Advertisement

ಮೀಟರ್‌ ತೋರಿದ ಪೊಲೀಸರು!

05:27 PM Jun 14, 2018 | |

ಹುಬ್ಬಳ್ಳಿ: ನಗರದಲ್ಲಿ ಮಂಗಳವಾರ ಸಂಜೆ ಪೊಲೀಸರು ಹಠಾತ್ತಾಗಿ ಆಟೋರಿಕ್ಷಾಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಚಾಲಕರ ಸಮವಸ್ತ್ರ, ಚಾಲನಾ ಪರವಾನಗಿ ಪತ್ರ, ಪರ್ಮಿಟ್‌, ವಿಮೆ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಪರಿಶೀಲಿಸಿದರಲ್ಲದೆ, 70 ಆಟೋರಿಕ್ಷಾಗಳನ್ನು ಜಫ್ತು ಮಾಡಿದ್ದಾರೆ.

Advertisement

ಡಿಸಿಪಿ ಬಿ.ಎಸ್‌. ನೇಮಗೌಡ, ಎಸಿಪಿಗಳಾದ ಎಂ.ವಿ. ನಾಗನೂರ, ಎನ್‌.ಬಿ. ಸಕ್ರಿ ನೇತೃತ್ವದಲ್ಲಿ ನಗರದ ಹಳೆ ಬಸ್‌ ನಿಲ್ದಾಣ, ಕಿತ್ತೂರ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ದೇಸಾಯಿ ವೃತ್ತ, ದೇಶಪಾಂಡೆ ನಗರ, ಕೇಶ್ವಾಪುರ ಸರ್ವೋದಯ ವೃತ್ತ, ನ್ಯೂ ಇಂಗ್ಲಿಷ್‌ ಸ್ಕೂಲ್‌ ವೃತ್ತ, ಹಳೇಹುಬ್ಬಳ್ಳಿ ದುರ್ಗದ ಬಯಲು ವೃತ್ತ, ಇಂಡಿ ಪಂಪ್‌ ವೃತ್ತ ಸೇರಿದಂತೆ ಇನ್ನಿತರೆ ಪ್ರಮುಖ ರಸ್ತೆಗಳಲ್ಲಿ 20 ತಂಡಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 500ಕ್ಕೂ ಅಧಿಕ ಆಟೋ ರಿಕ್ಷಾಗಳನ್ನು ತಪಾಸಣೆ ನಡೆಸಿದರು. 

ಕಾರ್ಯಾಚರಣೆ ವೇಳೆ ಪರ್ಮಿಟ್‌, ಸಮವಸ್ತ್ರ ಧರಿಸದ, ವಾಹನ ಚಾಲನಾ ಪರವಾನಗಿ ಪತ್ರ ಇಲ್ಲದ, ವಿಮೆ ಮಾಡಿಸದ ಹಾಗೂ ಅಗತ್ಯ ದಾಖಲೆಗಳನ್ನು ಹೊಂದಿರದ ಆಟೋರಿಕ್ಷಾ ಚಾಲಕರಿಗೆ ಸ್ಥಳದಲ್ಲೇ ದಂಡ ಹಾಕಿದರು. ಯಾವುದೇ ದಾಖಲಾತಿ ಹೊಂದಿರದ ಆಟೋರಿಕ್ಷಾ ಚಾಲಕರ 70 ವಾಹನಗಳನ್ನು ಜಫ್ತು ಮಾಡಿ ಕಾರವಾರ ರಸ್ತೆಯ ಹಳೆ ಸಿಎಆರ್‌ ಮೈದಾನದಲ್ಲಿ ನಿಲ್ಲಿಸಿದರು. ಸ್ಥಳದಲ್ಲೇ ದಂಡ ಕಟ್ಟದ ಚಾಲಕರಿಗೆ ಕೋರ್ಟ್‌ನಲ್ಲಿ ಹಣ ಪಾವತಿಸುವಂತೆ ಸೂಚಿಸಿದರು. ಜಫ್ತು ಮಾಡಿದ ಆಟೋ ರಿಕ್ಷಾಗಳಲ್ಲಿನ ಚಾಲಕರಿಂದ ದಾಖಲಾತಿಗಳನ್ನು ಪರಿಶೀಲಿಸಿ 20 ವಾಹನಗಳನ್ನು ಬಿಟ್ಟರು. ಇನ್ನುಳಿದ ವಾಹನಗಳ ಚಾಲಕರಿಗೆ ದಾಖಲಾತಿ ಹಾಜರುಪಡಿಸುವಂತೆ ಸೂಚಿಸಿದರು. ನಗರದಲ್ಲಿನ ಸಿವಿಲ್‌ ಹಾಗೂ ಸಂಚಾರ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next