Advertisement

ಆಸ್ಪತ್ರೆ ಆವರಣದಲ್ಲಿ ಪೊಲೀಸ್‌ ಔಟ್‌ಪೋಸ್ಟ್‌

01:16 AM Jun 27, 2019 | Lakshmi GovindaRaj |

ಬೆಂಗಳೂರು: ದಿನದಿಂದ ದಿನಕ್ಕೆ ಜನದಟ್ಟಣೆ ಹೆಚ್ಚುತ್ತಿರುವ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ ಹಾಗೂ ನಿಮ್ಹಾನ್ಸ್‌ನಲ್ಲಿ ಭದ್ರತಾ ದೃಷ್ಟಿಯಿಂದ ಹೊರ ಪೊಲೀಸ್‌ ಠಾಣೆ (ಪೊಲೀಸ್‌ ಔಟ್‌ಪೋಸ್ಟ್‌) ನಿರ್ಮಿಸಲಾಗುತ್ತಿದೆ.

Advertisement

ಆಸ್ಪತ್ರೆಗಳ ಆಡಳಿತ ಮಂಡಳಿಯಿಂದಲೇ ಆಸ್ಪತ್ರೆ ಆವರಣದಲ್ಲಿ ಪೊಲೀಸ್‌ ಠಾಣೆ ನಿರ್ಮಿಸುವ ಮನವಿ ಬಂದ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯು ಈ ಕ್ರಮಕ್ಕೆ ಮುಂದಾಗಿದೆ. ಇದಕ್ಕಾಗಿ ಆಸ್ಪತ್ರೆ ವತಿಯಿಂದಲೇ ಕಟ್ಟಡ ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸುವ ಕಾರ್ಯಗಳಾಗುತ್ತಿದ್ದು, ಜುಲೈ ತಿಂಗಳಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಹಾಗೂ ನಿಮ್ಹಾನ್ಸ್‌ನಲ್ಲಿ ಹೊರ ಪೊಲೀಸ್‌ ಠಾಣೆಗಳು ಆರಂಭವಾಗಲಿವೆ. ಈ ಮೂಲಕ ಆಸ್ಪತ್ರೆಗಳಿಗೆ ಇನ್ನಷ್ಟು ಭದ್ರತೆ ಹೆಚ್ಚಾಗಲಿದೆ.

ಹೊಸೂರು ರಸ್ತೆಯಲ್ಲಿ ಅಕ್ಕಪಕ್ಕದಲ್ಲೇ ಇರುವ ನಿಮ್ಹಾನ್ಸ್‌ ಹಾಗೂ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗಳ ಹೊರ ರೋಗಿಗಳ ಘಟಕಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಇನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಅಲ್ಲಿಯೇ ಎರಡರಿಂದ ಮೂರು ಸಾವಿರ ರೋಗಿಗಳು ದಾಖಲಾಗಿದ್ದಾರೆ. ರೋಗಿಗಳ ಜತೆಗೆ ಬರುವ ಅವರ ಸಂಬಂಧಿಕರು ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡಿರುತ್ತಾರೆ.

ಹೀಗಾಗಿ ನಿತ್ಯ ರೋಗಿಗಳು, ಅವರ ಸಂಬಂಧಿಕರ ಗಲಾಟೆಗೆ ಸಂಬಂಧಿಸಿದ ದೂರು, ಆಸ್ಪತ್ರೆಗೆ ಬರುವಾಗ ರೋಗಿ ಸಾವಿಗೀಡಾಗಿದ್ದರೆ, ಅವಘಾತ ಸಂಬಂಧಿಸಿದ ಪ್ರಕರಣಗಳು, ವೈದ್ಯಕೀಯ ಸಂಬಂಧಿತ ಪ್ರಕರಣಗಳಿರುತ್ತವೆ. ಈ ಎಲ್ಲದಕ್ಕೂ ಹತ್ತಿರದ ಸಿದ್ದಾಪುರ ಪೊಲೀಸ್‌ ಠಾಣೆಗೆ ತೆರಳಬೇಕಿತ್ತು.

