ಅಸ್ಸಾಂ: ಇಲ್ಲಿನ ಶಿವಸಾಗರ್ ಮತ್ತು ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ
ಜೂನ್ 16-17ರಂದು ಶಿವಸಾಗರ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಮೊದಲ ಕಾರ್ಯಾಚರಣೆಯಲ್ಲಿ ನಾಗಾಲ್ಯಾಂಡ್ ಕಡೆಯಿಂದ ಆಗಮಿಸಿದ್ದ ಟಾಟಾ 407 ಅನ್ನು ತಡೆದು ನಿಲ್ಲಿಸಿ ಶೋಧ ಕಾರ್ಯ ನಡೆಸಿದ ವೇಳೆ ಸುಮಾರು 4.6 ಕೆಜಿಯಷ್ಟು ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮತ್ತೊಂದು ಕಾರ್ಯಾಚರಣೆಯಲ್ಲಿ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು 8.033 ಕೆಜಿ ಮೋರ್ಪಿನ್ ವಶಪಡಿಸಿಕೊಂಡಿದ್ದು, ಜತೆಗೆ ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು, ಮೊದಲ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಡ್ರಗ್ಸ್ ನ ಮಾರುಕಟ್ಟೆ ಮೌಲ್ಯ ಅಂದಾಜು 48 ಕೋಟಿ ರೂಪಾಯಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.