Advertisement

ಸಿಬಂದಿ ಮನೆ ಸದಸ್ಯರಿಂದಲೇ ಖಾಕಿ ಸಮವಸ್ತ್ರ!

11:09 AM Oct 04, 2021 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್‌ ಮೀಸಲು ಪಡೆ(ಕೆಎಸ್‌ಆರ್‌ಪಿ) ಮಹಿಳಾ ಸಬಲೀಕರಣಕ್ಕೆ ಮುಂದಾಗಿದ್ದು, ಇಲಾಖೆ ಸಿಬ್ಬಂದಿ ಮನೆ ಮಹಿಳೆಯರ ಸ್ವಾವಲಂಬನೆಗಾಗಿ ಸೂಕ್ತ ವೇದಿಕೆಯೊಂದನ್ನು ಸೃಷ್ಟಿಸಿದೆ. ಈ ಮೂಲಕ ಇಲಾಖೆ ಸಿಬ್ಬಂದಿ ಮನೆ ಮಹಿಳಾ ಸದಸ್ಯರಿಂದಲೇ ಸಮವಸ್ತ್ರ ಸಿದ್ಧಪಡಿಸುತ್ತಿದೆ! ಅದರಿಂದ ಮಹಿಳೆಯರು ಮನೆ ಕೆಲಸದ ಜತೆಗೆ ಮಾಸಿಕ ಕನಿಷ್ಠ 10-12 ಸಾವಿರ ರೂ. ಗಳಿಸಲು ಅವಕಾಶ ಕಲ್ಪಿಸಿದೆ.

Advertisement

ಕೆಎಸ್‌ಆರ್‌ಪಿಗೆ ನೇಮಕಗೊಂಡ ಪ್ರತಿ ಅಧಿಕಾರಿ- ಸಿಬ್ಬಂದಿಗೆ ಪ್ರತಿ ವರ್ಷ ಸರ್ಕಾರದಿಂದ ಎರಡು ಜತೆ ಸಮವಸ್ತ್ರ ವಿತರಿಸಲಾಗುತ್ತದೆ. ಅದನ್ನು ಕೋರಮಂಗಲದಲ್ಲಿರುವ ಮೂರನೇ ಬೆಟಾಲಿಯನ್‌ ಆವರಣದಲ್ಲಿರುವ ಟೈಲರಿಂಗ್‌ ಕೇಂದ್ರದಲ್ಲಿ ಸಿದ್ಧಪಡಿಸಲಾಗುತ್ತದೆ. ಅದಕ್ಕಾಗಿ ಇಲಾಖೆಯಿಂದ ನುರಿತ ಟೈಲರ್‌ಗಳನ್ನು ನೇಮಿಸಿಕೊಳ್ಳಲಾಗಿದ್ದು, ನಿತ್ಯ ಹತ್ತಾರು ಜತೆ ಸಮವಸ್ತ್ರ ಸಿದ್ಧಪಡಿಸಬೇಕಾಗಿದೆ.

ಇದನ್ನೂ ಓದಿ;- ಕಾಶ್ಮೀರ ಕಣಿವೆ ಕಥನ; ಶಾಂತಿಯುತ ಬದುಕಿನ ಕನಸು ಕೊನರಿರುವುದೇ ದೊಡ್ಡ ಬದಲಾವಣೆ

ಈ ಕೇಂದ್ರದಲ್ಲಿ 2 ಕಾಜಾ ಮೆಷಿನ್‌, ಮೂರು ಓವರ್‌ಲಾಕ್‌ ಮೆಷಿನ್‌, 2 ಪ್ರಸ್‌ ಬಟನ್‌/ರೆಗ್ಯೂಲರ್‌ ಸ್ಟಿಚ್‌ ಮೆಷಿನ್‌ಗಳು, 25 ಹೊಲಿಗೆ ಯಂತ್ರಗಳು ಇವೆ. ಸಂಘದ ಅಡಿಯಲ್ಲಿ ಟೈಲರಿಂಗ್‌ ಕೇಂದ್ರ ಕಾರ್ಯನಿರ್ವಹಿಸುವುದರಿಂದ ಸಿಬ್ಬಂದಿ ಮನೆಯ ಆಸಕ್ತ ಮಹಿಳಾ ಸದಸ್ಯರಿಗೆ ಟೈಲರಿಂಗ್‌ ತರಬೇತಿ ಕೊಟ್ಟು, ಅವರಿಂದಲೇ ಸಮವಸ್ತ್ರ ಸಿದ್ಧಪಡಿಸಲಾಗುತ್ತದೆ. ಅದರಿಂದ ಇಂತಿಷ್ಟು ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಕೆಎಸ್‌ಆರ್‌ಪಿ ಮೂಲಗಳು ತಿಳಿಸಿವೆ.

