Advertisement

ಪೊಲೀಸ್‌ ಆತ್ಮಹತ್ಯೆ ತಡೆ: ಇನ್ನು ಮಾನಸಿಕ ಚಿಕಿತ್ಸೆ

03:50 AM Mar 04, 2017 | |

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 50 ಮಂದಿ ಕರ್ತವ್ಯ ನಿರತ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

Advertisement

ಮಾನಸಿಕ ಒತ್ತಡ, ಹಿರಿಯ ಅಧಿಕಾರಿಗಳ ಕಿರುಕುಳ, ವೈಯಕ್ತಿಕ ಹಾಗೂ ಕೌಟುಂಬಿಕ ಕಾರಣಗಳು, ವಿಶ್ರಾಂತಿಗೆ ರಜೆ ಸಿಗದಿರುವುದು, ಅನಾರೋಗ್ಯ ಆತ್ಮಹತ್ಯೆಗೆ ಪ್ರಮುಖ ಕಾರಣಗಳು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.

ಆತ್ಮಹತ್ಯೆ ಮಾಡಿಕೊಂಡ ಬಹುತೇಕ ಪೊಲೀಸರು ತಮ್ಮ ಸಾವಿಗೆ ಮಾನಸಿಕ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳ ಎಂಬುದರ ಬಗ್ಗೆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಹೀಗಾಗಿ, ಹಿರಿಯ ಅಧಿಕಾರಿಗಳಿಂದ ಹಿಡಿದು ಪೊಲೀಸ್‌ ಪೇದೆಯವರೆಗೆ ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ ಕೌನ್ಸೆಲಿಂಗ್‌ ಕೇಂದ್ರಗಳನ್ನು ಹೆಚ್ಚಿಸಿ ತಜ್ಞರನ್ನು ಅಲ್ಲಿ ನೇಮಿಸಲು ತೀರ್ಮಾನಿಸಿದೆ.

ಪೊಲೀಸ್‌ ಸಿಬ್ಬಂದಿ ಆತ್ಮಹತ್ಯೆ ತಡೆ ಹಾಗೂ ಸಿಬ್ಬಂದಿಯ ಮಾನಸಿಕ ಸ್ಥೈರ್ಯ ಕಾಪಾಡುವ ನಿಟ್ಟಿನಲ್ಲಿ  ಜಿಲ್ಲೆಗೊಬ್ಬರಂತೆ ಮಾನಸಿಕ ತಜ್ಞರ  ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಕರ್ತವ್ಯ ನಿರ್ವಹಣೆಗೆ ಹಾಜರಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಗೃಹ ಇಲಾಖೆಯಿಂದ ನೇಮಕವಾಗುವ ಮಾನಸಿಕ ತಜ್ಞರು ಆಯಾ ಜಿಲ್ಲೆಗಳ ಪೊಲೀಸ್‌ ಸಿಬ್ಬಂದಿಗೆ ವಿಶೇಷ ಕಾರ್ಯಾಗಾರ, ಆಪ್ತ ಸಮಾಲೋಚನೆ, ಮಾನಸಿಕ ಸಧೃಡತೆ ಕಾಪಾಡಿಕೊಳ್ಳುವ ಸಲಹೆ ನೀಡಲಿದ್ದಾರೆ.

Advertisement

ಜತೆಗೆ ಮಾನಸಿಕ ಖನ್ನತೆಗೆ ಒಳಗಾಗುವ ಪೊಲೀಸ್‌ ಸಿಬ್ಬಂದಿಗೆ ಕೌನ್ಸಿಲಿಂಗ್‌ ಸಹ ನಡೆಸಲಿದ್ದಾರೆ.  ಪ್ರತಿಯೊಬ್ಬ ಪೊಲೀಸ್‌ ಪೇದೆಯೂ ವೈಯಕ್ತಿಕವಾಗಿ ಮಾನಸಿಕ ತಜ್ಞರನ್ನು ಭೇಟಿಯಾಗಿ  ಅನಾರೋಗ್ಯ ಹಾಗೂ ವೃತ್ತಿ ಸಂಬಂಧಿ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಲು ಅವಕಾಶವಿದೆ.

ಕೌನ್ಸಲಿಂಗ್‌ ಸಮಯದಲ್ಲಿ ವ್ಯಕ್ತವಾಗುವ ಪೊಲೀಸರ ಖನ್ನತೆ ಅಥವಾ ಒತ್ತಡ, ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ಕಿರುಕುಳ ಮತ್ತಿತರ ಅಂಶಗಳ ಬಗ್ಗೆ ಮಾನಸಿಕ ತಜ್ಞರು ಇಲಾಖೆಗೆ ವರದಿ ಸಹ ಸಲ್ಲಿಸಲಿದ್ದಾರೆ. ಈ ವರದಿ ಆಧರಿಸಿ ಪೊಲಿಸ್‌ ಸಿಬ್ಬಂದಿಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವುದು ಇಲಾಖೆಯ ಉದ್ದೇಶವಾಗಿದೆ.

