ತೆಕ್ಕಟ್ಟೆ: ತಪಾಸಣೆಗೆಂದು ಬೈಕ್ ನಿಲ್ಲಿಸಲು ಸೂಚಿಸಿದಾಗ ಬೈಕ್ ನಿಲ್ಲಿಸದೇ ಹೋಗಿದ್ದಕ್ಕೆ ಪೊಲೀಸ್ ಸಿಬ್ಬಂದಿ ಬೈಕ್ ಹ್ಯಾಂಡಲ್ ಹಿಡಿದೆಳೆದ ಕಾರಣ ಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ರಾಘವೇಂದ್ರ ಮಠದ ಮುಂಭಾಗದಿಂದ ವರದಿಯಾಗಿದೆ.
ಕೊರವಡಿ ನಿವಾಸಿ ಉಲ್ಲಾಸ್ (27) ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ. ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು,ಇವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊರವಡಿ ನಿವಾಸಿ ಉಲ್ಲಾಸ್, ತೆಕ್ಕಟ್ಟೆಯಿಂದ ಕೊರವಡಿಗೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ತೆಕ್ಕಟ್ಟೆ ರಾಘವೇಂದ್ರ ಮಠದ ಹತ್ತಿರ ಹೈವೇ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದು, ಉಲ್ಲಾಸ್ ಅವರಿಗೂ ನಿಲ್ಲಿಸುವಂತೆ ಸೂಚಿಸಲಾಗಿದೆ. ಆದರೆ ಉಲ್ಲಾಸ್ ನಿಲ್ಲಿಸದೇ ಇದ್ದ ಕಾರಣ ಪೊಲೀಸ್ ಸಿಬ್ಬಂದಿ ಬೈಕ್ ನ ಹ್ಯಾಂಡಲ್ ಅನ್ನು ಎಳೆದಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಆಯತಪ್ಪಿದ ಉಲ್ಲಾಸ್ ನೆಲಕ್ಕೆ ಬಿದ್ದಿದ್ದು, ತಲೆಗೆ ಗಂಭಿರವಾಗಿ ಗಾಯವಾಗಿದೆ.
ಬೈಕ್ ಹ್ಯಾಂಡಲ್ ಎಳೆವಾಗ ಪೊಲೀಸ್ ಸಿಬ್ಬಂದಿಯ ಕಾಲಿನ ಮೇಲೆ ಬೈಕ್ ಬಿದ್ದು ಅವರಿಗೂ ಗಾಯವಾಗಿದೆ. ಅವರನ್ನೂ ಆಸ್ಪತ್ರಗೆ ದಾಖಲಿಸಲಾಗಿದೆ.
ಪೊಲೀಸರ ಈ ಅಜಾಗರೂಕತೆಯ ವರ್ತನೆಯನ್ನು ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಡಿವೈಎಸ್ ಪಿ ಬರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಕೋಟ ಪೊಲೀಸ್ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.