Advertisement

ಕಡಬಗೆರೆ ಕೊಲೆ ಯತ್ನ: ಅಗ್ನಿ ಶ್ರೀಧರ್‌ ಮನೆಗೆ ಪೊಲೀಸ್‌ ದಾಳಿ 

02:39 PM Feb 07, 2017 | |

ಬೆಂಗಳೂರು : ಯಲಹಂಕದಲ್ಲಿ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್‌ ಮೇಲೆ ಗುಂಡಿನ ದಾಳಿ  ನಡೆಸಿ  ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಲೇಖಕ ಅಗ್ನಿ ಶ್ರೀಧರ್‌ ನಿವಾಸದ ಮೇಲೆ ಮಂಗಳವಾರ ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

Advertisement

ಕಡಬಗೆರೆ ಶ್ರೀನಿವಾಸ್‌ ಕೊಲೆ ಸಂಚು ರೂಪಿಸಿದ್ದ ಎನ್ನಲಾದ ರೌಡಿ ಶೀಟರ್‌ ರೋಹಿತ್‌ ಅಲಿಯಾಸ್‌ ಒಂಟೆಗೆ ಆಶ್ರಯ ನೀಡಿದ್ದಾರೆ ಎನ್ನುವ ಶಂಕೆಯಲ್ಲಿ ಕೋರ್ಟ್‌ ವಾರೆಂಟ್‌ ಪಡೆದು ಪೊಲೀಸರು  ಕುಮಾರ ಸ್ವಾಮಿ ಲೇಔಟ್‌ನಲ್ಲಿರುವ ಶ್ರೀಧರ್‌ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. 

ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿ ಹರ್ಷ, ನಾರಾಯಣ್, ಶರಣಪ್ಪ ಮತ್ತು ಅನುಚೇತ್ ನೇತೃತ್ವದಲ್ಲಿ ಪೊಲೀಸರ ತಂಡ ದಾಳಿ ನಡೆಸಿದೆ. 

ಪೊಲೀಸ್‌ ದಾಳಿಯ ವೇಳೆ ಪರವಾನಿಗೆ ಇಲ್ಲದ ಪಿಸ್ತೂಲು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. 

ಅಗ್ನಿ ಶ್ರೀಧರ್‌, ಅವರ ಪತ್ನಿ, ಗನ್‌ ಮ್ಯಾನ್‌ಗಳನ್ನು ತೀವ್ರವಾಗಿ ವಿಚಾರಣೆಗೊಳಪಡಿಸಲಾಗಿದೆ. 3 ಲಕ್ಷ ರೂಪಾಯಿ ಹಣ, ದುಬಾರಿ ಮದ್ಯವನ್ನು ಜಪ್ತಿ ಮಾಡಲಾಗಿರುವ ಬಗ್ಗೆ ಪೊಲೀಸ್‌ ಮೂಲಗಳು ತಿಳಿಸಿವೆ. 

Advertisement

ದಾಳಿ ನಡೆಯುವ ಮುನ್ನವೇ ರೋಹಿತ್‌ ಅಗ್ನಿ ಶ್ರೀಧರ್‌ ಮನೆಯಿಂದ ಪರಾರಿಯಾಗಿರುವುದಾಗಿ ಹೇಳಲಾಗಿದೆ. 

ವಾರದ ಹಿಂದೆ ಕಡಬಗೆರೆ ಶ್ರೀನಿವಾಸ್‌ ಬೆಂಬಲಿಗನಿಗೆ ಅಗ್ನಿ ಶ್ರೀಧರ್‌ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ. 

ಬಚ್ಚನ್‌ ಮನೆಯ ಮೇಲೂ ದಾಳಿ 

ಪೊಲೀಸರು  ಅಗ್ನಿ ಶ್ರೀಧರ್‌ ಆಪ್ತ , ರೌಡಿ ಶೀಟರ್‌ ಬಚ್ಚನ್‌ ಎಂಬಾತನ ನಿವಾಸದ ಮೇಲೂ  ದಾಳಿ ಮಾಡಿದ್ದು, ಮಾರಕಾಸ್ತ್ರಗಳು ಸೇರಸಿದಂತೆ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. ಇದೇ ವೇಳೆ ಕಾನೂನು ಮೀರಿ ನೇಮಿಸಿಕೊಂಡಿರುವ 6 ಮಂದಿ ಬಾಡಿಗಾರ್ಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. 

ಕಡಬಗೆರೆ ಕೊಲೆಗೆ 3 ಕೋಟಿ ರೂ. ಸುಪಾರಿ?

ಕಡಬಗೆರೆ ಶ್ರೀನಿವಾಸ್‌ ಕೊಲೆಗೆ ರೋಹಿತ್‌ ಅಲಿಯಾಸ್‌ ಒಂಟೆಗೆ 3 ಕೋಟಿ ರೂಪಾಯಿ ಸುಫಾರಿ ನೀಡಲಾಗಿತ್ತು ಎನ್ನುವ ಬೆಚ್ಚಿ ಬೀಳುವ ಸಂಗತಿ ಬೆಳಕಿಗೆ ಬಂದಿದೆ. ಸೈಲೆಂಟ್‌ ಸುನಿಲ್‌ ನೊಂದಿಗೆ ಸೇರಿ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ.

ರೋಹಿತ್‌ ಮತ್ತು ಸುನಿಲ್‌ ಇಬ್ಬರೂ ಅಗ್ನಿ ಶ್ರೀಧರ್‌ ಸಂಸ್ಥಾಪಿಸಿರುವ ಕರುನಾಡ ಸೇನೆ ಯಲ್ಲಿ ತೊಡಗಿಸಿಕೊಂಡಿರುವ ರೌಡಿ ಶೀಟರ್‌ಗಳಾಗಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next