ಬೆಂಗಳೂರು: ಡ್ರಗ್ ಪ್ರಕರಣದ ಆರೋಪಿ ವಿರೇನ್ ಖನ್ನಾ ಮನೆಗೆ ಇಂದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಕರ್ನಾಟಕ ಪೊಲೀಸ್ ಯುನಿಫಾರ್ಮ್ ಪತ್ತೆಯಾಗಿದೆ.
ಪ್ರಕರಣದ ಆರೋಪಿ ವಿರೇನ್ ಖನ್ನಾನ ಬೆಂಗಳೂರು ಮತ್ತು ದೆಹಲಿಯ ನಿವಾಸಕ್ಕೆ ಇಂದು ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದರು. ಈ ವೇಳೆ ಪೊಲೀಸ್ ಸಮವಸ್ತ್ರ ದೊರೆತಿದೆ. ಈ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದು, ಆರೋಪಿ ವಿರೇನ್ ಖನ್ನಾ ಪಾರ್ಟಿಗಳಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಪಾಲ್ಗೊಳ್ಳುತ್ತಿದ್ದ. ಅದೇ ಸಮವಸ್ತ್ರ ಆತನ ಮನೆಯಲ್ಲಿ ಮದೊರಕಿದೆ. ಅಷ್ಟೇ ಅಲ್ಲದೆ ಇನ್ನೂ ಕೆಲವು ವಸ್ತುಗಳು ದಾಳಿಯ ವೇಳೆ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಶಾಂತಿನಗರದ ನಿವಾಸ ಮತ್ತು ದೆಹಲಿಯ ನಿವಾಸಕ್ಕೆ ಏಕಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದರು. ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದುಕೊಂಡು ಹೋಗಿದ್ದರೂ ಖನ್ನಾ ಮನೆಯಲ್ಲಿ ತಾಯಿ ಮತ್ತು ಸಹೋದರ ಪೊಲೀಸರನ್ನು ತಡೆದು ದಾಳಿಗೆ ಅಡ್ಡಿಪಡಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಿದ ಎನ್ ಸಿಬಿ ಅಧಿಕಾರಿಗಳು
ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಮನೆಗೆ ಇಂದು ಮುಂಜಾನೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ನಂತರ ನಟಿಯನ್ನು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆತಂದ ಅಧಿಕಾರಿಗಳು ನಂತರ ಅವರನ್ನು ಬಂಧನಕ್ಕೆ ಒಳಪಡಿಸಿದ್ದಾರೆ.