Advertisement

ಚೀನದಲ್ಲಿ ನಿಲ್ಲದ ಆಕ್ರೋಶ: ಶಾಂಘೈನಲ್ಲಿ ಪೊಲೀಸರ ಜತೆಗೆ ಘರ್ಷಣೆ

07:31 PM Nov 28, 2022 | Team Udayavani |

ಬೀಜಿಂಗ್‌: ಕೊರೊನಾ ಸೋಂಕಿನ ವಿರುದ್ಧ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನೇತೃತ್ವದ ಸರ್ಕಾರದ ಆಡಳಿತ ಜಾರಿಗೊಳಿಸಿರುವ ಕಠಿಣ ಪ್ರತಿಬಂಧಕ ಕ್ರಮಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಆ ದೇಶದ ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಯ ಪ್ರಧಾನ ಕೇಂದ್ರವಾಗಿರುವ ಶಾಂಘೈನಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಪ್ರತಿಭಟನೆಗಳು ಸರ್ಕಾರವನ್ನು ಕೆಂಗಡಿಸಿವೆ. ಶುಕ್ರವಾರ (ನ.25)ದಿಂದ ಈಚೆಗೆ ಆ ದೇಶದಲ್ಲಿ ಸೋಂಕು ಪ್ರತಿಬಂಧಕ ಕ್ರಮಗಳನ್ನು ಪ್ರಶ್ನೆ ಮಾಡಿ ಜನರು ಬೀದಿಗೆ ಇಳಿದಿದ್ದಾರೆ.

ಭಾನುವಾರ ರಾತ್ರಿ ಶಾಂಘೈನಲ್ಲಿ ನಿಯಮಗಳನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರ ಜತೆಗೆ ಘರ್ಷಣೆಯನ್ನೂ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಹಲವು ಮಂದಿಯನ್ನು ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿದೆ.

ಈ ಘಟನೆಯ ಬಳಿಕ ಶಾಂಘೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕ್ಸಿ ಜಿನ್‌ಪಿಂಗ್‌ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಈ ಘಟನೆಗಳು ನಡೆದಿವೆ.

40 ಸಾವಿರ ಕೇಸು:
ಚೀನದಲ್ಲಿ ಒಟ್ಟಾರೆಯಾಗಿ 40 ಸಾವಿರ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಬೀಜಿಂಗ್‌ ಒಂದರಲ್ಲೇ 4 ಸಾವಿರ ಕೇಸುಗಳು ದೃಢಪಟ್ಟಿವೆ. ಜತೆಗೆ ಕಠಿಣ ಪ್ರತಿಬಂಧಕ ಕ್ರಮಗಳನ್ನು ಅಲ್ಲಿನ ಸರ್ಕಾರ ಸಮರ್ಥಿಸಿಕೊಂಡಿದೆ.

Advertisement

ಬಿಬಿಸಿ ಪತ್ರಕರ್ತಗೆ ಥಳಿತ:
ಶಾಂಘೈನಲ್ಲಿ ಸರ್ಕಾರಿ ನೀತಿ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತನಿಗೆ ಥಳಿಸಲಾಗಿದೆ ಎಂದು ಬಿಬಿಸಿ ಆರೋಪಿಸಿದೆ. ಆದರೆ, ಪೊಲೀಸರು ಈ ವಾದವನ್ನು ತಿರಸ್ಕರಿಸಿದ್ದಾರೆ.

ವಿರೋಧಿ ಘೋಷಣೆಗಳಿಗೆ ಸೆನ್ಸಾರ್‌:
ಚೀನ ಅಧ್ಯಕ್ಷ ಕ್ಸಿಜಿನ್‌ಪಿಂಗ್‌ ರಾಜೀನಾಮೆ ಕೊಡಬೇಕು, ಕೂಡಲೇ ಲಾಕ್‌ಡೌನ್‌ ವಾಪಸ್‌ ಪಡೆಯಿರಿ ಸೇರಿದಂತೆ ಹಲವು ಸರ್ಕಾರಿ ವಿರೋಧಿ ಘೋಷಣೆಗಳು ಹೊರ ಜಗತ್ತಿಗೆ ಗೊತ್ತಾಗಬಾರದು ಎಂಬ ಕಾರಣದಿಂದಾಗಿ ಆ ಘೋಷಣೆಗಳಿಗೆ ಸರ್ಕಾರದ ವತಿಯಿಂದ ಸೆನ್ಸಾರ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next