Advertisement

ಆಸ್ಪತ್ರೆಯಲ್ಲಿರೋ ಬೆಳಗೆರೆ ವಿರುದ್ಧ ಮತ್ತೊಂದು ವಾರಂಟ್ ಜಾರಿ

02:37 PM Dec 14, 2017 | Sharanya Alva |

ಬೆಂಗಳೂರು: ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಮಧ್ಯಾಂತರ ಜಾಮೀನು ಪಡೆದುಕೊಂಡ ಬೆನ್ನಲ್ಲೇ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗುರುವಾರ ಅರೆಸ್ಟ್ ವಾರಂಟ್ ಜಾರಿ ಮಾಡಿ, ಕೂಡಲೇ ರವಿ ಬೆಳಗೆರೆಯನ್ನು ದಸ್ತಗಿರಿ ಮಾಡಿ ಹಾಜರುಪಡಿಸುವಂತೆ ಕೋರ್ಟ್ ಸಂಜಯನಗರ ಪೊಲೀಸರಿಗೆ ಸೂಚನೆ ನೀಡಿದೆ.

Advertisement

ಸುಪಾರಿ ಪ್ರಕರಣದಲ್ಲಿ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರವಷ್ಟೇ ಕೋರ್ಟ್ ರವಿ ಬೆಳಗೆರೆಗೆ 3 ದಿನ ಷರತ್ತುಬದ್ಧ ಮಧ್ಯಾಂತರ ಜಾಮೀನು ನೀಡಿತ್ತು. ಏತನ್ಮಧ್ಯೆ ಸುಮಾರು ಏಳು ವರ್ಷಗಳ ಹಿಂದೆ ಬೆಳಗೆರೆ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಅರೆಸ್ಟ್ ವಾರಂಟ್ ಅನ್ನು ಜಾರಿ ಮಾಡಿದೆ.

ಹಾಯ್ ಬೆಂಗಳೂರಿನಲ್ಲಿ 7 ವರ್ಷದ ಹಿಂದೆ ಮಹಿಳೆಯೊಬ್ಬರ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ಮಹಿಳೆ ತನ್ನ ತೇಜೋವಧೆ ಮಾಡಿ ವರದಿ ಪ್ರಕಟಿಸಲಾಗಿದೆ ಎಂದು ದೂರು ದಾಖಲಿಸಿದ್ದರು. ಆದರೆ ಬೆಳಗೆರೆಯವರು ಸಬೂಬು ಹೇಳಿ ಪ್ರತಿ ಬಾರಿಯೂ ಕೋರ್ಟ್ ವಿಚಾರಣೆಗೆ ಗೈರು ಹಾಜರಾಗಿದ್ದರು.

ಈ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿ ಬೆಳಗೆರೆಯನ್ನು ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಳ್ಳುವಂತೆ ಸಂಜಯನಗರ ಪೊಲೀಸರಿಗೆ ನಿರ್ದೇಶನ ನೀಡಿದೆ. ಪೊಲೀಸರು ಬಾಡಿ ವಾರಂಟ್ ಪಡೆದು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳಗೆರೆ ಅವರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next