ಹೊಸದಿಲ್ಲಿ: ಕೇಂದ್ರ ಹಾಗೂ ರಾಜ್ಯಗಳ ಪೊಲೀಸ್ ಪಡೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 1037 ಸಿಬಂದಿಗೆ ಕೇಂದ್ರ ಸರಕಾರ ಪೊಲೀಸ್ ಪದಕಗಳನ್ನು ಘೋಷಣೆ ಮಾಡಿದೆ. ಇದರಲ್ಲಿ 214 ಮಂದಿಗೆ ಶೌರ್ಯ ಪದಕ ಘೋಷಿಸಲಾಗಿದ್ದು, ಏಕೈಕ ವ್ಯಕ್ತಿ ರಾಷ್ಟ್ರಪತಿ ಶೌರ್ಯ ಪದಕ (ಪಿಎಂಜಿ) ಪಡೆದುಕೊಂಡಿದ್ದಾರೆ.
ತೆಲಂಗಾಣದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಛದುವು ಯದಯ್ಯ ಅವರಿಗೆ ಏಕೈಕ ಶೌರ್ಯ ಪದಕ ಘೋಷಣೆಯಾಗಿದೆ. 2022ರ ಜು.25ರಂದು ಅವರು ಕುಖ್ಯಾತ ಸರಗಳ್ಳರು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆದಾರರನ್ನು ಬಂಧಿಸಿದ್ದರು.
ಗರಿಷ್ಠ ಶೌರ್ಯ ಪದಕಗಳು ಕೇಂದ್ರೀಯ ಮೀಸಲು ಪಡೆ (ಸಿಆರ್‌ಪಿಎಫ್) ಸಿಬಂದಿಗೆ ಲಭಿಸಿದೆ. ಜಮ್ಮು-ಕಾಶ್ಮೀರ ಪೊಲೀಸರಿಗೆ 31, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಪೊಲೀಸರಿಗೆ ತಲಾ 17, ಛತ್ತೀಸ್‌ಗಢ ಪೊಲೀಸರಿಗೆ 15, ಮಧ್ಯಪ್ರದೇಶ ಪೊಲೀಸರಿಗೆ 12 ಪದಕಗಳು ಲಭಿಸಿವೆ. ವಿಶಿಷ್ಠ ಸೇವೆ ಸಲ್ಲಿಸಿದ 94 ಮಂದಿಗೆ ರಾಷ್ಟ್ರಪತಿಯವರ ಸೇವಾ ಪದಕ ಘೋಷಿಸಲಾಗಿದೆ. ಶ್ಲಾಘನೀಯ ಸೇವೆಗಾಗಿ 729 ಮಂದಿಗೆ ಪದಕ ಪ್ರಕಟಿಸಲಾಗಿದೆ.
ಇದೇ ವೇಳೆ ರೈಲ್ವೇ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 16 ಮಂದಿ ರೈಲ್ವೇ ರಕ್ಷಣ ಪಡೆ, ರೈಲ್ವೆ ರಕ್ಷಣೆಗಾಗಿ ಇರುವ ವಿಶೇಷ ಪಡೆಯ ಸಿಬಂದಿಗೆ ಕೂಡ ರಾಷ್ಟ್ರಪತಿಗಳ ವಿಶೇಷ ಪದಕ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ಇದೇ ವೇಳೆ, ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಯ 18 ಮಂದಿ ಅಧಿಕಾರಿಗಳಿಗೆ ಕೂಡ ರಾಷ್ಟ್ರಪತಿಗಳ ವಿಶೇಷ ಪದಕ ನೀಡಲಾಗಿದೆ. ಈ ಪೈಕಿ 6 ಮಂದಿಗೆ ವಿಶೇಷ ಸೇವೆ ಸಲ್ಲಿಸಿದ್ದಕ್ಕೆ ಪೊಲೀಸ್ ಪದಕ ನೀಡಲಾಗುತ್ತಿದೆ. ಗುರುವಾರ ಹೊಸದಿಲ್ಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪೊಲೀಸರಿಗೆ ಗೌರವ ಪ್ರದಾನ ಮಾಡಲಾಗುತ್ತದೆ.
ನಾಲ್ವರು ಯೋಧರಿಗೆ ಕೀರ್ತಿಚಕ್ರದ ಗೌರವ ಘೋಷಣೆ
ಹೊಸದಿಲ್ಲಿ: ಕರ್ನಲ್ ಮನ್‌ಪ್ರೀತ್ ಸಿಂಗ್, ರೈಫಲ್‌ವುನ್ ರವಿ ಕುಮಾರ್, ಮೇಜರ್ ಮಲ್ಲ ರಾಮ್‌ಗೊàಪಾಲ್ ನಾಯ್ಡು ಮತ್ತು ಹಿಮಾಯುನ್ ಮುಜಾಮಿಲ್ ಭಟ್ ಅವರಿಗೆ ಕೀರ್ತಿಚಕ್ರ ಘೋಷಣೆ ಮಾಡಲಾಗಿದೆ. ಮನ್‌ಪ್ರೀತ್‌ಸಿಂಗ್ ಮತ್ತು ರವಿಕುಮಾರ್ ಅವರಿಗೆ ಮರಣೋತ್ತರವಾಗಿ ಶಾಂತಿಕಾಲದ 2ನೇ ಗರಿಷ್ಠ ಶೌರ್ಯಪ್ರಶಸ್ತಿಯನ್ನು ನೀಡಲಾಗಿದೆ.
ಮನ್‌ಪ್ರೀತ್ ಸಿಂಗ್ ಕಳೆದ ವರ್ಷ ಜಮ್ಮು – ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ಹೋರಾಡಿದ್ದರು. 4 ಕೀರ್ತಿಚಕ್ರದ ಜತೆಗೆ 18 ಶೌರ್ಯಚಕ್ರ (4 ಮರಣೋತ್ತರ), 1 ಬಾರ್ ಟು ಸೇನಾ ಪದಕ, 63 ಸೇನಾ ಪದಕ, 11 ನೌಕಾ ಸೇನಾ ಪದಕ ಮತ್ತು 6 ವಾಯುಸೇನಾ ಪದಕಗಳನ್ನು ಘೋಷಣೆ ಮಾಡಲಾಗಿದೆ.