿದು ಅದರ ಕಡೆ ಗಮನ ಹರಿಸಿ. ನಿಮ್ಮ ಜೀವನದಲ್ಲಿ ಹಾಸ್ಯವನ್ನು ಸೇರಿಸಿಕೊಳ್ಳಿ ಮತ್ತು ಆಶಾವಾದಿಯಾಗಿರಿ.

  1. ದೃಢಪಡಿಸುವ -ಪ್ರತಿಷ್ಠಾಪಿಸುವ ಕೌಶಲವನ್ನು ಬೆಳೆಸಿಕೊಳ್ಳಿ

ನಿಮ್ಮ ವೈಯಕ್ತಿಕ ಹಕ್ಕನ್ನು ತಿಳಿದುಕೊಳ್ಳಿ ಮತ್ತು ಅದನ್ನು ನೇರವಾಗಿ, ಪ್ರಾಮಾಣಿಕವಾಗಿ ಹಾಗೂ ಸ್ವಯಂಪ್ರೇರಿತರಾಗಿ ಹೇಳುವುದನ್ನು ಅಭ್ಯಸಿಕೊಳ್ಳಿ. “ನೋ” ಅಥವಾ “ಸಾಧ್ಯವಿಲ್ಲ’ ಎಂಬುದನ್ನು ಯಾವುದೇ ಮುಲಾಜಿಲ್ಲದೆ ಹೇಳುವುದನ್ನು ಕಲಿಯಿರಿ.

  1. ಮನಸ್ಸು ಬಿಚ್ಚಿ ಮಾತನಾಡಿ

ವೈಯಕ್ತಿಕವಾಗಿ ಇಲ್ಲವೇ ಕೆಲಸದಲ್ಲಿ ನಿಮಗೆ ಏನೇ ಆಗಲಿ; ಅದೆಲ್ಲವನ್ನು ಇತರರೊಂದಿಗೆ ಹಂಚಿಕೊಳ್ಳಿ. ಇದರಿಂದ ನಾವೆಲ್ಲ ಒಂದೇ, ನಮಗೂ ಸ್ಪಂದಿಸುವವರು ಇದ್ದಾರೆ ಎಂಬ ಭಾವನೆ ಹುಟ್ಟುವುದು. ಒತ್ತಡ ಮತ್ತು ಸಮಸ್ಯೆಗಳನ್ನು ಹೇಳಿಕೊಳ್ಳುವುದರ ಮೂಲಕ ನಿಮ್ಮ ಅರಿವಿಗೆ ಬಾರದಂತಹ ಪರಿಹಾರಗಳು ಥಟ್ಟನೆ ಹೊಳೆಯಬಹುದು. ನಿಮ್ಮದೇ ಪರಿಸ್ಥಿತಿಯನ್ನು  ಅನುಭವಿಸಿದ ಸಹೋದ್ಯೋಗಿಗಳು ಉತ್ತಮ ಪರಿಹಾರವನ್ನು ಸೂಚಿಸಬಹುದು. ಅಲ್ಲದೆ ಇದೆಲ್ಲದರಿಂದ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸುವುದು.

  1. ಒತ್ತಡ ದಿನಚರಿ ಮತ್ತು ಕೃತಜ್ಞತೆಯ ಪತ್ರಿಕೆ

ಒತ್ತಡ ತರುವಂತಹ ಸನ್ನಿವೇಶಗಳನ್ನು ಬರೆದಿಡಿ. ಏನಾಯಿತು, ಯಾಕಿಷ್ಟು ಒತ್ತಡವಾಯಿತು, ಯಾವಾಗಲೂ ಹೀಗೆ ಆಗುತ್ತದೆಯೇ ಎಂದೆಲ್ಲ ವಿವರಿಸಿ. ಇದರಿಂದ ನಿಮಗೆ ಯಾವೆಲ್ಲ ರೀತಿಯ ಒತ್ತಡಗಳು, ಹೇಗೆಲ್ಲ ಒತ್ತಡ ಉಂಟು ಮಾಡುತ್ತಿವೆ ಎಂದು ತಿಳಿದು ಪರಿಸ್ಥಿತಿಯನ್ನು ನಿಮ್ಮ ಹಿಡಿತದಲ್ಲಿರಿಸಲು ಸಹಾಯವಾಗಬಹುದು.

