Advertisement

‘ಪೊಲೀಸರಿಗೆ ಬಹುಮಾನ’ದ ಪತ್ರ ವೈರಲ್‌

12:40 AM Dec 27, 2019 | mahesh |

ಮಂಗಳೂರು: ಗಲಭೆ ಸಂದರ್ಭ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬಂದಿಗೆ ನಗದು ಬಹುಮಾನ ಘೋಷಿಸುವ ಪತ್ರವೊಂದು ಬಹಿರಂಗಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ ಈ ವಿಚಾರ ವನ್ನು ಅಲ್ಲಗಳೆದಿರುವ ನಗರ ಪೊಲೀಸ್‌ ಆಯುಕ್ತ ಡಾ| ಹರ್ಷ ಅವರು “ಇದೊಂದು ನಕಲಿ ಪತ್ರ’ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಮಂಗಳೂರು ಪೊಲೀಸ್‌ ಆಯುಕ್ತರ ಹೆಸರಿನಲ್ಲಿ, ಪೊಲೀಸರಿಗೆ ಬಹುಮಾನ ನೀಡಿರುವ ಬಗ್ಗೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಮತ್ತು ಪೊಲೀಸ್‌ ಮಹಾನಿರೀಕ್ಷಕರ ಅವಗಾಹನೆಗೆ ತರುವಂತೆ ಸೃಷ್ಟಿಸಿ ರುವ ಪತ್ರ ಇದಾಗಿದೆ. ಪೊಲೀಸ್‌ ಆಯಕ್ತರ ಕಚೇರಿಯ ಲೆಟರ್‌ಹೆಡ್‌ ಮಾದರಿಯಲ್ಲಿ ಇದೆ. ಆದರೆ ಆಯುಕ್ತರ ಸಹಿ ಅಥವಾ ರೆಫರೆನ್ಸ್‌ ಸಂಖ್ಯೆ ಇಲ್ಲ.

ಪತ್ರ ವೈರಲ್‌ ಆಗುತ್ತಿದ್ದಂತೆ ಪೊಲೀಸ್‌ ವಾಟ್ಸ್‌ಆ್ಯಪ್‌ ಗ್ರೂಪ್‌ ಮತ್ತು ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿರುವ ಪೊಲೀಸ್‌ ಆಯುಕ್ತ ಡಾ| ಹರ್ಷ, ಪತ್ರ ನಕಲಿ. ಇದರಲ್ಲಿ ಆಯುಕ್ತರ ಸಹಿ ಇಲ್ಲ. ರೆಫರೆನ್ಸ್‌ ಸಂಖ್ಯೆಯೂ ಇಲ್ಲ. ಈ ರೀತಿಯಾಗಿ ಪೊಲೀಸ್‌ ಅಧಿಕಾರಿಗಳಿಗೆ ಯಾವುದೇ ಬಹುಮಾನ ನೀಡಿಲ್ಲ ಮತ್ತು ಪೊಲೀಸ್‌ ಮಹಾನಿರ್ದೇಶಕರು, ಮಹಾನಿರೀಕ್ಷಕರಿಗೆ ಪತ್ರ ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪತ್ರದಲ್ಲೇನಿದೆ?
ಕಾರ್ಯಾಚರಣೆಯಲ್ಲಿ ಭಾಗಿ ಯಾಗಿದ್ದ ಅಧಿಕಾರಿಗಳು ಮತ್ತು ಸಿಬಂದಿ ಸೇರಿ ಒಟ್ಟು 148 ಮಂದಿಯ ಹೆಸರು ಉಲ್ಲೇಖೀಸಿ ಪತ್ರದಲ್ಲಿ ಪ್ರತ್ಯೇಕ ನಗದು ಬಹುಮಾನ ಪ್ರಸ್ತಾವಿಸಲಾಗಿದೆ.

ಆಯಕ್ತರ ನಿರಾಕರಣೆ
ಪೊಲೀಸ್‌ ಇಲಾಖೆಯ ಪತ್ರ ಎಂದು ಪ್ರತಿಬಿಂಬಿಸಲಾಗುತ್ತಿರುವ ಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಕಷ್ಟಕರ ಸನ್ನಿವೇಶದಲ್ಲಿ ಕರ್ತವ್ಯ ನಿರ್ವಹಿಸಿರುವ ಪೊಲೀಸ್‌ ಸಿಬಂದಿ ಮತ್ತು ಅಧಿಕಾರಿಗಳ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದೇನೆ. ಅವರಿಗೆ ನಗದು ಅಥವಾ ಇನ್ನಿತರ ಬಹುಮಾನ ನೀಡಿಲ್ಲ. ಪೊಲೀಸರ ಮನೋಬಲ ಮತ್ತು ಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಪೊಲೀಸ್‌ ಸಿಬಂದಿಯನ್ನು ಭೇಟಿಯಾಗಿ ಪ್ರಶಂಸೆ ವ್ಯಕ್ತಪಡಿಸಿದ್ದೇನೆ.
– ಡಾ| ಪಿ.ಎಸ್‌. ಹರ್ಷ, ನಗರ ಪೊಲೀಸ್‌ ಆಯುಕ್ತರು

Advertisement
Advertisement

Udayavani is now on Telegram. Click here to join our channel and stay updated with the latest news.

Next