Advertisement

ಸಿಡಿ ಹೆಸರಿನ ಮೌಢ್ಯಾಚರಣೆಗೆ ಪೊಲೀಸರು ತಡೆ

03:29 PM Feb 09, 2020 | Suhan S |

ಭಾರತೀನಗರ: ಭಕ್ತರನ್ನು ಕಂಬಕ್ಕೆ ಕಟ್ಟಿ ರಥ ಎಳೆಯುವ ಐತಿಹಾಸಿಕ ಏಳೂರಮ್ಮ ಸಿಡಿ ಎಂಬ ಮೌಢ್ಯಾಚರಣೆ ಮಾಡುವುದನ್ನು ತಡೆಯುವ ಮೂಲಕ ಪೊಲೀಸರು ದಿಟ್ಟತನ ಪ್ರದರ್ಶಿಸಿದ್ದಾರೆ.

Advertisement

ಈ ಸಂಬಂಧ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪೊಲೀಸರು, ಸಿಡಿಕಂಬಕ್ಕೆ ಭಕ್ತರನ್ನು ಕಟ್ಟುವ ಬದಲು ಹೊಂಬಾಳೆ ಅಥವಾ ಗೊಂಬೆಯನ್ನು ಕಟ್ಟಿ ಎಳೆಯಬೇಕು. ಇಲ್ಲದಿದ್ದರೆ ಇಂತಹ ಮೌಢ್ಯಾಚರಣೆ ನಡೆಯಲು ಬಿಡುವುದಿಲ್ಲ ಎಂದು ಪೊಲೀಸರು ತಡೆದರು.

ಸಿಡಿ ಉತ್ಸವ ರದ್ದು: ಹೀಗಾಗಿ ಪೊಲೀಸರ ಭಾರೀ ವಿರೋಧದಿಂದಾಗಿ ದೊಡ್ಡರಸೀಕೆರೆಯಲ್ಲಿ ಶುಕ್ರವಾರ ರಾತ್ರಿ 10ಕ್ಕೆ ನಡೆಯಬೇಕಿದ್ದ ಏಳೂರಮ್ಮನ ಸಿಡಿ ಉತ್ಸವ ರದ್ದುಗೊಂಡಿತು. 75 ಅಡಿಯುಳ್ಳ ತೇರಿನ ಕಂಬಕ್ಕೆ ಮನುಷ್ಯನನ್ನು ಕೊಕ್ಕೆಗಳಿಂದ ನೇತು ಹಾಕಿ, ಎಳೆಯುವ ಸಂಪ್ರದಾಯ ನಡೆದುಕೊಂಡು ಬಂದಿತ್ತು. ಹರಕೆ ಹೊತ್ತ ಭಕ್ತರು, ಸಿಡಿ ಆಡುವ ಮೂಲಕ ಹರಕೆ ತೀರಿಸುತ್ತಿದ್ದರು.

ಪೊಲೀಸರೊಂದಿಗೆ ಮಾತಿನ ಚಕಮಕಿ: ರಾಜ್ಯದಲ್ಲಿ ಮೌಡ್ಯ ನಿಷೇಧ ಕಾಯ್ದೆ ಜಾರಿಯಾಗಿದ್ದರಿಂದ ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮದಲ್ಲಿ ಸಭೆ ನಡೆಸಿದ ತಾಲೂಕು ಆಡಳಿತ ಅಧಿಕಾರಿಗಳು ಮತ್ತು ಪೊಲೀಸರು ಸಿಡಿ ಕಂಬಕ್ಕೆ ಮನುಷ್ಯರನ್ನು ತೂಗು ಹಾಕಿ ಉತ್ಸವ ನಡೆಸುವಂತಿಲ್ಲ. ಹೊಂಬಾಳೆ ಅಥವಾ ಗೊಂಬೆಯನ್ನು ಕಟ್ಟಿ ಸಿಡಿ ರಥವನ್ನು ಎಳೆಯಬಹುದು ಎಂದು ಸೂಚಿಸಿದ್ದರು. ಆದರೆ ಶುಕ್ರವಾರ ರಾತ್ರಿ 10ಕ್ಕೆ ಸಿಡಿ ಆಚರಣೆಗೆ ಗ್ರಾಮದ ಮುಖಂಡರು ಮುಂದಾದಾಗ ಪೊಲೀಸರು ತಡೆಯೊಡ್ಡಿದ್ದರು. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ರಾತ್ರಿ 1 ಗಂಟೆವರೆಗೂ ಮಾತಿನ ಚಕಮಕಿ ನಡೆಯಿತು.

ನಾಲ್ಕು ದಿನದ ಹಿಂದೆ ಸಿಡಿ ಆಚರಿಸದಂತೆ ತಿಳಿಸಿದ್ದೀರಿ. ಮೊದಲೆ ನಮಗೆ ಮಾಹಿತಿ ನೀಡಿದ್ದರೆ, ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುತ್ತಿದ್ದೆವು. ಇಲ್ಲವೇ ಅನುಮತಿ ಪಡೆಯುತ್ತಿದ್ದೆವು. ನಮ್ಮ ಸಂಪ್ರದಾಯಕ್ಕೆ ಅಡ್ಡಿ ಮಾಡುತ್ತಿದ್ದೀರಿ ಎಂದು ಯಜಮಾನರು ಮತ್ತು ಭಕ್ತರು ಪೊಲೀಸರಿಗೆ ಕಿಡಿಕಾರಿದರು.

Advertisement

ಸಿಡಿ ಆಚರಣೆಗೆ ಭಕ್ತರು ಪಟ್ಟುಹಿಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರನ್ನು ಗ್ರಾಮಕ್ಕೆ ಕರೆಯಿಸಿಕೊಳ್ಳಲಾಯಿತು. ಯಾವುದೇ ಕಾರಣಕ್ಕೂ ಮನುಷ್ಯರನ್ನು ತೂಗು ಹಾಕಿ, ಸಿಡಿ ಆಚರಿಸಿಲು ಬಿಡುವುದಿಲ್ಲ. ಕಾನೂನು ಪಾಲಿಸಲು ಮುಂದಾಗಿ ಎಂದು ಎಚ್ಚರಿಕೆ ನೀಡಿದರು. ತರುವಾಯ ಯಜಮಾನರು ಕುಪಿತಗೊಂಡು ರಾತ್ರಿ 1 ಸಮಯದಲ್ಲಿ ಸಿಡಿಯನ್ನು ಸ್ಥಳದಲ್ಲೇ ಕೈಬಿಟ್ಟರು. ಇದರಿಂದ ಭಕ್ತರು ನಿರಾಶೆಗೊಂಡು ಹಿಂತಿರುಗಿದರು. ನಂತರ ಇತರೆ ಧಾರ್ಮಿಕ ಪೂಜೆಗಳನ್ನು ನೇರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next