ಹುಬ್ಬಳ್ಳಿ: ಪೊಲೀಸರು ತಮ್ಮ ಆರೋಗ್ಯ ಉತ್ತಮವಾಗಿ ಕಾಯ್ದುಕೊಂಡರೆ ಮಾತ್ರ ಜನಸಾಮಾನ್ಯರ ಸೇವೆ ಮಾಡಲು ಹಾಗೂ ತಮ್ಮ ವೈಯಕ್ತಿಕ ಜೀವನ ಸುಂದರವಾಗಿಸಿಕೊಳ್ಳಲು ಸಾಧ್ಯವೆಂದು ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಎಂ. ಅಡಿಗ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ಹೊಸ ಸಶಸ್ತ್ರ ಮೀಸಲು ಪಡೆಯ(ಸಿಎಆರ್) ಕವಾಯತು ಮೈದಾನದಲ್ಲಿ ಹು-ಧಾ ಪೊಲೀಸ್ ಆಯುಕ್ತಾಲಯ ಘಟಕದಿಂದ ಮಂಗಳವಾರದಿಂದ ಮೂರು ದಿನಗಳ ಕಾಲ ಆಯೋಜಿಸಲಾದ ವಾರ್ಷಿಕ ಕ್ರೀಡಾಕೂಟ-2021ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆ ಭೌತಿಕವಾಗಿ, ಮಾನಸಿಕವಾಗಿ ಬೆಳವಣಿಗೆ ಮಾಡುತ್ತದೆ. ಜತೆಗೆ ಆರೋಗ್ಯ ವೃದ್ಧಿಯಾಗುತ್ತದೆ.
ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ನಾವೆಲ್ಲ ಕ್ರೀಡಾಪಟುಗಳು ಎಂಬ ಭಾವನೆ ಮೂಡುತ್ತದೆ. ಕ್ರೀಡಾಪಟುಗಳು ಯಾವುದೇ ಜಾತಿ, ಧರ್ಮ, ಮತ, ದೇಶ, ಭಾಷೆ, ಆಸೆಗಳ ಅಂತರವಿಲ್ಲದೆ ಬೆಳೆಯುತ್ತಾರೆ. ಇಂತಹ ಬೆಳವಣಿಗೆಗೆ ಕ್ರೀಡೆಗಳು ಅವಶ್ಯ. ಅದಕ್ಕೆ ಸತತ ಪ್ರಯತ್ನ, ಏಕಾಗ್ರತೆಯಿಂದ ಕೆಲಸ ಮಾಡಿದಾಗ ಯಶಸ್ಸು ಕಾಣಲು, ಉತ್ತಮ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬರು ವಯೋಮಾನಕ್ಕೆ ತಕ್ಕಂತೆ ದೈಹಿಕ ಚಟುವಟಿಕೆ ಮಾಡಬೇಕು. ಸದೃಢ ನಾಗರಿಕರೇ ಬಲಿಷ್ಠ ದೇಶದ ನಿರ್ಮಾತೃಗಳು. ಕ್ರೀಡೆಯಲ್ಲಿ ನೀತಿ-ನಿಯಮಗಳ ಪಾಲನೆ ಮುಖ್ಯ. ಹಾಗೆ ನಿತ್ಯ ಜೀವನದಲ್ಲಿ ಎಲ್ಲರೂ ನಿಯಮಗಳ ಪಾಲಿಸಿದರೆ ಸಮಾಜ ಸುಭೀಕ್ಷವಾಗಿರುತ್ತದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ದೈಹಿಕ ಚಟುವಟಿಕೆ ಅಗತ್ಯ. ಜತೆಗೆ ಬೌದ್ಧಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಇಲಾಖೆಯಲ್ಲಿ ಕ್ರೀಡೆಗಳನ್ನು ಆಡಲು ಅವಕಾಶ ನೀಡಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪೊಲೀಸ್ ಆಯುಕ್ತ ಲಾಭೂ ರಾಮ ಪ್ರಾಸ್ತಾವಿಕ ಮಾತನಾಡಿ, ಪೊಲೀಸರು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರಬೇಕು. ಪ್ರತಿದಿನ ತಪ್ಪದೆ ವ್ಯಾಯಾಮ, ಯೋಗ, ಕ್ರೀಡೆಗಳಲ್ಲಿ ತೊಡಗಬೇಕಕು ಎಂದರು.
ಗಣ್ಯರು, ಪೊಲೀಸ್ ಅಧಿಕಾರಿಗಳು ಪಾರಿವಾಳ ಹಾಗೂ ತ್ರಿವರ್ಣ ಬಣ್ಣದ ಬಲೂನ್‌ಗಳನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. 11 ವರ್ಷಗಳಿಂದ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪುರಸ್ಕೃತ ಸಿಎಆರ್‌ನ ಈರಣ್ಣ ದೇಸಾಯಿ ಕ್ರೀಡಾಜ್ಯೋತಿ ತೆಗೆದುಕೊಂಡು ಬಂದು ಗಣ್ಯರಿಗೆ ನೀಡುವ ಮೂಲಕ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಆರು ತಂಡಗಳಿಂದ ಪಥಸಂಚಲನ ನಡೆಯಿತು.
ಸಿಎಆರ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಮರೋಳ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿ ಸಿದರು. ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಆರ್.ಬಿ.ಬಸರಗಿ, ಎಸಿಪಿಗಳು, ಇನ್ಸ್‌ಪೆಕ್ಟರ್‌ಗಳು, ಪಿಎಸ್ ಐಗಳು, ಪೊಲೀಸರು, ಸಿಬ್ಬಂದಿ ಇದ್ದರು. ಇನ್ಸ್‌ಪೆಕ್ಟರ್‌ಗಳಾದ ಜೆ.ಎಂ. ಕಾಲಿಮಿರ್ಚಿ, ಜಗದೀಶ ಹಂಚಿನಾಳ ನಿರೂಪಿಸಿದರು. ಸಿಎಆರ್ ಡಿಸಿಪಿ ಎಸ್.ವಿ. ಯಾದವ ವಂದಿಸಿದರು.