ಕಳೆದ ವರ್ಷ 17 ಪೊಲೀಸರ ಆತ್ಮಹತ್ಯೆ
ಕಳೆದ ವರ್ಷ ಡಿವೈಎಸ್‌ಪಿ ಬಿ.ಗಣಪತಿ, ಚಿಕ್ಕಮಗಳೂರಿನ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್‌, ಮಾಲೂರಿನ ಸಿಪಿಐ ರಾಘವೇಂದ್ರ ಸೇರಿದಂತೆ 17 ಮಂದಿ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಿರಿಯ ಅಧಿಕಾರಿಗಳಿಂದ ಕಿರುಕುಳ, ಮಾನಸಿಕ ಒತ್ತಡಗಳಿಂದಲೇ ಸಿಬ್ಬಂದಿ ಆತ್ಮಹತ್ಯೆಗೆ ಕಾರಣ ಎಂಬ ಅಂಶ ಆತ್ಮಹತ್ಯೆ ಮಾಡಿಕೊಂಡ ಕೆಲವರು ಬರೆದಿಟ್ಟ ಡೆತ್‌ನೋಟ್‌ಗಳಿಂದ ಸಾಬೀತಾಗಿತ್ತು. 2014 ರಿಂದ 2016ರವರೆಗಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ 49 ಮಂದಿ ಪೊಲೀಸ್‌ ಸಿಬ್ಬಂದಿಯ ಪೈಕಿ, 6 ಮಂದಿ ಕರ್ತವ್ಯದ ಒತ್ತಡ ಹಾಗೂ ಮಾನಸಿಕ ಕಿರುಕುಳದಿಂದ ಸಾವಿಗೆ ಶರಣಾಗಿದ್ದರೆ, 26 ಮಂದಿ ವೈಯಕ್ತಿಕ ಕಾರಣಕ್ಕೆ, 10 ಮಂದಿ ಅನಾರೋಗ್ಯ  ಹಾಗೂ ನಾಲ್ವರು ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಇಲಾಖೆಯ ಆಂತರಿಕ ತನಿಖೆಯಲ್ಲಿ ಗೊತ್ತಾಗಿದೆ.

ಜಿಲ್ಲೆಗೊಬ್ಬ ಮಾನಸಿಕ ತಜ್ಞ
ಈ ಹಿಂದೆಯೂ ಪೊಲೀಸ್‌ ಸಿಬ್ಬಂದಿಗೆ ಮಾನಸಿಕ ತರಬೇತಿ ಕಾರ್ಯಾಗಾರ ನಡೆಸಿ ಎಂದು ಎಲ್ಲ ಎಸ್ಪಿಗಳಿಗೆ ನೋಟೀಸ್‌ ಕೊಡಲಾಗಿತ್ತು. ಆ ನಿಟ್ಟಿನಲ್ಲಿ ಕೆಲವು ಜಿಲ್ಲೆಗಳಲ್ಲಿ ಕಾರ್ಯಾಗಾರವೂ ನಡೆದಿದೆ. ಇದೀಗ ಪೊಲೀಸ್‌ ಸಿಬ್ಬಂದಿಯಲ್ಲಿ ಮಾನಸಿಕ ಸದೃಢತೆ ಕಾಪಾಡುವುದು ಹಾಗೂ ಆಪ್ತ ಸಮಾಲೋಚನೆ ನಡೆಸುವ ಸಲುವಾಗಿ ಜಿಲ್ಲೆಗೊಬ್ಬರಂತೆ ಮಾನಸಿಕ ತಜ್ಞರನ್ನು ನೇಮಕ ಪ್ರಕ್ರಿಯೆ ಕೊನೆ ಹಂತದಲ್ಲಿದೆ. ಸದ್ಯದಲ್ಲಿಯೇ ಎಲ್ಲ ಜಿಲ್ಲೆಗಳಲ್ಲಿ ಮಾನಸಿಕ ತಜ್ಞರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಜತೆಗೆ ಪೊಲೀಸ್‌ ಇಲಾಖೆಯ ಕೆಳಹಂತದ ಸಿಬ್ಬಂದಿಗೆ ಹಲವು ಸೌಕರ್ಯಗಳನ್ನು ಕಲ್ಪಿಸುವುದರ ಬಗ್ಗೆ ಗೃಹ ಇಲಾಖೆ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಆರ್‌.ಕೆ ದತ್ತಾ ಹೇಳಿದ್ದಾರೆ.

ಆತ್ಮಹತ್ಯೆ ಅಂಕಿ-ಅಂಶ
2014 – 11
2015- 21
2016- 17
2017-1

– ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next