ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಬ್ಯಾನರ್, ಬಂಟಿಂಗ್ಸ್, ಕಟೌಟ್ ಹಾಗೂ ಪೋಸ್ಟರ್ ಹಚ್ಚಬಾರದು. ಒಂದೇ ವೇಳೆ ಹಚ್ಚಿದರೆ ಗುತ್ತಿಗೆದಾರರು, ಮುದ್ರಣ ಮಾಲೀಕರು ಹಾಗೂ ಮುದ್ರಣ ಮಾಡಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ನಡೆದ ಧಾರ್ಮಿಕ ಮುಖಂಡರು, ಬ್ಯಾನರ್ ಮತ್ತು ಬಂಟಿಂಗ್ಸ್ ಮುದ್ರಣ ಮಾಲೀಕರು ಹಾಗೂ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಕಟ್ಟುವಂತಹ ಗುತ್ತಿಗೆದಾರರ ಸಭೆಯಲ್ಲಿ ಅವರು ಮಾತನಾಡಿದರು. ನಗರದ ವಿವಿಧ ವೃತ್ತಗಳಲ್ಲಿ ಹಬ್ಬ-ಹರಿದಿನಗಳು, ಜನ್ಮದಿನಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಮುಖಂಡರು ಟ್ರಾಫಿಕ್ ಸಿಗ್ನಲ್ ವೃತ್ತಗಳಲ್ಲಿ ದೊಡ್ಡ ಪ್ರಮಾಣದ ಬ್ಯಾನರ್, ಕಟೌಟ್‌ಗಳನ್ನು ಅಳವಡಿಸುತ್ತಿದ್ದಾರೆ. ಇದು ಸಿಸಿ ಕ್ಯಾಮರಾ, ಸಿಗ್ನಲ್ ದೀಪಗಳಿಗೆ ಅಡ್ಡವಾಗಿ ಸುಗಮ ಸಂಚಾರಕ್ಕೆ ತೊಡಕಾಗುತ್ತಿವೆ ಎಂದರು.
ಇದರಿಂದಾಗಿ ಟ್ರಾಫಿಕ್ ಸಿಗ್ನಲ್ ದೀಪಗಳು ವಾಹನ ಸವಾರರಿಗೆ ಗೋಚರಿಸದೇ ಲಘು ಅಪಘಾತಗಳುಹಾಗೂ ಮಾರಣಾಂತಿಕ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಅನೇಕ ಬಾರಿ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಕಟ್ಟುವಂತಹ ಗುತ್ತಿಗೆದಾರರಿಗೆ ಮೌಖೀಕ ಎಚ್ಚರಿಕೆ ನೀಡಿದರೂ ಅವರು ಅದೇ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇನ್ನು ಮುಂದೆ ಹಾಗೆ ಮಾಡಿದರೆ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಕಟ್ಟುವಂತಹ ಗುತ್ತಿಗೆದಾರರನ್ನು, ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಮುದ್ರಣ ಮಾಡುವ ಮಾಲೀಕರನ್ನು ಹಾಗೂ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಮುದ್ರಣ ಮಾಡಿಸಿರುತ್ತಾರೋ ಅವರನ್ನು ಪ್ರಕರಣದಲ್ಲಿ ಸೇರಿಸಲಾಗುವುದು. ಅದೇ ರೀತಿ ಸರ್ಕಾರಿ ಸ್ವಾಮ್ಯದ ಆಸ್ತಿ ವಿರೋಪಗೊಳಿಸಿದ ಪ್ರಯುಕ್ತ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ ,ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಗಣ್ಯರು ಸಭೆಯಲ್ಲಿದ್ದರು.
ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಅಳವಡಿಸಲು ಅನುಮತಿ ನೀಡುವ ಸಂದರ್ಭದಲ್ಲಿ ಸಿಸಿ ಕ್ಯಾಮರಾ, ಸಿಗ್ನಲ್ ದೀಪಕ್ಕೆ ಅಡ್ಡಿಯಾಗದಂತೆ ಅಳವಡಿಸುವ ಷರತ್ತಿನೊಂದಿಗೆ ಅನುಮತಿ ನೀಡಲಾಗುವುದು. ಇದನ್ನು ಉಲ್ಲಂಘಿಸಿದವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. –
ಹನುಮಂತರಾಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