ಕಾಳಗಿ: ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಮತ್ತು ಸಮಾಜಮುಖೀಯಾಗಿ ಕೆಲಸ ಮಾಡಬೇಕಿದೆ. ಅದಕ್ಕೆ ಜನಸಮುದಾಯ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಪಿಎಸ್‌ಐ ಹುಲಿಯಪ್ಪ ಗೌಡಗೊಂಡ ಹೇಳಿದರು.
ತಾಲೂಕಿನ ವಟವಟಿ ಗ್ರಾಮದಲ್ಲಿ ಕಾಳಗಿ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ನಿಮ್ಮ ಮನೆ ಬಾಗಿಲಿಗೆ ಪೊಲೀಸ್ ಗ್ರಾಮ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸರೆಂದರೆ ನಿಮ್ಮ ಸಂರಕ್ಷಣೆ ಮಾಡುವವರು. ಜನರು ಮತ್ತು ಪೊಲೀಸರು ಒಂದಾಗಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದರು.
ಪ್ರತಿಯೊಬ್ಬರು ಠಾಣೆಗೆ ಬಂದು ಸಮಸ್ಯೆ ಹೇಳಲು ಆಗುವುದಿಲ್ಲ. ಆದ್ದರಿಂದ ನಾವೇ ನಿಮ್ಮ ಊರಿಗೆ ಬಂದು ಸಮಸ್ಯೆ ಆಲಿಸುತ್ತೇವೆ. ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳಿ ಎಂದು ಹೇಳಿದರು.
ಗ್ರಾಮಗಳ ಸಮಸ್ಯೆ ಆಲಿಸಲೆಂದು ಪೊಲೀಸ್ ಇಲಾಖೆ ಗ್ರಾಮಸಭೆ ಆಯೋಜಿಸುತ್ತಿದೆ. ಜನರೊಂದಿಗೆ ಬೆರೆತು ಜನರ ಸಮಸ್ಯೆ ಗುರುತಿಸಿ ಸಕಾಲದಲ್ಲಿ ಪರಿಹಾರಕ್ಕೆ ಮುಂದಾಗುವುದೇ ಜನಸ್ನೇಹಿ ಪೊಲೀಸ್ ಉದ್ದೇಶ ಎಂದರು.
ಗ್ರಾಪಂ ಸದಸ್ಯ ಮಲ್ಲಿನಾಥ ನಾಗೂರ, ಶ್ರೀಮಂತ ನೂಲಕರ, ದಿಲೀಪ ಭಜಂತ್ರಿ, ಅರಣಕುಮಾರ ಹರಸೂರಕರ್, ಸೂರ್ಯಕಾಂತ ನೂಲಕರ, ಪೊಲೀಸ್ ಸಿಬ್ಬಂ ದಿ ಬಸಪ್ಪ, ಮಂಜುನಾಥ ಮತ್ತಿತರರು ಇದ್ದರು.