“ಕಿದ್ವಾಯಿ ರಾಜ್ಯದ ಏಕೈಕ ಸುಸಜ್ಜಿತ ಸರ್ಕಾರಿ ಕ್ಯಾನ್ಸರ್‌ ಆಸ್ಪತ್ರೆಯಾಗಿರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳ ಸಾಕಷ್ಟು ರೋಗಿಗಳು ಇಲ್ಲಿಗೆ ಬರುತ್ತಾರೆ. ನಿತ್ಯ ಹೊರರೋಗಿಗಳ ಘಟಕದಲ್ಲಿ 1200ರಿಂದ 1400 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಸಾವಿರಕ್ಕೂ ಹೆಚ್ಚು ರೋಗಿಗಳು ದಾಖಲಾತಿ ಪಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ನಿತ್ಯ ಆಸ್ಪತ್ರೆ ಆವರಣದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಇರುತ್ತಾರೆ. ಅಲ್ಲದೇ ರೋಗಿಗಳ ಸಂಬಂಧಿಕರಿಗಾಗಿ ಆಸ್ಪತ್ರೆ ಹಿಂದೆಯೇ ಧರ್ಮ ಛತ್ರಗಳಿವೆ ಅಲ್ಲಿಯೂ ಸಾಕಷ್ಟು ಮಂದಿ ತಂಗಿರುತ್ತಾರೆ. ಇಷ್ಟು ಜನರ ನಿಯಂತ್ರಣಕ್ಕೆ ಆಸ್ಪತ್ರೆ ಭದ್ರತಾ ಸಿಬ್ಬಂದಿ ಜತೆ ಪೊಲೀಸರ ಅವಶಕ್ಯಕತೆ ಇದೆ.

ಗಲಾಟೆ, ಆ್ಯಂಬುಲೆನ್ಸ್‌ ಸೇರಿದಂತೆ ಇನ್ನಿತರ ಸೌಲಭ್ಯಗಳಿಗೆ ಜಗಳಗಳಾಗುತ್ತವೆ. ಧರ್ಮ ಛತ್ರ, ವಾರ್ಡ್‌ಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗುತ್ತಿವೆ. ಜತೆಗೆ ಆಸ್ಪತ್ರೆ ಭದ್ರತೆ ದೃಷ್ಟಿಯಿಂದ ಪೊಲೀಸ್‌ ಹೊರಠಾಣೆ ಅಗತ್ಯವಿದ್ದು, ಕಳೆದ ವರ್ಷ ಪೊಲೀಸ್‌ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು’ ಎಂದು ಕಿದ್ವಾಯಿ ಗಂಥಿ ಸಂಸ್ಥೆ ನಿರ್ದೇಶಕ ಸಿ.ರಾಮಚಂದ್ರ ತಿಳಿಸಿದರು.

ಇದೇ ಪರಿಸ್ಥಿತಿ ನಿಮ್ಹಾನ್ಸ್‌ನಲ್ಲಿದ್ದು, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಹೆಚ್ಚುವರಿ ಚಿಕಿತ್ಸೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ರೋಗಿಗಳು ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಎರಡೂ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚಳವಾಗುತ್ತಲೇ ಇದೆ.

ಸಕಾಲಕ್ಕೆ ಚಿಕಿತ್ಸೆ ಸಿಗಲಿಲ್ಲ ಎಂದು ವೈದ್ಯರ ಅಥವಾ ಸಿಬ್ಬಂದಿ ಮೇಲೆ ರೋಗಿಗಳ ಸಂಬಂಧಿಕರು ಜಗಳಕ್ಕೆ ಬರುವುದು ಹೆಚ್ಚಾಗುತ್ತಿವೆ. ಇವುಗಳಲ್ಲದೇ ಇತ್ತೀಚೆಗೆ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚಾದ ಹಿನ್ನೆಲೆ ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳು ಈ ರೀತಿ ಪೊಲೀಸ್‌ ಠಾಣೆಯನ್ನು ಇಲಾಖೆಗೆ ಮನವಿ ಮಾಡಿ ಪಡೆಯುತ್ತಿವೆ.

