ಸವಣೂರು: ಅರಿಯಡ್ಕ ಗ್ರಾಮದ ಬಳ್ಳಿಕಾನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಓರ್ವ ಲಾರಿ ಚಾಲಕ, ನಿರ್ವಾಹಕ ಹಾಗೂ ವೇಶ್ಯಾವಾಟಿಕೆ ನಡೆಸಲು ಮನೆಯಲ್ಲಿ ಅನುಮತಿ ನೀಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮಹಿಳೆಯನ್ನು ರಕ್ಷಿಸಲಾಗಿದೆ.
ಅರಿಯಡ್ಕ ಗ್ರಾಮದ ಬಳ್ಳಿಕಾನ ನಾರಾಯಣ ನಾಯ್ಕ ಎಂಬವರ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ಸೆ.11ರಂದು ಕಾರ್ಯಾಚರಣೆ ನಡೆಸಿ ಕೃತ್ಯದಲ್ಲಿ ತೊಡಗಿದ್ದ ಸುಳ್ಯ ಸಂಪಾಜೆಯ ಅರೆಕಳ ರೋಡ್ ಕೂಸಪ್ಪ ಗೌಡರ ಪುತ್ರ ಮಂಗಳೂರಿನಲ್ಲಿ ಲಾರಿ ಚಾಲಕನಾಗಿರುವ ಚರಣ್ (25ವ), ಪುತ್ತೂರು ಕೆಮ್ಮಿಂಜೆ ಗ್ರಾಮದ ಮೊಟ್ಟೆತಡ್ಕ ದಿ.ಬಾಬು ಪೂಜಾರಿ ಅವರ ಪುತ್ರ ಲಾರಿಯ ನಿರ್ವಾಹಕ ಅರುಣ್ ಕುಮಾರ್ (38ವ) ಹಾಗೂ ವೇಶ್ಯಾವಾಟಿಕೆಗೆ ಮನೆಯಲ್ಲಿ ಅನುಮತಿ ನೀಡಿದ ಬಳ್ಳಿಕಾನ ನಿವಾಸಿ ನಾರಾಯಣ ನಾಯ್ಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯನ್ನು ರಕ್ಷಿಸಲಾಗಿದೆ. ತಾನು ಹೋಮ್ ಪ್ರೋಡಕ್ಟ್ ಸಾಮಾಗ್ರಿಗಳ ಲೈನ್ ಸೇಲ್ ಮಾಡುತ್ತಿದ್ದು ತನ್ನನ್ನು ಚರಣ್ ಮತ್ತು ಅರುಣ್ ಕುಮಾರ್ ಪುಸಲಾಯಿಸಿ ಕರೆದಿರುವುದಾಗಿ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ಮತ್ತು ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮಹಿಳೆಗೆ ಮಂಗಳೂರು ಪ್ರಜ್ಞಾ ಮಹಿಳಾ ಘಟಕಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.