ಬೆಳಗಾವಿ: ಜಿಲ್ಲೆಯಾದ್ಯಂತ ಡ್ರಗ್ಸ್ ದಂಧೆಯ ಕರಾಳ ಮುಖಗಳು ಹೊರ ಬರುತ್ತಿರುವ ಬೆನ್ನಲ್ಲೇ ಈಗ ಮಟ್ಕಾ ದಂಧೆಯ ಬಣ್ಣ ಬಯಲಾಗುತ್ತಿದ್ದು, ನಗರ ಸೇರಿದಂತೆ ಜಿಲ್ಲೆಯ ಗಲ್ಲಿ ಗಲ್ಲಿಯಲ್ಲಿಯೂ ಮಟ್ಕಾ ಬುಕ್ಕಿಗಳು ವ್ಯಾಪಿಸಿಕೊಂಡಿದ್ದಾರೆ.ಇಂಥವರನ್ನು ಮಟ್ಟ ಹಾಕಲು ಖಾಕಿ ಪಡೆ ಎಚ್ಚೆತ್ತುಕೊಳ್ಳಬೇಕಾಗಿದೆ.
ಅಲ್ಲಲ್ಲಿ ಮಿಂಚಿನ ದಾಳಿ: ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿರುವ ಡಾ. ವಿಕ್ರಮ ಅಮಟೆ ನಗರದ ಅಕ್ರಮ ದಂಧೆಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಐದಾರು ದಾಳಿ ನಡೆಸಿ ಮಟ್ಕಾ ದಂಧೆಗೆ ಲಗಾಮು ಹಾಕುತ್ತಿದ್ದಾರೆ. ಮಟ್ಕಾ ದಂಧೆಯ ಕಿಂಗ್‌ಪಿನ್, ಬುಕ್ಕಿ ಮಹ್ಮದಶಫಿ ತಹಶೀಲ್ದಾರ ಸೇರಿ 22 ಜನರನ್ನು ಬಂಧಿಸುವ ಮೂಲಕ ಮಟ್ಕಾ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.
ಇನ್ನೂ ಇದ್ದಾರೆ ಬುಕ್ಕಿಗಳು: ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಮಟ್ಕಾ ದಂಧೆ ಇರುವುದು ಕಂಡು ಬರುತ್ತಿದೆ. ಹಳ್ಳಿ ಹಳ್ಳಿಗಳ್ಳಲ್ಲಿಯೂ ಮಟ್ಕಾ ಬುಕ್ಕಿಗಳು ವ್ಯಾಪಿಸಿಕೊಂಡಿದ್ದಾರೆ. ಒಂದೊಂದು ಹಳ್ಳಿಗಳಲ್ಲಿ ಇಬ್ಬರು-ಮೂವರು ಬುಕ್ಕಿಗಳು ಇದ್ದಾರೆ. ಇವರೆಲ್ಲರೂ ಸೇರಿ ಬೆಳಗಾವಿಯಲ್ಲಿ ತಮಗೆ ಬೇಕಾದ ಮತ್ತೂಬ್ಬ ಬುಕ್ಕಿಗೆ ಮಟ್ಕಾ ಚೀಟಿಗಳನ್ನು ಕಳುಹಿಸಿಕೊಡುತ್ತಾರೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಆ “ಹಣವಂತ’ ಬುಕ್ಕಿ ಮಟ್ಕಾ ಚೀಟಿಗಳನ್ನು ಪಡೆದು ದಂಧೆ ನಡೆಸುತ್ತಾನೆ.
ದಂಧೆಗೆ ಲಗಾಮು ಹಾಕಿ: ಸದ್ಯ ಬೆಳಗಾವಿ ನಗರದಲ್ಲಿ ಮಹ್ಮದಶಫಿ ಎಂಬ ಮಟ್ಕಾ ಬುಕ್ಕಿ ಹಲವಾರು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿಕೊಂಡಿದ್ದಾನೆ. ಶಫಿಯಂತೆ ಇನ್ನೂ ಅನೇಕರು ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಇದ್ದಾರೆ. ಇಂಥವರನ್ನೂ ಮಟ್ಟ ಹಾಕಬೇಕಾದ ಅಗತ್ಯವಿದೆ. ಮಟ್ಕಾ ದಂಧೆಯಲ್ಲಿ ಬಡ ಕಾರ್ಮಿಕನಿಂದ ಹಿಡಿದು ಸಿರಿವಂತರವರೆಗೂ ತೊಡಗಿಕೊಂಡಿದ್ದು, ಇದರಿಂದ ಅನೇಕ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಎಚ್ಚರ ವಹಿಸಬೇಕಾದ ಅಗತ್ಯವಿದೆ.
ಬುಕ್ಕಿ ಸೇರಿ 23 ಮಂದಿಯ ಬಂಧನ: 2.11 ಲಕ್ಷರೂ. ವಶಕ್ಕೆ
ಹಲವಾರು ವರ್ಷಗಳಿಂದ ಮಟ್ಕಾ ದಂಧೆ ನಡೆಸುತ್ತಿದ್ದ ಖಂಜರ ಗಲ್ಲಿಯಲ್ಲಿರುವ ಬುಕ್ಕಿ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಮಟ್ಕಾ ಬುಕ್ಕಿ ಸೇರಿ 23 ಜನರನ್ನು ಬಂಧಿಸಿ 2.11 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ಮಾರ್ಕೆಟ್ ಠಾಣಾ ವ್ಯಾಪ್ತಿಯ ಖಂಜರ ಗಲ್ಲಿಯ ಮಹಮ್ಮದಶಫಿ ತಹಶೀಲ್ದಾರ ಎಂಬಾತನನ್ನು ಬಂಧಿ ಸಲಾಗಿದೆ. ಕಲ್ಯಾಣ ಮಟಕಾ ಎಂಬ ಓಸಿ ಅಂಕಿ ಸಂಖ್ಯೆಗಳ ಮೇಲೆ ಹಣ ಹಚ್ಚಿ ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ನಡೆಸಿ ಒಟ್ಟು 23 ಜನರನ್ನು ಬಂಧಿ ಸಿದ್ದಾರೆ. ನಗದು ಹಣ ಹಾಗೂ 15 ಮೊಬೆ„ಲ್, ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಸಿಪಿ ಡಾ| ವಿಕ್ರಮ ಅಮಟೆ ನೇತೃತ್ವದಲ್ಲಿ ಮಾರ್ಕೆಟ್ ಇನ್ಸಪೆಕ್ಟರ್ ಸಂಗಮೇಶ ಶಿವಯೋಗಿ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ. ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.