Advertisement

ಪೊಲೀಸರಿಗೆ ಸಮಾಜದ ನೈತಿಕ ಬೆಂಬಲ ಅಗತ್ಯ

09:39 PM Apr 02, 2019 | Team Udayavani |

ಚಿಕ್ಕಬಳ್ಳಾಪುರ: ಸಮಾಜದ ಶಾಂತಿ ಸುರಕ್ಷತೆಗೆ ಹಗಲಿರುಳು ಕಾರ್ಯನಿರ್ವಹಿಸುವ ಪೊಲೀಸರಿಗೆ ಸಮಾಜದ ನೈತಿಕ ಬೆಂಬಲ, ಸಹಕಾರ ಅಗತ್ಯವಾಗಿದ್ದು, ದೇಶದಲ್ಲಿ ಗಡಿ ಕಾಯುವ ಯೋಧರಷ್ಟೇ ದೇಶದೊಳಗೆ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರ ಕಾರ್ಯ ಅತ್ಯಂತ ಪವಿತ್ರವಾದದು ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ತಿಳಿಸಿದರು.

Advertisement

ನಗರದ ಹೊರ ಅಣಕನೂರು ಸಮೀಪದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಆವರಣದ ಪೊಲೀಸ್‌ ಕವಾಯಿತು ಮೈದಾನದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ ರಾಜ್ಯ ಪೊಲೀಸ್‌ ಧ್ವಜ ದಿನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಎಚ್ಚರಿಕೆ ಅವಶ್ಯ: ತನ್ನ ಪತ್ನಿಯೂ ಐಪಿಎಸ್‌ ಅಧಿಕಾರಿಯೆಂದು ತಮ್ಮ ಭಾಷಣ ಆರಂಭಿಸಿದ ಅನಿರುದ್ಧ್ ಶ್ರವಣ್‌, ಪೊಲೀಸರು ಯಾವ ರೀತಿಯಲ್ಲಿ ಒತ್ತಡದಲ್ಲಿ ಕೆಲಸ ಮಾಡುತ್ತಾರೆಂಬುದು ತನಗೆ ಚೆನ್ನಾಗಿ ಗೊತ್ತಿದೆ. ಕುಟುಂಬ, ಆರೋಗ್ಯ ಲೆಕ್ಕಿಸದೇ ಪೊಲೀಸರು ದಿನದ 24 ಗಂಟೆಯೂ ಸಮಾಜದ ಶಾಂತಿ ನೆಮ್ಮದಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸದಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ಸುವ್ಯವಸ್ಥತೆ ಕಾಪಾಡಿ: ಪೊಲೀಸರಿಗೆ ವೈಯಕ್ತಿಕ ಜೀವನ ಎನ್ನುವುದೇ ಅಪರೂಪ. ಹಬ್ಬ ಹರಿದಿನಗಳ ಸಂಭ್ರಮ ಇರುವುದಿಲ್ಲ. ಯುಗಾದಿ, ದೀಪಾವಳಿ, ಗಣೇಶ ಚತುರ್ಥಿ ಹೀಗೆ ಯಾವುದೇ ಹಬ್ಬ ಇರಲಿ. ಪೊಲೀಸರಿಗೆ ಸಂಭ್ರಮಕ್ಕಿಂತ ಕೆಲಸದ ಒತ್ತಡವೇ ಹೆಚ್ಚು. ದೇಶದಲ್ಲಿ ಚುನಾವಣೆಗಳ ವೇಳೆ ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿ ಸುವ್ಯವಸ್ಥೆಯಿಂದ ನಡೆಯಲು ಪೊಲೀಸ್‌ ಇಲಾಖೆ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

ಹೊಣೆ ಹೊತ್ತುಕೊಳ್ಳಿ: ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಸಶಸ್ತ್ರ ಸಹಾಯಕ ಪೊಲೀಸ್‌ ಉಪ ನಿರೀಕ್ಷಕರಾದ ಪ್ರತಾಪ್‌ ಕುಮಾರ್‌, ಸದಾ ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತು ಕೆಲಸ ಮಾಡುವ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಾಕಷ್ಟು ಏಳುಬೀಳುಗಳನ್ನು ಎದುರಿಸಬೇಕಾಗುತ್ತದೆ ಎಂದರು.