ಕೃತಜ್ಞತಾ ಪತ್ರಿಕೆ ಮಗದೊಂದು ರೀತಿಯಲ್ಲಿ ಸಹಕರಿಸುತ್ತದೆ. ಸಾಮಾನ್ಯವಾಗಿ ನಾವು ನಮ್ಮ ಜೀವನದಲ್ಲಿ ಆಗುತ್ತಿರುವ ಒಳ್ಳೆಯ ವಿಚಾರಗಳನ್ನು ಗಮನಿಸಿ ಪ್ರಶಂಸಿಸಿಕೊಳ್ಳುವುದೇ ಇಲ್ಲ. ಆದರೆ ಏನೇ ಸಣ್ಣ ಋಣಾತ್ಮಕ ವಿಚಾರಗಳಾದರೂ ಅದಕ್ಕೆ ನಮ್ಮನ್ನು ನಾವೇ ದೂಷಿಸಿಕೊಳ್ಳುತ್ತೇವೆ. ಹಾಗಾಗಿ ನಮ್ಮ ಜೀವನದಲ್ಲಿ ಆಗುತ್ತಿರುವ ಯಾವುದೇ ಒಳ್ಳೆಯ ವಿಷಯಗಳನ್ನು ಬರೆದಿಡುವುದರಿಂದ ನಮ್ಮ ಬಗ್ಗೆ ನಮಗೆ ಒಳ್ಳೆಯ ಭಾವನೆ ಮೂಡಲಾರಂಭಿಸುತ್ತದೆ.

  1. ಸ್ವಯಂಹಿತವನ್ನು ಉಂಟು ಮಾಡುವ ವಿಧಾನಗಳನ್ನು ಬಳಸುವುದು ನಮ್ಮ ಇಂದ್ರಿಯಗಳಲ್ಲಿ ಯಾವುದಾದರೊಂದನ್ನು ಪ್ರಚೋದಿಸಿ ಶಾಂತವಾಗಿಸುವುದು. ಉದಾ : ಬಾಡಿ ಮಸಾಜ್‌, ಮುದ್ದಾಡುವುದು, ಪ್ರಕೃತಿಯ ಶಬ್ದಗಳಿಗೆ ಕಿವಿಗೊಡುವುದು ಮತ್ತಿತರ.
  2. ಪುನಾರಚಿಸುವ ವಿಧಾನ

ಯಾವುದೇ ಸಂದರ್ಭ ಅಥವಾ ಸನ್ನಿವೇಶಗಳನ್ನು ಹೊಸತೊಂದು ಬಗೆಯಲ್ಲಿ ನೋಡುವ ಅಭ್ಯಾಸ. ಎಂತಹ ಪರಿಸ್ಥಿತಿಯಾಗಿದ್ದರೂ ಅದರಲ್ಲಿ ಆಗಿರುವ ಒಳ್ಳೆಯ ವಿಷಯಗಳನ್ನು ಗಮನಿಸಿ ಪ್ರಶಂಸಿಸಿಕೊಳ್ಳುವುದು.

  1. ಜೀವನಶೈಲಿಯಲ್ಲಿನ ಬದಲಾವಣೆ

ವಾರಕ್ಕೆ 5 ಬಾರಿ 20 ನಿಮಿಷಗಳ ವ್ಯಾಯಾಮ. ನಿಮಗಿಷ್ಟವಿರುವ ಹವ್ಯಾಸದಲ್ಲಿ ತೊಡಗುವುದು.ಉತ್ತಮ ಆರೋಗ್ಯಕರ ಆಹಾರ ಶೈಲಿಯನ್ನು ಅಳವಡಿಸಿಕೊಳ್ಳುವುದು. ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರುವುದು. ಅತಿಯಾಗಿ ಕಾಫಿ / ಚಹಾ ಕುಡಿಯದಿರುವುದು ಹಾಗೂ ಕನಿಷ್ಠ 6 ಗಂಟೆಗಳ ಕಾಲ ನಿದ್ರಿಸುವುದು. ಇವು ನಿಮ್ಮ ಮನಸ್ಸಿನಲ್ಲುಂಟಾಗಿರುವ ಒತ್ತಡದಿಂದ ಹೊರಬಂದು ನಿಮ್ಮತನವನ್ನು ವೃದ್ಧಿಸಲು ಸಹಾಯ ಮಾಡುತ್ತವೆ.

