Advertisement

ಲಾಕ್‌ಡೌನ್‌ಗೆ ಪೊಲೀಸರ ಹರಸಾಹಸ

02:37 PM Mar 25, 2020 | Suhan S |

ಹಾಸನ: ಕೋವಿಡ್ 19 ಹರಡುವ ಭೀತಿಯಿಂದ ರಾಜ್ಯದಲ್ಲಿ ಮಾ.31ರ ವರೆಗೂ ಸರ್ಕಾರ ಲಾಕ್‌ಡೌನ್‌ ಘೋಷಿಸಿದ್ದರೂ ಜನರು ಮಾತ್ರ ಮನೆಯಿಂದ ಹೊರಬರುವುದನ್ನು ಮಾತ್ರ ಬಿಟ್ಟಿಲ್ಲ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆ ಎಪಿಎಂಸಿ ಪ್ರಾಂಗಣದಲ್ಲಿನ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಚಿಲ್ಲರೆ ತರಕಾರಿ ಮಾರುಕಟ್ಟೆ, ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ನಡೆಯುತ್ತಿತ್ತು. ಬೆಳಗ್ಗೆ 10 ಗಂಟೆ ವೇಳೆಗೆ ಪೊಲೀಸರು ಬೀದಿಗಿಳಿದ ನಂತರ ಅಗತ್ಯ ವಸ್ತುಗಳ ಹೊರತುಪಡಿಸಿದ ಅಂಗಡಿ ಗಳು ಮುಚ್ಚಿದವು.

Advertisement

ಯುಗಾದಿ ಹಬ್ಬ ಇರುವುದರಿಂದ ಮಾರುಕಟ್ಟೆಯಲ್ಲಿ ತರಕಾರಿ, ದಿನಸಿ ಪದಾರ್ಥ ಹಾಗೂ ಹೂವುಗಳನ್ನು ಕೊಳ್ಳಲು ನಗರದ ಕಸ್ತೂರಬಾ ರಸ್ತೆ ಉದ್ದಕ್ಕೂ ಜನರು ಮುಗಿ ಬಿದ್ದಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನಸಂದಣಿ ನಿವಾರಣೆಗೆ ಹರ ಸಾಹಸಪಟ್ಟರು. ನಂತರ ಕಸ್ತೂರಬಾ ರಸ್ತೆಯಲ್ಲಿ ಹೂವಿನ ಅಂಗಡಿಯನ್ನು ಒಂದೆಡೆ ಎತ್ತಿಸಿದರೆ ಮತ್ತೂದೆಡೆ ವ್ಯಾಪಾರಕ್ಕೆ ಮುಂದಾಗುತ್ತಿದ್ದರು. ಪೊಲೀಸರು ಲಾಠಿ ರುಚಿ ತೋರಿಸುವ ಎಚ್ಚರಿಕೆ ನೀಡಿದ ನಂತರ ವ್ಯಾಪಾರಗಳು ಸ್ಥಳ ಖಾಲಿ ಮಾಡಿದರು.

ಮಧ್ಯಾಹ್ನದ ವೇಳೆಗೆ ಮಾರುಕಟ್ಟೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಜನ ಸಂಚಾರ ಕಡಿಮೆಯಾಯಿತು. ಮಧ್ಯಾಹ್ನದ ನಂತರ ಲಾಕ್‌ಡೌನ್‌ ಪರಿಸ್ಥಿತಿ ನಿರ್ಮಾಣವಾಯಿತು. ಮಹಾರಾಜ ಪಾರ್ಕ್‌, ಕಲಾಭವನ ಮುಂಭಾಗ ರಸ್ತೆ ಬದಿ ಕಲ್ಲಂಗಡಿ ಹಣ್ಣು ವ್ಯಾಪಾರವನ್ನು ಪೊಲೀಸರು ಸ್ಥಗಿತಗೊಳಿಸಿದರು. ತರಕಾರಿ, ಹಣ್ಣು ವ್ಯಾಪಾರಕ್ಕೆ ತೊಂದರೆ ಕೊಡಲ್ಲ ಎಂದು ಹೇಳುತ್ತಿದ್ದರೂ ವ್ಯಾಪಾರಕ್ಕೆ ಬಿಡುತ್ತಿಲ್ಲ . ಕೊಯ್ದ ಹಣ್ಣುಗಳ ಮಾರಾಟ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ಇಡಿ ಹಣ್ಣು ಮಾರಾಟ ಮಾಡಲು ಬಿಡದಿದ್ದರೆ ಒಂದೆರಡು ದಿನಗಳಲ್ಲಿ ಹಣ್ಣುಗಳು ಕೊಳೆತು ಹೋಗುತ್ತವೆ. ನಾವು ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳು ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next