Advertisement

ಸಾರಿಗೆ ಸಿಬ್ಬಂದಿಗೆ ಪೊಲೀಸ್‌ ತರಬೇತಿ

12:38 PM Oct 20, 2018 | |

ಬೆಂಗಳೂರು: ಪ್ರಯಾಣಿಕರಿಗೆ ಉತ್ತಮ ಸೇವೆ ಮಾತ್ರವಲ್ಲ; ಬಸ್‌ ಸೇರಿದಂತೆ ನಿಗಮದ ಸ್ವತ್ತುಗಳ ರಕ್ಷಣೆಗೂ ವಿಶೇಷ ಒತ್ತು ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಈ ನಿಟ್ಟಿನಲ್ಲಿ ತನ್ನ ಸಿಬ್ಬಂದಿಯನ್ನು ಪೊಲೀಸ್‌ ಗರಡಿಯಲ್ಲಿ ತಯಾರು ಮಾಡಲು ಮುಂದಾಗಿದೆ.

Advertisement

ನಿಗಮದ ಭದ್ರತಾ ಮತ್ತು ಜಾಗೃತ ವಿಭಾಗಕ್ಕೆ ನೇಮಕಗೊಂಡಿರುವ ಭದ್ರತಾ ಸಿಬ್ಬಂದಿಗೆ ಖಾಕಿ ಪಡೆಯಿಂದ ಕಠಿಣ ತರಬೇತಿ ಕೊಡಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ವಿಶೇಷ ಆದೇಶ ಹೊರಡಿಸಿದೆ. ಮೊದಲ ಹಂತದಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿಗೆ ಒಂದು ತಿಂಗಳ ಕಾಲ ಹಾಸನದಲ್ಲಿರುವ ಪೊಲೀಸ್‌ ಶಾಲೆಯಲ್ಲಿ ತರಬೇತಿ ನಡೆಯಲಿದೆ. ನಾಡಹಬ್ಬದ ನಂತರ, ಅ.22ರಿಂದ ತರಬೇತಿ ಆರಂಭವಾಗಲಿದೆ.

ಸಾಮಾನ್ಯವಾಗಿ ಹೀಗೆ ಹೊಸದಾಗಿ ನೇಮಕಗೊಂಡ ಭದ್ರತಾ ಸಿಬ್ಬಂದಿಗೆ ರಸ್ತೆ ಸಾರಿಗೆ ನಿಗಮವು ತನ್ನದೇ ವ್ಯಾಪ್ತಿಯಲ್ಲಿರುವ ಟ್ರೈನಿಂಗ್‌ ಸೆಂಟರ್‌ನಲ್ಲಿ ತರಬೇತಿ ನೀಡುತ್ತದೆ. ಆದರೆ, ಈ ಬಾರಿ ಭದ್ರತಾ ಮತ್ತು ಜಾಗೃತ ದಳವನ್ನು ಮತ್ತಷ್ಟು ಬಲಗೊಳಿಸುವುದರ ಜತೆಗೆ ಕಾರ್ಯವ್ಯಾಪ್ತಿ ವಿಸ್ತರಿಸಲು ಹಾಗೂ ನಿಗಮಕ್ಕೆ ಸೇರಿದ ಸ್ವತ್ತುಗಳ ರಕ್ಷಣೆಗೆ ಅಗತ್ಯ ಇರುವ ಹೆಚ್ಚಿನ ಕೌಶಲ್ಯಕ್ಕಾಗಿ ಪೊಲೀಸರಿಂದಲೇ ತರಬೇತಿ ಕೊಡಿಸಲು ಉದ್ದೇಶಿಸಲಾಗಿದೆ. ಅದರಂತೆ ಮುಂದಿನ ವಾರದಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕೂಡ ಖಾಕಿ ಪಡೆಯಂತೆ ಹ್ಯಾಟು, ಬೂಟು ಹಾಕಿಕೊಂಡು, ಲಾಠಿ ಹಿಡಿದುಕೊಂಡು ಮೈದಾನಕ್ಕೆ ಇಳಿಯಲಿದ್ದಾರೆ.

ದಶಕದ ಹಿಂದೆ ಇದೇ ತರಬೇತಿ: ಪೊಲೀಸರು ಜನರ ರಕ್ಷಣೆ ಮಾಡಿದರೆ, ನಮ್ಮ ಭದ್ರತಾ ಸಿಬ್ಬಂದಿ ನಿಗಮದ ಆಸ್ತಿ-ಪಾಸ್ತಿ ರಕ್ಷಣೆ ಮಾಡುತ್ತಾರೆ. ಇವರಿಬ್ಬರಿಗೂ ನೀಡುವ ತರಬೇತಿಯ ಪಠ್ಯಕ್ರಮ ಕೂಡ ಹೆಚ್ಚು ಹೋಲಿಕೆ ಆಗುತ್ತದೆ. ಆದರೆ, ಈಗ ನಿಗಮದಲ್ಲಿರುವ ಭದ್ರತಾ ಮತ್ತು ಜಾಗೃತ ವಿಭಾಗದ ಹಿರಿಯ ಅಧಿಕಾರಿಗಳು, ಈಗಿರುವ ಕೆಲಸದ ಒತ್ತಡದ ಮಧ್ಯೆ ನೂತನ ಸಿಬ್ಬಂದಿಗೆ ಶ್ರದ್ಧೆಯಿಂದ ತರಬೇತಿ ನೀಡುವುದು ಕಷ್ಟ.