  1. ಸ್ಥಿತಿಸ್ಥಾಪಕತ್ವ ಗುಣವನ್ನು ಬೆಳೆಸಿಕೊಳ್ಳುವುದು

ಅಂದರೆ ಪುಟಿದೇಳುವ ವ್ಯಕ್ತಿತ್ವ. ಜೀವನದ ವೈವಿಧ್ಯಗಳಿಗೆ, ಅಪಾಯ, ಆಘಾತ ಮತ್ತು ಒತ್ತಡದ ಸನ್ನಿವೇಶಗಳಿಗೆ ಒಗ್ಗಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು. ಯಾವುದೇ ಪರಿಸ್ಥಿತಿಗಳಲ್ಲಿ ಪ್ರೀತಿಯಿಂದ, ಶಾಂತವಾಗಿ, ನಿಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿರಿಸಿ. ಪ್ರತಿಕ್ರಿಯೆಗೂ ಮೊದಲು ಯೋಚಿಸಿ. ನಿಮ್ಮ ಹಿಡಿತದಲ್ಲಿರುವ ಮತ್ತು ಹಿಡಿತದಲ್ಲಿರದ ವಿಚಾರಗಳನ್ನು ತಿಳಿದುಕೊಂಡು ಮುಂದುವರಿಯುವುದರಿಂದ ಸ್ಥಿತಿಸ್ಥಾಪಕತ್ವ ಗುಣವನ್ನು ಬೆಳೆಸಿಕೊಳ್ಳಬಹುದು.

ಇದ್ದಾರೆ ವೆಲ್‌ ಬೀಯಿಂಗ್‌ ಆಫೀಸರ್‌ಗಳು :  ಮೊದಲಾಗಿ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಮುಂದಾಲೋಚನೆ ಮತ್ತು ದೂರದೃಷ್ಟಿಗೆ ಅಭಿನಂದನೆಗಳು. ಏಕೆಂದರೆ ಪೊಲೀಸ್‌ ಇಲಾಖೆಯಲ್ಲಿ 2017ರಲ್ಲೇ ಉತ್ತಮ ಮಾನಸಿಕ ಆರೋಗ್ಯದ ಪ್ರಾಮುಖ್ಯವನ್ನು ಮನಗಂಡು “ವೆಲ್‌ ಬೀಯಿಂಗ್‌ ಆಫೀಸರ್ಸ್‌’ ಮತ್ತು “ಸೀನಿಯರ್‌ ವೆಲ್‌ ಬೀಯಿಂಗ್‌ ಆಫೀಸರ್ಸ್‌’ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದಾರೆ. ಪ್ರಸ್ತುತ ಇಲಾಖೆಯಲ್ಲಿರುವ ಪೊಲೀಸರ ಮಾನಸಿಕ ಆರೋಗ್ಯದ ವೃದ್ಧಿಗಾಗಿ ಪ್ರತೀ ಜಿಲ್ಲೆ ಮತ್ತು ಘಟಕಗಳಿಗೊಬ್ಬರಂತೆ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ “ವೆಲ್‌ ಬೀಯಿಂಗ್‌ ಆಫೀಸರ್ಸ್‌’ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಕೆಲವರು ನನ್ನ ವಿದ್ಯಾರ್ಥಿಗಳೂ ಇದ್ದಾರೆ ಎನ್ನುವುದು ಅಭಿಮಾನದ ವಿಚಾರ. ಅವರೆಲ್ಲ ಪೊಲೀಸರ ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮ ವೃದ್ಧಿಸಲು ಯೋಗ್ಯ ಕೊಡುಗೆಯನ್ನು ನೀಡುತ್ತಿದ್ದಾರೆ. ಈ “ವೆಲ್‌ ಬಿಯಿಂಗ್‌ ಆಫೀಸರ್ಸ್‌’ಗಳ ಸೇವೆಯು ಖಾಯಂಗೊಳ್ಳುವಂತಾಗಲಿ ಮತ್ತು ಅವರಿಂದ ಪೊಲೀಸರ ಮಾನಸಿಕ ಆರೋಗ್ಯಕ್ಕೆ ಮತ್ತಷ್ಟು ಉತ್ತೇಜನ ಸಿಗುವಂತಾಗಲಿ.

 

 

ಡಾ| ದೀಪಾ ರಸ್ಕಿನ್ಹಾ

ಅಸಿಸ್ಟೆಂಟ್‌ ಪ್ರೊಫೆಸರ್‌

ಕ್ಲಿನಿಕಲ್‌ ಸೈಕಾಲಜಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next