ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೆ ತಂದ ಅಗ್ನಿಪಥ್ ನಿಯಮದ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಯುವಕರ ಆಂದೋಲನದ ಹಿನ್ನೆಲೆಯಲ್ಲಿ ನಗರದ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಸೇನೆ ಭರ್ತಿಯಲ್ಲಿ ಗುತ್ತಿಗೆ ಪದ್ಧತಿ ಮತ್ತು ವಯಸ್ಸಿನ ನಿರ್ಬಂಧವನ್ನು 23ಕ್ಕೆ ಏರಿಕೆ ಮಾಡಿರುವ ಕ್ರಮವನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ರೈಲು ನಿಲ್ದಾಣಕ್ಕೆ ಭದ್ರತೆ ಒದಗಿಸಲಾಗಿದೆ.
ವಿವಿಧ ರಾಜ್ಯಗಳಲ್ಲಿ ರೈಲುಗಳಿಗೆ ಬೆಂಕಿ ಹಚ್ಚಿ ಭಸ್ಮ ಮಾಡಲಾಗಿದೆ. ಬಹುತೇಕ ಕಡೆ ಅನೇಕ ರೈಲುಗಳನ್ನು ರದ್ದು ಪಡಿಸಲಾಗಿದೆ. ಕಲಬುರಗಿಯಿಂದ ಹೊರಡುವ ರೈಲುಗಳು ರದ್ದಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಚನೆ ಮೇರೆಗೆ ರೈಲ್ವೆ ಸ್ಟೇಷನ್‌ಗಳಿಗೆ ಭಾರೀ ಭದ್ರತೆ ಒದಗಿಸುವ ಹಿನ್ನೆಲೆಯಲ್ಲಿ ಕಲಬುರಗಿ ರೈಲ್ವೆ ನಿಲ್ದಾಣಕ್ಕೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ನಗರದ ರೈಲ್ವೆ ನಿಲ್ದಾಣದ ಪ್ರವೇಶದ ದ್ವಾರದಲ್ಲಿ ಪೊಲೀಸರ ಸರ್ಪಗಾವಲು ತೀವ್ರವಾಗಿದೆ. ಪ್ರಯಾಣಿಕರು ಸೇರಿದಂತೆ ಎಲ್ಲರ ಮೇಲೆ ನಿಗಾವಹಿಸಲಾಗುತ್ತಿದೆ. ಯುವಕರ ಓಡಾಟದ ಮೇಲೆ ಗಮನ ತೀವ್ರಗೊಳಿಸಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ಯಾವುದೇ ಅವಘಡ ನಡೆಯದಂತೆ ಕಟ್ಟುನಿಟ್ಟಿನ ಎಚ್ಚರ ವಹಿಸಲಾಗಿದೆ.
ಸಧ್ಯಕ್ಕೆ ಕಲಬುರಗಿ ರೈಲು ನಿಲ್ದಾಣ ಸೇಫಾಗಿದೆ. ನಮ್ಮ ಆರ್‌ಪಿಎಫ್ ಮತ್ತು ಜಿಆರ್‌ಪಿ ಪೊಲೀಸ್ ಬಲವನ್ನು ಬಳಕೆ ಮಾಡಿಕೊಂಡು ಭದ್ರತೆ ಕೈಗೊಂಡಿದ್ದೇವೆ. ಯಾವುದೇ ಪ್ರತಿಭಟನೆ ನಡೆದಿಲ್ಲ. ನಿಲ್ದಾಣ ಮತ್ತು ರೈಲ್ವೆಗೆ ಸಂಬಂಧಿಸಿದ ಎಲ್ಲ ಆಸ್ತಿ ಪಾಸ್ತಿ ಸೇಫಾಗಿದ್ದು, ಯಾವುದೇ ಗಲಾಟೆ ಇಲ್ಲ. ಮುಂಜಾಗ್ರತಾ ಕ್ರಮವಾಗಿ ನಮ್ಮ ಭದ್ರತಾ ಬಲದೊಂದಿಗೆ ಇನ್ನಷ್ಟು ಹೆಚ್ಚುವರಿ ಪೊಲೀಸ್ ಬಲವನ್ನು ಪಡೆಯಲಾಗಿದೆ.
–ಮೋನಿ ರಾಮಚಂದ್ರ ಸ್ಟೇಷನ್ ಮಾಸ್ಟರ್ ಕಲಬುರಗಿ