ಕೋಟ: ಮಾಬುಕಳದಲ್ಲಿ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ನಿವೃತ್ತ ಎಂಜಿನಿಯರ್ ಓರ್ವರನ್ನು ಹೈವೇ ಪಟ್ರೋಲ್ ಸಿಬಂದಿ ಸ್ಥಳೀಯರ ನೆರವಿನಿಂದ ರಕ್ಷಿಸಿದ ಘಟನೆ ನ. 18ರಂದು ಮಾಬುಕಳದಲ್ಲಿ ನಡೆದಿದೆ.
ಮೂಲತಃ ಕುಂದಾಪುರ ವಡೇರಹೋಬಳಿ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ನಾಗರಾಜ್ ಆತ್ಮಹತ್ಯೆಗೆ ಯತ್ನಿಸಿದ ವರು. ಹೈವೇ ಪಟ್ರೋಲ್ ಸಿಬಂದಿ ಪ್ರಶಾಂತ್ ಪಡುಕರೆ ರಕ್ಷಿಸಿದವರು.
ಪ್ರಶಾಂತ ಹಾಗೂ ಎಎಸ್‌ಐ ಜಯಶೇಖರ್ ಕೋಟದಲ್ಲಿ ಕರ್ತವ್ಯ ಮುಗಿಸಿ ಹೈವೇ ಪಟ್ರೋಲ್ ವಾಹನದಲ್ಲಿ ಬ್ರಹ್ಮಾವರ ಕಡೆಗೆ ಪ್ರಯಾಣಿಸುತ್ತಿದ್ದಾಗ ನಾಗರಾಜ್ ಹೊಳೆಗೆ ಹಾರಲು ಯತ್ನಿಸುತ್ತಿರುವುದು ಕಾಣಿಸಿತು. ತತ್‌ಕ್ಷಣ ವಾಹನ ನಿಲ್ಲಿಸಿ ಧಾವಿಸಿದ ಪ್ರಶಾಂತ್ ಅವರು ನಾಗರಾಜ ಅವರನ್ನು ತಡೆದು ಸಮಾಧಾನ ಹೇಳಿ ತಮ್ಮ ವಾಹನದಲ್ಲಿ ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಪ್ರಾಥಮಿಕ ಚಿಕಿತ್ಸೆಯ ಬಳಿಕ ವಿಚಾರಿಸಿದಾಗ ಅನಾರೋಗ್ಯದ ಕಾರಣ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಅವರು ತಿಳಿಸಿದರು.
ಬೆಂಗಳೂರಿನಲ್ಲಿರುವ ಅವರ ಮಕ್ಕಳಿಗೆ ವಿಷಯ ತಿಳಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಯಿತು. ಪೊಲೀಸ್ ಸಿಬಂದಿಯ ಸಮಯಪ್ರಜ್ಞೆಗೆ ಸಾರ್ವ ಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.