ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಮತ ಎಣಿಕೆಗೆ ಇನ್ನೆರಡು ದಿನ ಬಾಕಿ ಇದ್ದು ಕಾಂಗ್ರೆಸ್, ಬಿಜೆಪಿ, ಪಕ್ಷೇತರ ಅಭ್ಯರ್ಥಿಗಳು ಸೇರಿ 17 ಅಭ್ಯರ್ಥಿಗಳ ಭವಿಷ್ಯವಿರುವ ಸ್ಟ್ರಾಂಗ್ ರೂಂ ಗೆ ಪೊಲೀಸ್ ಮತ್ತು ಅರೆ ಸೇನಾ ಪಡೆ ಭದ್ರತೆ ಸರ್ಪಗಾವಲು ಇದೆ.
ನಗರದ ಹೊರ ವಲಯದ ಆಕಾಶ್ ಇಂಟರ್ ನ್ಯಾಷನಲ್ ಶಾಲೆ ಯಲ್ಲಿ ಉಪ ಚುನಾವಣೆ ಮತ ಎಣಿಕೆಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಕೈಗೊಂಡಿದ್ದು ಮತದಾನ ಮುಗಿದ ಕೂಡಲೇ ಬಿಗಿ ಭದ್ರತೆಯಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್ ಯಂತ್ರವನ್ನು ಆಕಾಶ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂ ನಲ್ಲಿ ಇರಿಸಲಾಗಿದೆ.
ಆಕಾಶ್ ಇಂಟರ್ ನ್ಯಾಷನಲ್ ಶಾಲೆ ಆವರಣದಲ್ಲಿ ಪ್ರತಿದಿನ 02 ಕೆಎಸ್‌ಆರ್‌ಪಿ, 01 ಬಿಎಸ್‌ಎಫ್, 01 ಇನ್ಸ್‌ಪೆಕ್ಟರ್ ಮತ್ತು 03 ಪಿಎಸ್‌ಐ, ಸೇರಿ ಒಟ್ಟು 20 ಪೊಲೀಸ್ ಸಿಬ್ಬಂದಿ ಮತ್ತು ಅರೆ ಸೇನೆ ಸಹ ಪಾಳಿಯಂತೆ ಬಿಗಿ ಭದ್ರತೆಗೆ ನಿಯೋಜಿಸಲಾಗಿದೆ.
ಮತ ಎಣಿಕೆ ನಡೆಯುವ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಅಪರ ಜಿಲ್ಲಾಧಿಕಾರಿ ಜಗದೀಶ್ ನಾಯಕ್, ಎಸ್.ಪಿ.ರವಿ ಚನ್ನಣ್ಣನವರ್ ಸೇರಿದಂತೆ ಹಿರಿಯ ಅಧಿಕಾರಗಳ ತಂಡ ಪರಿಶೀಲಿಸಿದ್ದು ಅಗತ್ಯ ಕ್ರಮ ಕೈಗೊಂಡಿದೆ. ಮತ ಎಣಿಕೆ ದಿನದಂದು ಅನುಸರಿಸಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ಮತ ಯಂತ್ರಗಳನ್ನು ಸಿಸಿ ಕ್ಯಾಮರ ಕಣ್ಗಾವಲಿನಲ್ಲಿ ರಕ್ಷಣೆ ಮಾಡಲಾಗಿದೆ. ಗುರುವಾರ ಚುನಾವಣೆ ಮುಗಿದ ನಂತರ ರಾತ್ರಿ 10 ಗಂಟೆಗೆ ಕ್ಷೇತ್ರದ 286 ಮತ ಗಟ್ಟೆಗಳ ಯಂತ್ರಗಳನ್ನು ಸ್ಟ್ರಾಂಗ್ ರೂಂಗೆ ಕೊಂಡೊಯ್ಯಲಾಯಿತು. ಆ ಬಳಿಕ ಸ್ಟ್ರಾಂಗ್ ರೂಂ ಗಳನ್ನು ಭದ್ರವಾಗಿ ಸೀಲ್ ಮಾಡಲಾಗಿದೆ ಒಟ್ಟು 03 ವಿಭಾಗಗಳಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.