Advertisement

ಆಯಕಟ್ಟಿನ ಜಾಗದಲ್ಲಿ ಪೊಲೀಸ್‌ ಭದ್ರತೆ: ಎಸ್ಪಿ

02:35 PM Sep 05, 2017 | |

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆ ಸೆ.5 ರಂದು ನಡೆಯಲಿರುವ ಹಿನ್ನಲೆಯಲ್ಲಿ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಅಗತ್ಯ ಹಾಗೂ ಆಯಾಕಟ್ಟಿನ ಜಾಗದಲ್ಲಿ ಪೊಲೀಸ್‌ ಸಿಬ್ಬಂದಿಗಳನ್ನು ಭದ್ರತೆಗೆ ನಿಯುಕ್ತಿಗೊಳಿಸಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ ತಿಳಿಸಿದರು.

Advertisement

ಪ್ರಸ್‌ಟ್ರಸ್ಟ್‌ ಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋಪಾಳದ ಶ್ರೀರಾಮ ನಗರ ಹಾಗೂ ಸೀಗೆಹಟ್ಟಿ ಬಡಾವಣೆಯಲ್ಲಿ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಸಂದರ್ಭದಲ್ಲಿ ಸಣ್ಣ ಅಹಿತಕರ ಘಟನೆ ನಡೆದಿತ್ತು. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆ ನಡೆದ 12 ಗಂಟೆಯೊಳಗೆ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ನಿರ್ದಾಕ್ಷಿಣ್ಯ ಕ್ರಮ: ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರು ಇಲ್ಲಸಲ್ಲದ ಗಾಳಿ ಸುದ್ದಿ ಹರಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು. ಗಾಳಿ ಸುದ್ದಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದು. ಇಲ್ಲಸಲ್ಲದ ಸುದ್ದಿ ಹಬ್ಬಿಸಿದರೆ ಅಂತಹವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಮೂರು ತಿಂಗಳ ಹಿಂದಿನಿಂದಲೇ ಬಂದೋಬಸ್ತ್ ಕುರಿತು ಸಿದ್ಧತೆ ಕೈಗೊಂಡಿದೆ. ಶಾಂತಿ ಸುವ್ಯವಸ್ಥೆಗೆ ಒತ್ತು ನೀಡಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್‌
ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಬಂದೋಬಸ್ತ್ಗೆ ಈಗಾಗಲೇ ನಿಯೋಜನೆ ಮಾಡಲಾಗಿದೆ. ಸೂಕ್ಷ ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.

ಎಂತಹುದೇ ಸನ್ನಿವೇಶ ಎದುರಾದರೂ ಅದನ್ನು ಹತೋಟಿಗೆ ತರುವಲ್ಲಿ ಪೊಲೀಸ್‌ ಇಲಾಖೆ ಸಿದ್ದವಾಗಿದೆ. ಶಾಂತಿಯುತವಾಗಿ ಗಣಪತಿ ವಿಸರ್ಜನೆ ನಡೆಯಬೇಕು. ಸಮಾಜದಲ್ಲಿ ಅಹಿತಕರ ವಾತಾವರಣ ಹುಟ್ಟುಹಾಕಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಬಂದೋಬಸ್ತ್: ಬಂದೋಬಸ್ತ್ಗಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್‌ ಅಧೀಕ್ಷಕರೂ ಆಗಮಿಸುವರು. ಜೊತೆಗೆ ಇಬ್ಬರು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, 12 ಡಿವೈಎಸ್ಪಿ, 23 ಪೊಲೀಸ್‌ ಇನ್ಸ್‌ಪೆಕ್ಟರ್‌, 55 ಸಬ್‌ಇನ್ಸ್‌ಪೆಕ್ಟರ್‌, 160 ಎಎಸ್‌ಐ, 1500 ಪೊಲೀಸ್‌ ಪೇದೆಗಳು, 570 ಹೋಂ  ಗಾರ್ಡ್‌, 2 ಎಎನ್‌ಎಸ್‌ ತುಕಡಿ, 2 ಕ್ಯೂಆರ್‌ಟಿ ತುಕಡಿ, 23 ಡಿಎಆರ್‌ ತುಕಡಿ, ಕೆಎಸ್‌ಆರ್‌ ಪಿ 12 ತುಕಡಿ, ಜೊತೆಗೆ 600ಕ್ಕೂ ಸ್ವಯಂ ಸೇವಕರು ಹಾಗೂ ನಿವೃತ್ತಿ ಹೊಂದಿರುವ ಪೊಲೀಸ್‌ ಅಧಿಕಾರಿಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗುವುದು. ಬಂದೋಬಸ್ತ್ಗೆ ಹೆಚ್ಚುವರಿಯಾಗಿ 5 ಕೆಎಸ್‌ಆರ್‌ಪಿ ತುಕಡಿ ಮಂಜೂರು ಮಾಡುವಂತೆ ಕೋರಿಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. 

