ಬೆಂಗಳೂರು: ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಹಾಗೂ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ನೀಡಿರುವ ಪ್ರತಿಭಟನೆ ಕರೆ ಹಿನ್ನೆಲೆಯಲ್ಲಿ ಇಡಿ ಕಚೇರಿಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಶಾಂತಿನಗರದಲ್ಲಿರುವ ಇಡಿಕಚೇರಿಯಿಂದ ಡಬಲ್ ರಸ್ತೆಯ ಕೊನೆಯವರೆಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕರೆ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ಶಾಸಕರು, ಸಂಸದರು, ಡಿಸಿಸಿ ಅಧ್ಯಕ್ಷರು, ಕಾರ್ಯಕರ್ತ ಮುಖಂಡರು, ಮುಂಚೂಣಿ ಘಟಕದ ನಾಯಕರು ಭಾಗಿಯಾಗಲಿದ್ದಾರೆ.
ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ:ಯೋಗಿ ಆದಿತ್ಯನಾಥ್ ಹೈಕೋರ್ಟ್ ಜಡ್ಜ್ ರೀತಿ ವರ್ತಿಸುತ್ತಿದ್ದಾರೆ: ಓವೈಸಿ ಟೀಕೆ
ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಆಗಿರುವುದರಿಂದ ನೋಟಿಸ್ ನೀಡಲಾಗಿದೆಯೇ ವಿನಾ ಯಾವುದೇ ದ್ವೇಷ ರಾಜಕಾರಣ ಇಲ್ಲ ಎಂದು ಇಡಿ ಅಧಿಕಾರಿಗಳು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸ್ಪಷ್ಟನೆ ನೀಡಿದ ನಂತರವೂ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದಕ್ಕಾಗಿ ಕಾಂಗ್ರೆಸ್ ನಾಯಕರು ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.