200-250 ರೂ. ಪ್ರೋತ್ಸಾಹ ಧನ: ಸಂಘದಿಂದ ಸಮವಸ್ತ ಸಿದ್ಧಪಡಿಸಲು ಬೇಕಾದ ಕಚ್ಚಾವಸ್ತುಗಳನ್ನು ಒದಗಿಸಲಾಗುತ್ತದೆ. ನುರಿತ ಟೈಲರ್ಸ್‌ ವಸ್ತ್ರ ಕಟ್ಟಿಂಗ್‌ ಮಾಡಿ, ಕಾಲರ್‌ ಸಿದ್ಧಪಡಿಸಿರುತ್ತಾರೆ. ಹೀಗಾಗಿ ಮಹಿಳೆಯರಿಗೆ ಹೆಚ್ಚು ಶ್ರಮ ಇರುವುದಿಲ್ಲ.

Advertisement

ಅವುಗಳನ್ನು ಜೋಡಿಸಿ ಹೊಲಿಗೆ ಹಾಕಬೇಕು ಅಷ್ಟೇ. ನಂತರ ಬಟನ್‌, ಕಾಜಾ ಹಾಕುವುದನ್ನು ಯಂತ್ರಗಳ ಮೂಲಕ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಮಹಿಳೆಯರಿಗೆ ಇಂತಿಷ್ಟೇ ಸಮಯಕ್ಕೆ ಬರಬೇಕೆಂದು ಸೂಚಿಸಿಲ್ಲ. ಬೆಳಗ್ಗೆ 9 ಗಂಟೆಗೆ ಟೈಲರಿಂಗ್‌ ಕೇಂದ್ರ ತೆರೆಯುತ್ತದೆ. ಆದರೆ, ಮನೆಯ ಕೆಲಸ ಮುಗಿಸಿಕೊಂಡು ಬೆಳಗ್ಗೆ 11 ಗಂಟೆ ನಂತರ ಮಹಿಳೆಯರು ಬಂದು ಕೆಲಸ ಮಾಡಬಹುದು. ಒಂದು ಜತೆ ಸಮವಸ್ತ್ರ ಹೊಲಿದರೆ 200-250 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಅದರಿಂದ ಮಹಿಳೆಯರು, ಮನೆ ಕೆಲಸದ ಜತೆಗೆ ಮಾಸಿಕ 10-12 ಸಾವಿರ ರೂ. ಗಳಿಸಬಹುದು.‌

ಅದರಿಂದ ಮನೆಯ ಏಕಾಂತ ವಾತವರಣದಿಂದ ಹೊರಬರಲು ಸಹಾಯವಾಗುತ್ತದೆ. ಜತೆಗೆ ಸ್ವಾವಲಂಬಿ ಬದುಕಿಗೂ ನೆರವಾಗುತ್ತದೆ. ಪ್ರತಿನಿತ್ಯ 25 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದು ಕೆಎಸ್‌ಆರ್‌ಪಿಯ 3ನೇ ಬೆಟಾಲಿಯನ್‌ ಕಮಾಂಡೆಂಟ್‌ ಎಂ.ವಿ.ರಾಮಕೃಷ್ಣ ಪ್ರಸಾದ್‌ ಮಾಹಿತಿ ನೀಡಿದರು.

ಇನ್ನಷ್ಟು ಮಹಿಳೆಯರಿಗೆ ತರಬೇತಿ: ರೋಟರಿ ಕ್ಲಬ್‌ ಜತೆ ಚರ್ಚಿಸಿ ಇನ್ನಷ್ಟು ಮಹಿಳೆಯರಿಗೆ ಹೊಲಿಗೆ ತರಬೇತಿ ಕೊಡಿಸಲಾಗುತ್ತದೆ. ಈ ಕ್ಲಬ್‌ ಅಡಿಯಲ್ಲಿ ತರಬೇತಿ ಪಡೆದರೆ, ಟೈಲರಿಂಗ್‌ ಕಿಟ್‌ ದೊರೆಯುವುದರಿಂದ, ಭವಿಷ್ಯದಲ್ಲಿ ಮನೆಯಲ್ಲೇ ಕೂತು ಟೈಲರಿಂಗ್‌ ಮಾಡಿಕೊಂಡೆ ಹಣ ಸಂಪಾದಿಸಬಹುದು ಎಂದು ಅಧಿಕಾರಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next