Advertisement

ಸಕಾರಣವಿಲ್ಲದೆ ತಿರುಗಾಡಿದರೆ ಲಾಠಿ ಏಟು, ಬಸ್ಕಿ , ಬಂಧನ!

08:49 PM Mar 26, 2020 | Sriram |

ಉಡುಪಿ/ಕುಂದಾಪುರ: ಯಾವುದೇ ಕಾರಣಗಳಿಲ್ಲದೆ ಬಂದ್‌ ಸಂದರ್ಭ ಪೇಟೆ ಹೇಗಿದೆ, ರಸ್ತೆ ಖಾಲಿ ಇದೆ, ಒಂದು ಜಾಲಿ ರೈಡ್‌ ಹೋಗಿ ಬರೋಣ, ಮನೆಯಲ್ಲಿ ಕುಳಿತು ಬೋರಾಯ್ತು; ಒಂದು ಸುತ್ತು ಪೇಟೆ ತಿರುಗಿ ಬರೋಣ ಎಂದು ಹೊರಡುವವರಿಗೆ ಪೊಲೀಸರ ಲಾಠಿ ರುಚಿ ಸಿಕ್ಕಿದೆ. ಕುಂದಾಪುರ ಭಾಗದಲ್ಲಿ ಎಸ್‌ಐ ಹರೀಶ್‌ ಆರ್‌. ನಾಯ್ಕ ಅವರಷ್ಟೇ ಅಲ್ಲ; ಸಹಾಯಕ ಕಮಿಷನರ್‌ ಕೆ. ರಾಜು ಅವರು ಕೂಡ ಕೈಯಲ್ಲಿ ಲಾಠಿ ಹಿಡಿದೇ ಎಚ್ಚರಿಸಿದ್ದಾರೆ. ಇನ್ನು ಕೆಲವರಿಗೆ ಬಸ್ಕಿ ತೆಗೆಸಲಾಗಿದೆ.

Advertisement

ಉಡಾಫೆ ಉತ್ತರ
ಉದ್ಧಟತನ ಪ್ರದರ್ಶಿಸಿದ ಯುವಕನೊಬ್ಬನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಉಡುಪಿಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಮಂದಿಗೆ ಗಸ್ತು ತಿರುಗುತ್ತಿದ್ದ ಪೊಲೀಸ್‌ ಮತ್ತು ಟ್ರಾಫಿಕ್‌ ಪೊಲೀಸರು ಲಾಠಿ ಬೀಸಿ ಎಚ್ಚರಿಕೆ ನೀಡಿದರು. ನಗರದ ಹಲವೆಡೆ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಸವಿಲ್ಲದೆ ಬೈಕ್‌ ಹಾಗೂ ಕಾಲು ನಡಿಗೆಯಲ್ಲಿ ಅಡ್ಡಾಡುತ್ತಿದ್ದ ಮಂದಿಗೆ ಪೊಲೀಸರು ಬಿಸಿ ಮುಟ್ಟಿಸಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಸಂಖ್ಯೆ ಕಡಿಮೆ
ಗುರುವಾರ ಬೆಳಗ್ಗೆ 11ರ ವರೆಗೆ ಗಿಜಿಗುಡುವಂತೆ ವಾಹನಗಳ ಓಡಾಟ ನಡೆದಿತ್ತು. ಪೊಲೀಸರು ಲಾಠಿ ಬೀಸಿ ಮನೆಗೆ ಕಳುಹಿಸಲು ಆರಂಭಿಸಿದ ಬಳಿಕ ವಾಹನಗಳ ಸಂಖ್ಯೆ ಕಡಿಮೆಯಾಯಿತು. ಶಾಸ್ತ್ರಿ ಸರ್ಕಲ್‌ನಲ್ಲಿ ಬ್ಯಾರಿಕೇಡ್‌ ನಿರ್ಮಿಸಿ ನಗರದ ಒಳಗೆ ನಾಕಾಬಂದಿ ಮಾಡಿ ವಿಚಾರಿಸಿ ಬಿಡಲಾಗು ತ್ತಿತ್ತು. ಸಕಾರಣವಿಲ್ಲದಿದ್ದರೆ ಮರಳಿ ಕಳುಹಿಸ ಲಾಗುತ್ತಿತ್ತು. ಸಂಗಮ್‌ ಬಳಿ ನಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಪೊಲೀಸರು ವಿಚಾರಿಸಿಯೇ ಲಾಠಿ ರುಚಿ ತೋರಿಸುತ್ತಿದ್ದರು. ಆದರೆ ಇಂತಹವರ ಸಂಖ್ಯೆ ಹೆಚ್ಚಿದಾಗ ಒಂದಿಬ್ಬರು ಅಮಾಯಕರೂ ಪೆಟ್ಟು ತಿಂದರು.

ಪಿಳ್ಳೆನೆವ: ಕುಂದಾಪುರದಲ್ಲಿ ಕಾಲು ಕೆಜಿ ತರಕಾರಿಗಾಗಿ ಒಬ್ಬ ವ್ಯಕ್ತಿ ಆಗಮಿಸಿದ್ದ. ಪೇಟೆಗೆ ಬರಲು ಕಾರಣ ಕೇಳಿದಾಗ ತರಕಾರಿ ಕೊಳ್ಳಲು ಎಂದ. ಕೊಂಡದ್ದು ಕಾಲು ಕೆ.ಜಿ., ಇಷ್ಟೇನಾ ಅಂದರೆ ನಾಳೆ ಫ್ರೆಶ್‌ ಸಿಗುತ್ತದೆ, ನಾಳೆಯೇ ತೆಗೆದುಕೊಳ್ಳುತ್ತೇನೆ ಎಂದ. ಇಂತಹ ಸಣ್ಣ ಕಾರಣಕ್ಕೆ ಬಂದು ಪೇಟೆಯಲ್ಲಿ ವಾಹನ ಓಡಾಟ ಹೆಚ್ಚಾಗಬಾರದು ಎಂದು ಆತನಿಗೆ ಬಸ್ಕಿ ತೆಗೆಯಲು ಹೇಳಲಾಯಿತು. ರೌಂಡ್‌ ಹಾಕಲು ಎಂದು ಬಂದ ಇನ್ನೊಬ್ಬನಿಗೆ ಬಿದ್ದ ಏಟಿಗೆ ಕಣ್ಣಲ್ಲಿ ಹನಿ ನೀರು ಜಿನುಗಿತ್ತು. ಜನ ಎರಡು ಮಾತ್ರೆ, 100 ಗ್ರಾಂ ಬೆಳ್ಳುಳ್ಳಿ ಎಂದು ಪೇಟೆಗೆ ಬರುತ್ತಿದ್ದರು. ಇದರಿಂದಾಗಿ ಬಂದ್‌ ವಾತಾವರಣ ಮರೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next