Advertisement

ಬಾಲಕಿಗೆ ಚಿತ್ರಹಿಂಸೆ ಆರೋಪ: ಮೂವರು ಪೊಲೀಸರ ಅಮಾನತು

09:44 AM Jun 30, 2019 | Team Udayavani |

ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರಿನಲ್ಲಿ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಶುಕ್ರವಾರ ಠಾಣೆಗೆ ಕರೆಸಿಕೊಂಡಿದ್ದ ಬಾಲಕಿಗೆ ಚಿತ್ರಹಿಂಸೆ ನೀಡಿದ ಆರೋಪದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಮೂವರು ಸಿಬಂದಿಯನ್ನು ಅಮಾನತು ಮಾಡಲಾಗಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ಕೌಡಿಚ್ಚಾರು ನಿವಾಸಿ, ಪುತ್ತೂರಿನ ಶಾಲೆಯೊಂದರ 8ನೇ ತರಗತಿ ವಿದ್ಯಾರ್ಥಿನಿಯನ್ನು ಆಕೆಯ ಹೆತ್ತವರು ಮತ್ತು ಸಹೋದರಿ ಜತೆಗೆ ವಿಚಾರಣೆ ನಡೆಸಲಾಗಿತ್ತು. ಈ ಸಂದರ್ಭ ಅನುಚಿತ ವರ್ತನೆ ತೋರಿದ್ದ ಆರೋಪಲ್ಲಿ ಪೊಲೀಸರಾದ ದಿನೇಶ್‌, ಗಾಯತ್ರಿ ಮತ್ತು ಪ್ರಶ್ನಿತಾ ಅವರನ್ನು ಅಮಾನತುಗೊಳಿಸಲಾಗಿದೆ.

ವಿಚಾರಣೆ ನೆಪದಲ್ಲಿ ಪೊಲೀಸರು ಚಿತ್ರಹಿಂಸೆ ನೀಡಿರುವುದಾಗಿ ಆರೋಪಿಸಿ ಬಾಲಕಿಯು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಶನಿವಾರ ಆಕೆಯನ್ನು ಭೇಟಿ ನೀಡಿ ಎಸ್‌ಪಿ ಲಕ್ಷಿಪ್ರಸಾದ್‌ ಅವರು ಮಾಹಿತಿ ಪಡೆದು ಕೊಂಡರು. ಅಪ್ರಾಪ್ತ ವಯಸ್ಕ ಬಾಲಕಿಯರನ್ನು ವಿಶೇಷ ಚೈಲ್ಡ್‌ ಮಹಿಳಾ ಪೊಲೀಸರು ತನಿಖೆ ನಡೆಸಬೇಕಿದ್ದು, ಇಲ್ಲಿ ಆ ಪ್ರಕ್ರಿಯೆ ನಡೆದಿಲ್ಲ. ಈ ಕಾರಣಕ್ಕಾಗಿ ಸಿಬಂದಿಯನ್ನು ಅಮಾನತಿನಲ್ಲಿರಿಸಿ ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಘಟನೆ ಹಿನ್ನೆಲೆ
ವಾರದ ಹಿಂದೆ ಕೌಡಿಚ್ಚಾರು ಶ್ರೀಕೃಷ್ಣಾ ಭಜನ ಮಂದಿರದ ಬಳಿಯ ನಿವಾಸಿ ಮುಮ್ತಾಜ್‌ ಮನೆಯಿಂದ 4 ಪವನ್‌ ತೂಕದ ಚಿನ್ನದ ಸರ ಕಳವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಶಯದಿಂದ ನೆರೆಮನೆಯ ದಂಪತಿ ಹಾಗೂ ಅವರ ಇಬ್ಬರು ಮಕ್ಕಳನ್ನು ಪುತ್ತೂರು ಗ್ರಾಮಾಂತರ ಠಾಣೆ (ಸಂಪ್ಯ)ಗೆ ವಿಚಾರಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದರು. ದಲಿತ್‌ ಸೇವಾ ಸಮಿತಿ ಮೂಲಕ ಈ ನಾಲ್ವರನ್ನು ಶುಕ್ರವಾರ ಠಾಣೆಗೆ ಕರೆತರಲಾಗಿತ್ತು.

ವಿಚಾರಣೆ ವೇಳೆ ಮೂವರು ಪೊಲೀಸರು ಬಾಲಕಿಗೆ ಥಳಿಸಿ, ವಿದ್ಯುತ್‌ ಶಾಕ್‌ ನೀಡಿ ಕಳವು ಒಪ್ಪಿಕೊಳ್ಳಬೇಕು ಎಂದು ಬೆದರಿಸಿದ್ದರು. ದಂಪ ತಿಗೂ ಚಿತ್ರಹಿಂಸೆ ನೀಡಿದ್ದಲ್ಲದೆ, ಎಸ್‌ಐ ಹಲ್ಲೆ ಮಾಡಿ ಬೆಳಗ್ಗೆ 10ರಿಂದ ರಾ.10.30ರ ತನಕ ಠಾಣೆಯಲ್ಲಿ ಕೂಡಿ ಹಾಕಿ ಹಿಂಸೆ ನೀಡಿರುವುದಾಗಿ ಆರೋಪಿಸಿ ಎಲ್ಲರೂ ಶನಿವಾರ ಬೆಳಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿದು ದಲಿತ್‌ ಸೇವಾ ಸಂಘಟನೆ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ತಾಲೂಕು ಅಧ್ಯಕ್ಷ ರಾಜು ಹೊಸ್ಮಠ ಸಹಿತ ಸಂಘಟನೆ ಪ್ರಮುಖರು ಸೇರಿ ನ್ಯಾಯಕ್ಕಾಗಿ ಪಟ್ಟು ಹಿಡಿದರು.

Advertisement

ಎಸ್‌ಐ ಸತ್ತಿವೇಲು ಆಸ್ಪತ್ರೆಗೆ ಬಂದು, ವಿದ್ಯಾರ್ಥಿನಿ ಮತ್ತು ದಲಿತ ಮುಖಂಡರ ಜತೆ ಮಾತುಕತೆ ನಡೆಸಿ ದರು. ಈ ವೇಳೆ ದಲಿತ ಮುಖಂಡರು ಮೂವರು ಪೊಲೀಸರನ್ನು ಅಮಾನತು ಗೊಳಿಸಬೇಕೆಂದು ಆಗ್ರಹಿಸಿದರು.
ಪ್ರಭಾರ ಸಿಡಿಪಿಒ ಭಾರತಿ, ಗ್ರಾಮಾಂತರ ಸಿಐ ನಾಗೇಶ್‌ ಕದ್ರಿ, ಡಿವೈಎಸ್ಪಿ ದಿನಕರ್‌ ಶೆಟ್ಟಿ ಹಾಗೂ ಎಸ್ಪಿ ಲಕ್ಷ್ಮೀ ಪ್ರಸಾದ್‌ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ದಲಿತ್‌ ಸೇವಾ ಸಮಿತಿ ಮುಖಂಡರನ್ನು ನಗರ ಠಾಣೆಗೆ ಕರೆಸಿ ಮಾತುಕತೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next