ನವದೆಹಲಿ:ದೆಹಲಿ ಪೊಲೀಸರ ಕಾರ್ಯಾಚರಣೆಯಿಂದ ಕುಖ್ಯಾತ ಟೆವಾಟಿಯಾ ಗ್ಯಾಂಗ್ ನ ಗ್ಯಾಂಗ್ ಸ್ಟರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ವರದಿ ತಿಳಿಸಿದೆ.
ದಕ್ಷಿಣ ದೆಹಲಿಯಲ್ಲಿ ಸುಲಿಗೆ, 12ಕ್ಕೂ ಅಧಿಕ ಕೊಲೆ, ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಗ್ಯಾಂಗ್ ಸ್ಟರ್ ಪ್ರಿನ್ಸ್ ಟೆವಾಟಿಯಾನ ಎಡ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಮುಂಜಾನೆ ದೆಹಲಿಯ ದ್ವಾರಕಾ ಮೆಟ್ರೋ ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ. ಸಹಾಯಕ ಪೊಲೀಸ್ ಕಮೀಷನರ್ (ಎಸಿಪಿ) ಲಲಿತ್ ಮೋಹನ್ ಮತ್ತು ಎಸಿಪಿ ಹೃದಯ ಭೂಷಣ್ ಅವರ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ಅಧಿಕಾರ ತಂಡ ಈ ಕಾರ್ಯಾಚರಣೆ ನಡೆಸಿರುವುದಾಗಿ ವರದಿ ವಿವರಿಸಿದೆ.
ಪೊಲೀಸ್ ತಂಡ ಮತ್ತು ಗ್ಯಾಂಗ್ ಸ್ಟರ್ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಬಳಿಕ ಟೆವಾಟಿಯಾನ ಎಡ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಟೆವಾಟಿಯಾ ಸಹಚರ ಪ್ರಮೋದ್ ಪರಾರಿಯಾಗಿರುವುದಾಗಿ ವರದಿ ತಿಳಿಸಿದೆ.
ಪೊಲೀಸರು ಗ್ಯಾಂಗ್ ಸ್ಟರ್ ನ ಕಾರು ಹಾಗೂ ಅಕ್ರಮ ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳು, ಮೂರು ಮೊಬೈಲ್ ಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.