ದಾವಣಗೆರೆ: ಅಪಘಾತ ಪ್ರಕರಣವೊಂದರಲ್ಲಿ ಬೇಕಾಗಿದ್ದ ಆರೋಪಿಯ ಸಹೋದರನ ಮೇಲೆ ಪೊಲೀಸರು ಹಲ್ಲೆ ಮಾಡಿದ ಪರಿಣಾಮ, ಆ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಗರದಲ್ಲಿ ನಡೆದಿದೆ. ತಾಲ್ಲೂಕಿನ ಲೋಕಿಕೆರೆ ನಿವಾಸಿ ನಾಗರಾಜ (28) ವಿಷಸೇವಿಸಿ, ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಪಘಾತ ಪ್ರಕರಣವೊಂದರಲ್ಲಿ ನಾಗರಾಜನ ಸಹೋದರಅರುಣ್ ಪೊಲೀಸರಿಗೆ ಬೇಕಾಗಿದ್ದ. ವಿಚಾರಣೆ ನಡೆಸುವ ನೆಪದಲ್ಲಿ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬುಧವಾರ ಸಂಜೆ 4 ಗಂಟೆಗೆ ಹದಡಿ ರಸ್ತೆಯಲ್ಲಿನ ಗ್ರಾಮಾಂತರ ಠಾಣೆಗೆ ನಾಗರಾಜ್‌ನನ್ನು ಕರೆದೊಯ್ದಿದ್ದರು. ರಾತ್ರಿ 8 ಗಂಟೆಯವರೆಗೆ ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ವೇಳೆ ಆತನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸ್ ಠಾಣೆಯಿಂದ ಬಂದ ನಂತರ ನಾಗರಾಜ್ ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯಲ್ಲಿನ ಆತನ ಅಕ್ಕನ ಮನೆಗೆ ಹೋಗಿ, ನಡೆದ ವೃತ್ತಾಂತವನ್ನೆಲ್ಲಾ ತಿಳಿಸಿದ್ದಾನೆ. ಬೆಳಗ್ಗೆ 6 ಗಂಟೆಗೆ ಎದ್ದು ಮನೆಯಿಂದ ತಾನು ಕೆಲಸ ಮಾಡುತ್ತಿದ್ದ ಟ್ರಾನ್ಸ್‌ಪೊàರ್ಟ್ ಕಂಪನಿಗೆ ಹೋಗುವುದಾಗಿ ತಿಳಿಸಿ, ಹೊರಬಂದಿದ್ದಾನೆ.
ಆದರೆ, ಕೆಲಹೊತ್ತಿನಲ್ಲೇ ಆತ ವಿಷ ಸೇವಿಸಿದ್ದು, ಶಿವಪ್ಪಯ್ಯ ವೃತ್ತದಲ್ಲಿದ್ದು ಕಣ್ಣು ಮಂಜಾಗುತ್ತಿರುವುದಾಗಿ ತನ್ನ ಅಕ್ಕನಿಗೆ ದೂರವಾಣಿ ಮೂಲಕ ತಿಳಿಸಿದ್ದಾನೆ. ಈ ವೇಳೆ ಆತನಿದ್ದ ಸ್ಥಳಕ್ಕೆ ಧಾವಿಸಿದ ಅಕ್ಕ ಮತ್ತು ಭಾವ ತಕ್ಷಣ ನಾಗರಾಜ್‌ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಾಗರಾಜ್ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಪಿಎಸ್‌ಐ ಶ್ರೀಧರ್ ಎಂಬುವವರು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ವಿಚಾರಣೆ ನೆಪದಲ್ಲಿ ನನ್ನನ್ನು ತೀವ್ರವಾಗಿ ಅವಮಾನಿಸಿದ್ದಾರೆ. ನಾನು ಯಾವುದೇ ತಪ್ಪುಮಾಡದೇ ಇದ್ದರೂ ನನ್ನನ್ನು ಅಪರಾಧಿ ಹಾಗೆ ನೋಡಿದರು. ನೀವು ಇದೇ ರೀತಿ ಮಾಡುವುದಾದರೆ ನಾನು ವಿಷ ಕುಡಿದು ಸಾಯುತ್ತೇನೆ ಎಂದು ಹೇಳಿದಾಗಲೂ ಅವರು ಅಮಾನವೀಯವಾಗಿ ವರ್ತಿಸಿದ್ದಾರೆ.
ಕುಡಿದು ಸಾಯಿ ಎಂದು ಹೀಯಾಳಿಸಿದ್ದಾರೆ. ಇದೇ ಕಾರಣಕ್ಕೆ ನಾನು ಮನ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಪೊಲೀಸರು ಕಾರಣ ಎಂದು ತಿಳಿಸಿರುವುದಾಗಿ ಆತನ ಸಹೋದರಿ ವನಿತಾ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.