Advertisement

ತಾನು ಕಾಡುಗಳ್ಳ ವೀರಪ್ಪನ್‌ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ಸರ್ಕಾರದಿಂದ 1.80 ಲಕ್ಷ ರೂ., ನಗದು ಬಹುಮಾನ ಪಡೆದಿದ್ದೇನೆ. ಕಾನೂನು ಹಾಗೂ ಸುವ್ಯವಸ್ಥೆ ವಿಚಾರದಲ್ಲಿ ಪೊಲೀಸರು ಸದಾ ಎಚ್ಚರಿಕೆಯಿಂದ ಕರ್ತವ್ಯ ಪ್ರಜ್ಞೆ ಮೆರೆಯಬೇಕೆಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು ಮಾತನಾಡಿ, ಪೊಲೀಸ್‌ ಧ್ವಜ ಮಾರಾಟದಲ್ಲಿ ಬರುವ ಹಣದಲ್ಲಿ ಪೊಲೀಸರ ಕ್ಷೇಮಾಭಿವೃದ್ಧಿ ಹಾಗೂ ನಿವೃತ್ತ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಕಲ್ಯಾಣಕ್ಕೆ ಬಳಸಲಾಗುವುದು ಎಂದರು.

ನಿವೃತ್ತ ಅಧಿಕಾರಿಗಳಿಗೆ ಸನ್ಮಾನ: ಪೊಲೀಸ್‌ ಧ್ವಜ ದಿನದಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಚಿಕ್ಕಬಳ್ಳಾಪುರದ ಡಿಎಆರ್‌ ಆರ್‌ಎಸ್‌ಐ ವೆಂಕಟೇಶಯ್ಯ, ಎಆರ್‌ಎಸ್‌ಐನ ಪ್ರತಾಪ್‌ ಕುಮಾರ್‌, ಚಿಕ್ಕಬಳ್ಳಾಪುರ ನಗರ ಠಾಣೆ ಎಎಸ್‌ಐ ಕೆ.ಜಗ್ನನಾಥ ಮತ್ತಿತರರನ್ನು ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

ಜಿಪಂ ಸಿಇಒ ಗುರುದತ್ತ ಹೆಗಡೆ, ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್‌ಪಿ ಪ್ರಭುಶಂಕರ್‌, ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಶ್ರೀನಿವಾಸ್‌, ಚಿಕ್ಕಬಳ್ಳಾಪುರ ಆರಕ್ಷಕ ವೃತ್ತ ನಿರೀಕ್ಷಕ ಸುದರ್ಶನ್‌, ಚಿಕ್ಕಬಳ್ಳಾಪುರ-ಚಿಂತಾಮಣಿ ಉಪ ವಿಭಾಗದ ಪೊಲೀಸ್‌ ಅಧಿಕಾರಿಗಳು, ನಿವೃತ್ತ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಿರುವ ಪೊಲೀಸ್‌ ಇಲಾಖೆಗೆ ಜಿಲ್ಲಾಡಳಿತದಿಂದ ಬೇಕಾದ ಅಗತ್ಯ ಸಹಕಾರ, ಬೆಂಬಲ ಕೋರಿದರೆ, ಜಿಲ್ಲಾಡಳಿತ ಒದಗಿಸಲು ಸದಾ ಸಿದ್ಧವಿದೆ. ಅಲ್ಲದೇ, ಸಮಾಜದ ರಕ್ಷಣೆಗೆ ನಿಂತಿರುವ ಪೊಲೀಸ್‌ ಇಲಾಖೆಗೆ ಜಿಲ್ಲೆಯ ಜನತೆಯೂ ಅಗತ್ಯ ಸಹಕಾರ ನೀಡಬೇಕು.
-ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next