ಅಷ್ಟಕ್ಕೂ ಸಾರಿಗೆ ಸಿಬ್ಬಂದಿಗೆ ಪೊಲೀಸ್‌ ತರಬೇತಿ ನೀಡುತ್ತಿರುವುದು ಇದೇ ಮೊದಲಲ್ಲ. ದಶಕದ ಹಿಂದೆ ನಿಗಮದ ಒಂದು ವಿಭಾಗದಲ್ಲಿ ಈ ರೀತಿಯ ತರಬೇತಿ ಕೊಡಿಸಲಾಗಿತ್ತು. ಎಲ್ಲ ವಿಭಾಗಗಳಿಗೆ ವಿಸ್ತರಿಸಿರುವುದು ಇದೇ ಮೊದಲು ಎಂದು ಕೆಎಸ್‌ಆರ್‌ಟಿಸಿ ಭದ್ರತಾ ಮತ್ತು ಜಾಗೃತ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸುತ್ತಾರೆ. 

Advertisement

ಮೊದಲ ಹಂತದಲ್ಲಿ 120 ಸಿಬ್ಬಂದಿಗೆ ತರಬೇತಿ: ಮೊದಲ ಹಂತದಲ್ಲಿ ಬೆಂಗಳೂರು ಕೇಂದ್ರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ನಗರ ಮತ್ತು ಗ್ರಾಮಾಂತರ, ಮಂಡ್ಯ, ಚಾಮಗರಾಜನಗರ, ಹಾಸನ, ಚಿಕ್ಕಮಗಳೂರು, ಮಂಗಳೂರು, ಪುತ್ತೂರು, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ ಮತ್ತು ಪ್ರಾಥಮಿಕ ಕಾರ್ಯಾಗಾರ,

ಹಾಸನದ ಪ್ರಾಥಮಿಕ ಕಾರ್ಯಾಗಾರ, ಕೇಂದ್ರ ಕಚೇರಿ, ಕರ್ನಾಟಕ ರಾಜ್ಯ ಸಾರಿಗೆ ಮುದ್ರಣಾಲಯ, ಚಿಕ್ಕಮಗಳೂರು ತರಬೇತಿ ಕೇಂದ್ರ, ಬೆಂಗಳೂರು ಕೇಂದ್ರ ತರಬೇತಿ ವಿಭಾಗಗಳಲ್ಲಿನ 120 “ಭದ್ರತಾ ರಕ್ಷಕ’ರಿಗೆ ಪೊಲೀಸ್‌ ತರಬೇತಿ ನೀಡಲಾಗುತ್ತಿದೆ. ಇವರೆಲ್ಲರೂ 2012ರಿಂದ 2018ರವರೆಗೆ ಕರ್ತವ್ಯಕ್ಕೆ ಹಾಜರಾದವರಾಗಿದ್ದಾರೆ. 

ತರಬೇತಿಗೆ ಇವನ್ನೆಲ್ಲಾ ತರೋದು ಕಡ್ಡಾಯ: ತರಬೇತಿ ಏಕಕಾಲದಲ್ಲಿ ನಡೆಯಲಿದ್ದು, ಹಾಜರಾಗುವವರು ಕವಾಯತಿಗೆ ಎರಡು ಜೋಡಿ ಖಾಕಿ ಸಮವಸ್ತ್ರ, ಗ್ರೌಂಡ್‌ಶೀಟ್‌, ಲಾಠಿ, ಉಲನ್‌ ಸಾಕ್ಸ್‌, ಬೂಟು ಪಾಲಿಶ್‌, ದೈಹಿಕ ತರಬೇತಿಗೆ ಎರಡು ಜೋಡಿ ತೋಳಿನ ಬನಿಯನ್‌, ಬಿಳಿ ಕ್ಯಾನ್ವಾಸ್‌ ಶೂ, ಬಿಳಿ ಸಾಕ್ಸ್‌, ಒಂದು ಟ್ರಂಕ್‌, ಸೊಳ್ಳೆ ಪರದೆ, ಪ್ಲಾಸ್ಟಿಕ್‌ ಬಕೆಟ್‌, ಮಗ್ಗು, ಲಘು ಹಾಸಿಗೆ, ಬೆಡ್‌ಶೀಟ್‌, ಊಟದ ತಟ್ಟೆ, ಸ್ಟೀಲ್‌ ಲೋಟ, ಶೇವಿಂಗ್‌ ಕಿಟ್‌, ಟಾರ್ಚ್‌ ತರುವುದು ಕಡ್ಡಾಯ.

ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಝರಾಕ್ಸ್‌, ಪಾಸ್‌ಪೋರ್ಟ್‌ ಸೈಜಿನ ಎರಡು ಫೋಟೋಗಳು, ಲೇಖನ ಸಾಮಗ್ರಿಗಳೊಂದಿಗೆ ಹಾಜರಾಗಬೇಕು ಎಂದು ಹಾಸನ ಜಿಲ್ಲಾ ಪೊಲೀಸ್‌ ತರಬೇತಿ ಶಾಲೆಯ ಪ್ರಾಂಶುಪಾಲರಾದ ಬಿ.ಎನ್‌. ನಂದಿನಿ ಸೂಚಿಸಿದ್ದಾರೆ. ಒಟ್ಟಾರೆ 444 ಭದ್ರತಾ ರಕ್ಷಕರಿಗೆ ಐದು ತಂಡಗಳಲ್ಲಿ ತಲಾ ಒಂದು ತಿಂಗಳು ಈ ತರಬೇತಿ ನೀಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಪ್ರತಿ ಪ್ರಶಿಕ್ಷಣಾರ್ಥಿಗೆ ಒಂಬತ್ತು ಸಾವಿರ ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next