ಮೆಟ್ರೋ ಕಾಮಗಾರಿ ಬಳಿಕ ಜಯದೇವದಲ್ಲಿ ಠಾಣೆ: ನಿಮ್ಹಾನ್ಸ್‌ ಹಾಗೂ ಕಿದ್ವಾಯಿ ಗಂಥಿ ಸಂಸ್ಥೆಯಂತೆಯೇ ಜಯದೇವ ಹೃದ್ರೋಗ ಸಂಶೋಧನ ಸಂಸ್ಥೆಯಲ್ಲೂ ಹೊರ ಪೊಲೀಸ್‌ ಠಾಣೆ ನಿರ್ಮಿಸಲು ಇಲಾಖೆ ಸಭೆಯಲ್ಲಿ ತಿಳಿಸಲಾಗಿದೆ. “ಜಯದೇವ ಹೃದ್ರೋಗ ಸಂಶೋಧ ಸಂಸ್ಥೆಗೂ ಹೊರ ಪೊಲೀಸ್‌ ಠಾಣೆ ಅಗತ್ಯವಿದ್ದು, ಆಸ್ಪತ್ರೆ ಸುತ್ತ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸದ್ಯ ಹೊರ ಪೊಲೀಸ್‌ ಠಾಣೆ ಕಟ್ಟಡ ನಿರ್ಮಿಸಲಾಗುತ್ತಿಲ್ಲ. ಕಾಮಗಾರಿ ಮುಕ್ತಾಯವಾದ ಬಳಿಕ ಅಗತ್ಯವಾಗಿ ನಮ್ಮ ಆಸ್ಫತ್ರೆ ಆವರಣದಲ್ಲೂ ಠಾಣೆ ತೆಲೆ ಎತ್ತಲಿದೆ’ ಎಂದು ಜಯದೇವ ನಿರ್ದೇಶಕ ಸಿ.ಎನ್‌.ಮಂಜುನಾಥ್‌ ತಿಳಿಸಿದರು.

ಎಂಟು ಮಂದಿ ಸಿಬ್ಬಂದಿ ನೇಮಕ: ನಿಮಾನ್ಸ್‌ನಲ್ಲಿ ಹೊರ ರೋಗಿಗಳ ಘಟಕದ ಬಳಿ ಹಾಗೂ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಆವರಣದ ಮುಂಭಾಗದ ಡ್ರಗ್‌ ಫೌಂಡೇಷನ್‌ ಒಳಗಡೆಯೇ ಸೂಕ್ತ ಕಟ್ಟಡ ವ್ಯವಸ್ಥೆ ಮಾಡಲಾಗುತ್ತಿದೆ. ಈ ಪೊಲೀಸ್‌ ಹೊರ ಠಾಣೆಯಲ್ಲಿ 8 ಸಿಬ್ಬಂದಿ ನೇಮಕವಾಗಲಿದ್ದು, ಎರಡು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಒಂದು ಪಾಳಿಯಲ್ಲಿ ಒಬ್ಬ ಮುಖ್ಯ ಪೇದೆ, 4 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಪೊಲೀಸ್‌ ಔಟ್‌ಪೋಸ್ಟ್‌ ಸ್ಥಾಪನೆಗೆ ಆಸ್ಪತ್ರೆಗಳಿಂದಲೇ ಮನವಿ ಬಂದಿತ್ತು. ಇದಕ್ಕೆ ಇಲಾಖೆ ಒಪ್ಪಿಗೆ ಸೂಚಿಸಿ ನಿಮ್ಹಾನ್ಸ್‌ ಹಾಗೂ ಕಿದ್ವಾಯಿ ಆಸ್ಪತ್ರೆಗೆ ಹೊರ ಠಾಣೆ ಮುಂಜೂರು ಮಾಡಿದೆ. ಆಸ್ಪತ್ರೆಯಿಂದ ಸೂಕ್ತ ಸ್ಥಳಾವಕಾಶ ದೊರೆತ ನಂತರ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
-ಎಚ್‌.ಶ್ರೀನಿವಾಸ್‌, ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರು

ಭದ್ರತೆ ದೃಷ್ಟಿಯಿಂದ ಆಸ್ಪತ್ರೆಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸುವ ಅವಶ್ಯಕತೆ ಹೆಚ್ಚಿತ್ತು. ಇದಕ್ಕಾಗಿ ಪೊಲೀಸ್‌ ಇಲಾಖೆಗೆ ಮನವಿ ಮಾಡಲಾಗಿತ್ತು. ಸದ್ಯ ಹೊರ ಠಾಣೆಗೆ ಅನುಮತಿ ದೊರೆತಿದ್ದು, ಆಸ್ಪತ್ರೆ ಆವರಣದಲ್ಲಿ ಸೂಕ್ತ ಸ್ಥಳ, ಮೂಲ ಸೌಕರ್ಯ ವ್ಯವಸ್ಥೆ ಮಾಡಲಾಗುತ್ತಿದೆ.
-ಡಾ.ಸಿ.ರಾಮಚಂದ್ರ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕರು

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next