Advertisement

ವೀಡಿಯೋ ಚಿತ್ರೀಕರಣ: ಜೊತೆಗೆ ಸೂಕ್ಷ ಸ್ಥಳಗಳಲ್ಲಿ, ಪ್ರಮುಖ ವೃತ್ತಗಳಲ್ಲಿ, ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿ ಕ್ಯಾಮೆರಾ, ವೀಡಿಯೋ ಚಿತ್ರೀಕರಣ ನಡೆಸಲಾಗುವುದು. ಇದಕ್ಕಾಗಿ 53 ವೀಡಿಯೋ ಹಾಗೂ 223 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ 5 ಜನ ಗೂಂಡಾಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಡಳಿತ ಆದೇಶ ನೀಡಿದೆ. ಗೂಂಡಾ ಪಟ್ಟಿಯಲ್ಲಿರುವವರು ನಗರದಲ್ಲಿ ಕಂಡು ಬಂದರೆ ಬಂಧಿಸಲಾಗುವುದು. ಪರ ಊರುಗಳಿಂದ ಬರುವವರು ಮೆರವಣಿಗೆಯಲ್ಲಿ ಶಾಂತಿಯುತವಾಗಿ ಪಾಲ್ಗೊಳ್ಳಬೇಕು. ಈಗಾಗಲೇ ಪೊಲೀಸ್‌ ಇಲಾಖೆ ಸಿಬ್ಬಂದಿಗಳು ನಗರದ ವಸತಿಗೃಹಗಳಿಗೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುತ್ತಮುತ್ತಲಿನ ಜಿಲ್ಲೆಗಳ ಪೊಲೀಸ್‌ ಅಧೀಕ್ಷಕರೊಂದಿಗೂ ಚರ್ಚೆ ನಡೆಸಿ, ಅಗತ್ಯ ಮಾಹಿತಿ ಪಡೆಯಲಾಗುತ್ತಿದೆ ಎಂದರು. ಪಾಲಿಕೆ ಆಯುಕ್ತ ಮುಲೈ ಮೊಹಿಲನ್‌ ಮಾತನಾಡಿ, ಎಚ್‌ಎಂಎಸ್‌ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಗೆ ಪಾಲಿಕೆಯಿಂದ ಎಲ್ಲ ವ್ಯವಸ್ಥೆ  ಮಾಡಲಾಗಿದೆ. ಪೊಲೀಸ್‌ ಇಲಾಖೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು
ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌. ಮಂಜುನಾಥ್‌, ಕಾರ್ಯದರ್ಶಿ ಶಿ.ವಿ. ಸಿದ್ದಪ್ಪ ಇದ್ದರು.

ನಗರದ ಆಯಕಟ್ಟಿನ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. 222 ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ಭದ್ರತೆ ಕಲ್ಪಿಸಲಾಗಿದೆ. 50ಕ್ಕೂ ಹೆಚ್ಚು ಪೊಲೀಸ್‌ ವಾಹನಗಳು ಬಂದೋಬಸ್ತ್ಗೆ ನಿಯೋಜನೆಗೊಂಡಿವೆ. ಇವುಗಳು ನಗರಾದ್ಯಂತ ಹಗಲು ರಾತ್ರಿ ಸಂಚರಿಸಲಿವೆ. 22
ಚೀತಾ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. 2 ಡ್ರೋಣ್‌ ಕ್ಯಾಮೆರಾ ಮೂಲಕ ಚಿತ್ರೀಕರಣ ನಡೆಸಲಾಗುವುದು.  

ಅಭಿನವ ಖರೆ, ಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next